ಸಾರಾಂಶ
ಶೀಲ ಶಂಕಿಸಿ ತನ್ನ ಎರಡನೇ ಪತ್ನಿಗೆ 11ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಶೀಲ ಶಂಕಿಸಿ ತನ್ನ ಎರಡನೇ ಪತ್ನಿಗೆ 11ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.ಕೆಬ್ಬೆಹಳ್ಳದ ನಿವಾಸಿ ರೇಖಾ (35) ಕೊಲೆಯಾದ ದುರ್ದೈವಿ. ಈ ಹತ್ಯೆ ಬಳಿಕ ಮೃತಳ ಪ್ರಿಯಕರ ಲೋಹಿತಾಶ್ವ ಅಲಿಯಾಸ್ ಲೋಕೇಶ್ ಪರಾರಿಯಾಗಿದ್ದಾನೆ. ಸುಂಕದಟ್ಟೆ ಬಸ್ ನಿಲ್ದಾಣದ ಬಳಿ ರೇಖಾ ಮೇಲೆ ಆತ ಏಕಾಏಕಿ ದಾಳಿ ನಡೆಸಿದ್ದಾನೆ. ಹಲ್ಲೆಗೊಳಗಾಗದ ಆಕೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೊದಲ ಪತಿಯಿಂದ ಪ್ರತ್ಯೇಕವಾಗಿದ್ದ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ರೇಖಾ, ತನ್ನ ಮಕ್ಕಳ ಜತೆ ವಾಸವಾಗಿದ್ದರು. ಹಾಗೆ ತನ್ನ ಪತ್ನಿಯಿಂದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಲೋಹಿತಾಶ್ವ ಸಹ ದೂರವಾಗಿದ್ದ. ಶಿರಾ ನಗರದಲ್ಲಿ ಇಬ್ಬರಿಗೆ ಸ್ನೇಹವಾಗಿದೆ. ಬಳಿಕ ಕಾಲ ಕ್ರಮೇಣ ಅದೂ ಪ್ರೇಮಕ್ಕೆ ತಿರುಗಿದೆ. ಬಳಿಕ ಶಿರಾ ತೊರೆದು ಬೆಂಗಳೂರಿಗೆ ಬಂದು ಲಿವಿಂಗ್ ಟುಗೆದರ್‌ನಲ್ಲಿ ಪ್ರೇಮಿಗಳು ನೆಲೆಸಿದ್ದರು. ಟೆಲಿಕಾಲರ್ ಕಂಪನಿಯಲ್ಲಿ ರೇಖಾ ಕೆಲಸ ಮಾಡುತ್ತಿದ್ದಳು. ಮೂರು ತಿಂಗಳ ಹಿಂದೆ ಇಬ್ಬರು ಎರಡನೇ ವಿವಾಹವಾಗಿದ್ದರು. ಈ ಮದುವೆ ಬಳಿಕ ತನ್ನ ಇಬ್ಬರು ಮಕ್ಕಳ ಪೈಕಿ ಕಿರಿಯ ಮಗಳನ್ನು ತವರು ಮನೆಗೆ ಬಿಟ್ಟು ರೇಖಾ ಓದಿಸುತ್ತಿದ್ದಳು. ಇನ್ನು ಮದುವೆ ನಂತರ ತನ್ನ ಕಂಪನಿಯಲ್ಲಿ ಪತಿಗೆ ಸಹ ಆಕೆ ಕೆಲಸ ಕೊಡಿಸಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.ಇತ್ತೀಚೆಗೆ ತನ್ನ ಪತ್ನಿ ನಡವಳಿಕೆ ಮೇಲೆ ಲೋಹಿತಾಶ್ವನಿಗೆ ಅನುಮಾನ ಮೂಡಿತ್ತು. ಈ ಶಂಕೆ ಹಿನ್ನೆಲೆಯಲ್ಲಿ ಮನೆಯಲ್ಲಿ ಆತ ಗಲಾಟೆ ಮಾಡುತ್ತಿದ್ದ. ಅಂತೆಯೇ ಸೋಮವಾರ ಸಹ ಇಬ್ಬರ ಮಧ್ಯೆ ಜಗಳವು ದುರಂತ ಅಂತ್ಯ ಕಂಡಿದೆ. ಮನೆಯಲ್ಲಿ ಬೆಳಗ್ಗೆ ಜಗಳವಾಗಿದೆ. ಇದಾದ ಬಳಿಕ ಕೆಲಸಕ್ಕೆ ಹೋಗಲು ಸುಂಕದಕಟ್ಟೆ ಬಸ್ ನಿಲ್ದಾಣ ಬಳಿ ತನ್ನ ಹಿರಿಯ ಮಗಳ ಜತೆ ಬಸ್ಸಿಗೆ ಕಾಯುತ್ತ ರೇಖಾ ನಿಂತಿದ್ದರು. ಆಗ ಅಲ್ಲಿಗೆ ಬಂದು ಮತ್ತೆ ಆರೋಪಿ ರಗಳೆ ತೆಗೆದಿದ್ದಾನೆ.
ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಜಗಳ ಬಿಡಿಸಲು ರೇಖಾಳ ಹಿರಿಯ ಮಗಳು ಯತ್ನಿಸಿ ವಿಫಲವಾಗಿದ್ದಾಳೆ. ಈ ವೇಳೆ ಕೋಪಗೊಂಡ ಆರೋಪಿ, ರೇಖಾಳಿಗೆ ಮನಬಂದಂತೆ 11ಕ್ಕೂ ಹೆಚ್ಚಿನ ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ರಕ್ತಸ್ರಾವವಾಗಿ ಆಕೆ ಕೊನೆಯುಸಿರೆಳೆದಿದ್ದಾಳೆ. ಇತ್ತ ಕೊಲೆ ಮಾಡಿ ತನ್ನನ್ನು ಹಿಡಿಯಲು ಬಂದ ಸಾರ್ವಜನಿಕರಿಗೆ ಕಾರು ತೋರಿಸಿ ಆತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.