ಪರಿಚಿತ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ, ಹಲ್ಲೆ ಆರೋಪ: ನಟ ಚರಿತ್‌ ಬಾಳಪ್ಪ ಬಂಧನ

| Published : Dec 28 2024, 12:45 AM IST / Updated: Dec 28 2024, 04:09 AM IST

Fraud couple arrested

ಸಾರಾಂಶ

ಪರಿಚಿತ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ನೀಡಿದ, ಹಲ್ಲೆ ಮಾಡಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಕಿರುತೆರೆ ನಟನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಪರಿಚಿತ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ನೀಡಿದ, ಹಲ್ಲೆ ಮಾಡಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಕಿರುತೆರೆ ನಟನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾರತಹಳ್ಳಿ ಎನ್‌ಜಿಇಎಫ್‌ ಲೇಔಟ್‌ ನಿವಾಸಿ ಚರಿತ್‌ ಬಾಳಪ್ಪ ಅಲಿಯಾಸ್‌ ಧೃವಂತ್‌ ತಳವಾರ್‌ (32) ಬಂಧಿತ ಆರೋಪಿ ನಟ. ಬಿಎಚ್‌ಇಎಲ್‌ ಲೇಔಟ್‌ ನಿವಾಸಿಯಾದ 29 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ದೂರು?:

ಏಳು ವರ್ಷಗಳಿಂದ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆ. 2023ರ ನವೆಂಬರ್‌ನಿಂದ ಕಿರುತೆರೆ ನಟ ಚರಿತ್‌ ಬಾಳಪ್ಪ ಪರಿಚಯವಾಗಿದ್ದರು. ಪರಿಚಯ ಹಾಗೂ ಒಳ್ಳೆಯತನ ದುರುಪಯೋಗ ಮಾಡಿಕೊಂಡು ಪ್ರೀತಿಸುವುದಾಗಿ ಒತ್ತಾಯಿಸುತ್ತಿದ್ದ. ಮಾನಸಿಕ ಹಿಂಸೆ ನೀಡುತ್ತಿದ್ದ. ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಿದ್ದಾನೆ. ದೈಹಿಕ ಸಂಪರ್ಕ ಬೆಳೆಸಲು ಸಹಕರಿಸದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌:

ಚರಿತ್‌ ಬಾಳಪ್ಪಗೆ ಈಗಾಗಲೇ ಬೇರೆ ಮಹಿಳೆ ಜತೆಗೆ ವಿವಾಹವಾಗಿದ್ದು, ವಿಚ್ಛೇದನ ಪಡೆದಿದ್ದಾನೆ. ತಾನು ಮನೆಯಲ್ಲಿ ಒಬ್ಬಳೇ ವಾಸ ಮಾಡುವ ವಿಚಾರ ತಿಳಿದು ತನ್ನ ಸಹಚರರ ಜತೆಗೆ ಮನೆ ಬಳಿ ಬಂದು ಗಲಾಟೆ ಮಾಡಿದ್ದಾನೆ. ತನ್ನ ಜತೆ ದೈಹಿಕ ಸಂಪರ್ಕ ಇರಿಸಿಕೊಳ್ಳಬೇಕು. ಇಲ್ಲವಾದರೆ, ನಿನ್ನ ಮಾನ-ಮರ್ಯಾದೆ ಬೀದಿಗೆ ತರುತ್ತೇನೆ. ನಾನು ಕೇಳಿದಷ್ಟು ಹಣ ಕೊಡಬೇಕು, ಇಲ್ಲವಾದರೆ ನಿನ್ನ ಜತೆಗಿನ ಖಾಸಗಿ ವಿಡಿಯೋ ಮತ್ತು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ. ನಟ-ನಟಿಯರು ಇರುವ ವಾಟ್ಸಾಪ್‌ ಗ್ರೂಪ್‌ಗೆ ಹಾಕುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

ಸುಳ್ಳು ಕೇಸ್‌ ದಾಖಲಿಸುವ ಬೆದರಿಕೆ

ತನಗೆ ದೊಡ್ಡ ವ್ಯಕ್ತಿಗಳು, ರಾಜಕೀಯದವರು, ರೌಡಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಹಣ ಬಲವಿದೆ. ನಿನ್ನ ಮೇಲೆ ಸುಳ್ಳು ಕೇಸು ಹಾಕಿಸಿ ಸಾಯುವವರೆಗೂ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಬೆದರಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಈ ಹಿಂದೆ ಹಲವು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಚರಿತ್‌ ಬಾಳಪ್ಪ ಈ ಹಿಂದೆ ಹಲವು ಹೆಣ್ಣು ಮಕ್ಕಳಿಗೆ ತೊಂದರೆ ನೀಡಿದ್ದಾನೆ. ಹೀಗಾಗಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.