ಕೆಫೆ ಬಾಂಬ್‌ ಸ್ಫೋಟಕ್ಕೆ 3 ತಿಂಗಳು ಸ್ಕೆಚ್‌!

| Published : Apr 14 2024, 01:55 AM IST / Updated: Apr 14 2024, 05:50 AM IST

ಸಾರಾಂಶ

ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಮುನ್ನ ಕೆಲ ದಿನಗಳ ಕಾಲ ಬೆಂಗಳೂರಿನ ತಮ್ಮ ಸಹಚರನ ಮನೆಯಲ್ಲೇ ಉಳಿದು ‘ಶಿವಮೊಗ್ಗ ಐಸಿಸ್‌ ಮಾಡ್ಯೂಲ್‌’ನ ಇಬ್ಬರು ಶಂಕಿತ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

 ಬೆಂಗಳೂರು:  ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಮುನ್ನ ಕೆಲ ದಿನಗಳ ಕಾಲ ಬೆಂಗಳೂರಿನ ತಮ್ಮ ಸಹಚರನ ಮನೆಯಲ್ಲೇ ಉಳಿದು ‘ಶಿವಮೊಗ್ಗ ಐಸಿಸ್‌ ಮಾಡ್ಯೂಲ್‌’ನ ಇಬ್ಬರು ಶಂಕಿತ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಇದೇ ಪ್ರಕರಣದಲ್ಲಿ ಶಂಕಿತ ಉಗ್ರರಿಗೆ ಸಹಕಾರ ನೀಡಿದ ಆರೋಪದ ಮೇಲೆ ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಳಸದ ಮುಜಾಮಿಲ್ ಷರೀಫ್ ಬಂಧಿತನಾಗಿದ್ದಾನೆ. ಆತ ಬೆಂಗಳೂರಿನ ಬಸವೇಶ್ವರ ನಗರದ ಮನೆಯಲ್ಲಿ ನೆಲೆಸಿದ್ದ. ಆ ಮನೆಯಲ್ಲೇ ಅವನ ಜೊತೆಗೆ ಕೆಫೆ ಸ್ಫೋಟದ ಬಾಂಬರ್ ತೀರ್ಥಹಳ್ಳಿ ತಾಲೂಕಿನ ಮುಸಾವೀರ್ ಹುಸೇನ್ ಶಾಜಿಬ್ ಹಾಗೂ ಮಾಸ್ಟರ್ ಮೈಂಡ್‌ ಅಬ್ದುಲ್ ಮತೀನ್ ತಾಹ ಉಳಿದಿದ್ದರು.

ಕೆಫೆ ಸ್ಫೋಟಕ್ಕೂ ಮುನ್ನ ಮಂಗಳೂರಿನ ಪ್ರಮುಖ ಹಿಂದೂ ದೇವಾಲಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಮತೀನ್ ಹಾಗೂ ಮುಸಾವೀರ್ ಸಂಚು ರೂಪಿಸಿದ್ದರು. ಆದರೆ ಪೂರ್ವಯೋಜನೆಯಂತೆ ದೇವಾಲಯಕ್ಕೆ ಬಾಂಬ್ ಸಾಗಿಸುವ ಮುನ್ನವೇ ಆಟೋದಲ್ಲಿ ಕುಕ್ಕರ್ ಬಾಂಬ್‌ ಸ್ಫೋಟಗೊಂಡು ಸಂಚು ವಿಫಲವಾಗಿತ್ತು. ಈ ಘಟನೆಯಲ್ಲಿ ಮತೀನ್‌ನ ಮತ್ತೊಬ್ಬ ಸಹಚರ ಶಂಕಿತ ಉಗ್ರ ಶಾರೀಕ್ ಗಾಯಗೊಂಡಿದ್ದ. ಹೀಗಾಗಿ ತಮ್ಮ ಹಿಂಬಾಲಕರನ್ನು ಬಳಸಿಕೊಳ್ಳದೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ರಕ್ತಪಾತ ನಡೆಸಿ ಜಗತ್ತಿನ ಗಮನ ಸೆಳೆಯಲು ತಾವೇ ಖುದ್ದಾಗಿ ಮತೀನ್ ಹಾಗೂ ಮುಸಾವೀರ್ ಫೀಲ್ಡ್‌ಗೆ ಇಳಿದಿದ್ದರು.

ಇದಕ್ಕಾಗಿ 2023ರ ಅಕ್ಟೋಬರ್‌ನಲ್ಲಿ ಬೆಂಗಳೂರಿಗೆ ಬಂದು ಡಿಸೆಂಬರ್‌ವರೆಗೆ ಮುಜಾಮಿಲ್ ಮನೆಯಲ್ಲೇ ಮತೀನ್‌ ಹಾಗೂ ಮುಸಾವೀರ್ ನೆಲೆಸಿದ್ದರು. ಆ ವೇಳೆ ಬೆಂಗಳೂರಿನ ಜನಸಂದಣಿಯ ಪ್ರದೇಶಗಳಿಗೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದ ಶಂಕಿತ ಉಗ್ರರು, ಕೊನೆಗೆ ಐಟಿ ಕಾರಿಡಾರ್‌ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯನ್ನು ಟಾರ್ಗೆಟ್ ಆಗಿ ಆಯ್ಕೆ ಮಾಡಿದ್ದರು. ಬಳಿಕ ಜನವರಿಯಲ್ಲಿ ಚೆನ್ನೈಗೆ ಹೋಗಿ ಬಾಂಬ್ ಸ್ಫೋಟಕ್ಕೆ ಇಬ್ಬರೂ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಚೆನ್ನೈ ನಗರದ ಮಾಲ್‌ನಲ್ಲೇ ಜನವರಿ ಅಂತ್ಯದಲ್ಲಿ ಮುಸಾವೀರ್ ಹಾಗೂ ಮತೀನ್ ಗಾಲ್ಭ್‌ ಆಟಗಾರನ ಕ್ಯಾಪ್ ಖರೀದಿಸಿದ್ದರು. ಸ್ಫೋಟದ ಸಂಚು ರೂಪಿಸಲು ರಾಮೇಶ್ವರಂ ಕೆಫೆಗೆ ಗ್ರಾಹಕನ ಸೋಗಿನಲ್ಲಿ ಮತೀನ್ ಭೇಟಿ ನೀಡಿ ಕೆಫೆಯ ಭದ್ರತಾ ವ್ಯವಸ್ಥೆ ಕುರಿತು ಸೂಕ್ಷ್ಮವಾಗಿ ಗಮನಿಸಿ ಮಾಹಿತಿ ಸಂಗ್ರಹಿಸಿದ್ದ. ಈತ ರೆಕ್ಕಿ ಮಾಡಿದ ನಂತರವೇ ಕೆಫೆ ಸ್ಫೋಟಕ್ಕೆ ಅಂತಿಮ ರೂಪರೇಷೆ ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ.

ಪೂರ್ವಯೋಜಿತ ಸಂಚಿನಂತೆ ಫೆ.29ರಂದು ರಾತ್ರಿ ತಮಿಳುನಾಡಿನಿಂದ ಬಸ್ಸಿನಲ್ಲಿ ಹೊರಟ ಮುಸಾವೀರ್‌, ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಮರುದಿನ ಅಂದರೆ ಮಾ.1ರಂದು ಬೆಳಗ್ಗೆ ಬಂದಿಳಿದಿದ್ದಾನೆ. ಅಲ್ಲಿಂದ ಬಿಎಂಟಿಸಿ ಬಸ್‌ ಹತ್ತಿ ಕುಂದಲಹಳ್ಳಿ ಕಾಲೋನಿಯ ರಾಮೇಶ್ವರಂ ಕೆಫೆಗೆ ಗ್ರಾಹಕನಂತೆ ತೆರಳಿ ಬಾಂಬ್ ಇಟ್ಟು ಆತ ಕಾಲ್ಕಿತ್ತಿದ್ದಾನೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬಾಂಬ್ ಸ್ಫೋಟಿಸದೆ ಶಂಕಿತ ಉಗ್ರರ ಸಂಚು ವಿಫಲವಾಗಿತ್ತು ಎಂದು ಹೇಳಲಾಗುತ್ತಿದೆ.

ಸ್ಫೋಟದ ಬಗ್ಗೆ ಮತೀನ್ ಮಾಹಿತಿ:

ಕೆಫೆ ಸ್ಫೋಟದ ಬಳಿಕ ಗೊರಗುಂಟೆಪಾಳ್ಯಕ್ಕೆ ತೆರಳಿ ಅಲ್ಲಿಂದ ಬಳ್ಳಾರಿ ಕಡೆಗೆ ಮುಸಾವೀರ್ ಪರಾರಿಯಾಗಿದ್ದ. ಮಾರ್ಗ ಮಧ್ಯೆ ಆತ ಎಲ್ಲೂ ಮೊಬೈಲ್ ಬಳಸಿರಲಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುವ ಕೆಲ ಹೊತ್ತು ನಿದ್ರೆಗೆ ಸಹ ಜಾರಿದ್ದಾನೆ. ತಾನು ಅಂದುಕೊಂಡಂತೆ ಕೆಫೆಯಲ್ಲಿ ಭೀಕರ ಸ್ಫೋಟವಾಗಿ ಅಪಾರ ಪ್ರಮಾಣದ ಸಾವು ನೋವಾಗಿರಬಹುದು ಎಂದು ಭಾವಿಸಿ ಆತ ನಿರಾಳನಾಗಿದ್ದ. ಆದರೆ ಬಳ್ಳಾರಿ ತಲುಪಿದ ನಂತರವೇ ಮುಸಾವೀರ್‌ಗೆ ಸ್ಫೋಟದ ಕುರಿತು ಮತೀನ್ ಮಾಹಿತಿ ನೀಡಿದ್ದಾನೆ. ಆಗಲೇ ಆತನಿಗೆ ತಮ್ಮ ಪ್ಲಾನ್ ವಿಫಲವಾಗಿರುವುದು ಗೊತ್ತಾಗಿದೆ. ಅಷ್ಟರಲ್ಲಿ ತಮ್ಮನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಪೊಲೀಸರು ಬೆನ್ನುಹತ್ತಿದೆ ಎಂಬ ಮಾಹಿತಿ ಬಂದಿದ್ದರಿಂದ ಬಂಧನ ಭೀತಿಯಿಂದ ಕರ್ನಾಟಕದ ಗಡಿ ದಾಟಿ ಹೈದರಾಬಾದ್‌, ಕೇರಳ ಸುತ್ತಾಡಿ, ಕೊನೆಗೆ ಪಶ್ಚಿಮ ಬಂಗಾಳದ ಕೋಲ್ಕತಾ ತಲುಪಿದ್ದಾರೆ. ಈ ಜಾಡು ಹಿಡಿದು ಶಂಕಿತ ಉಗ್ರರನ್ನು ಎನ್‌ಐಎ ಬೇಟೆಯಾಡಿದೆ ಎನ್ನಲಾಗಿದೆ.

ಮುಸಾವೀರ್‌, ಮತೀನ್‌ 10 ದಿನ ಎನ್‌ಐಎ ವಶಕ್ಕೆ

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಸೆರೆಯಾದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಉಗ್ರರನ್ನು 10 ದಿನ ಎನ್‌ಐಎ ವಶಕ್ಕೆ ನೀಡಿ ನ್ಯಾಯಾಲಯವು ಶನಿವಾರ ಆದೇಶಿಸಿದೆ. ನಗರದ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಶಂಕಿತ ಉಗ್ರರಾದ ಮುಸಾವೀರ್ ಹಾಗೂ ಮತೀನ್‌ನನ್ನು ಎನ್‌ಐಎ ಅಧಿಕಾರಿಗಳು ಹಾಜರುಪಡಿಸಿದರು. ಆಗ ಈ ವಿಧ್ವಂಸಕ ಕೃತ್ಯದ ಹಿಂದೆ ಜಾಗತಿಕ ಮಟ್ಟದ ಸಂಘಟನೆಗಳ ಕೈವಾಡವಿರುವ ಶಂಕೆ ಇದೆ. ಹೀಗಾಗಿ ತನಿಖೆ ಸಲುವಾಗಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡುವಂತೆ ಎನ್‌ಐಎ ಪರ ವಕೀಲ ಪ್ರಸನ್ನ ಕುಮಾರ್ ಕೋರಿದರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಲಯವು, ಶಂಕಿತ ಉಗ್ರರನ್ನು 10 ದಿನ ಎನ್‌ಐಎ ವಶಕ್ಕೊಪ್ಪಿಸಿ ಆದೇಶಿಸಿತು.