ಹೊರದೇಶಗಳಲ್ಲಿ ಕೆಲಸ ಮಾಡಲು ‘ವೀಸಾ’ ಮಾಡಿಸಿಕೊಡುವುದಾಗಿ 51 ಮಂದಿಗೆ ದಂಪತಿ ₹2.64 ಕೋಟಿ ಟೋಪಿ!

| N/A | Published : Feb 22 2025, 12:47 AM IST / Updated: Feb 22 2025, 04:21 AM IST

ಸಾರಾಂಶ

ಹೊರದೇಶಗಳಲ್ಲಿ ಕೆಲಸ ಮಾಡಲು ‘ವೀಸಾ’ ಮಾಡಿಸಿಕೊಡುವುದಾಗಿ 51 ಮಂದಿಯಿಂದ ಬರೋಬ್ಬರಿ ₹2.64 ಕೋಟಿ ಪಡೆದು ನಕಲಿ ವೀಸಾ ನೀಡಿ ವಂಚಿಸಿದ್ದ ಖತರ್ನಾಕ್‌ ದಂಪತಿಯನ್ನು ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಹೊರದೇಶಗಳಲ್ಲಿ ಕೆಲಸ ಮಾಡಲು ‘ವೀಸಾ’ ಮಾಡಿಸಿಕೊಡುವುದಾಗಿ 51 ಮಂದಿಯಿಂದ ಬರೋಬ್ಬರಿ ₹2.64 ಕೋಟಿ ಪಡೆದು ನಕಲಿ ವೀಸಾ ನೀಡಿ ವಂಚಿಸಿದ್ದ ಖತರ್ನಾಕ್‌ ದಂಪತಿಯನ್ನು ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಲಕನಗರದ ಸಕ್ಲೇನ್‌ ಸುಲ್ತಾನ್‌(34) ಮತ್ತು ಈತನ ಪತ್ನಿ ನಿಖಿತಾ ಸುಲ್ತಾನ್‌(28) ಬಂಧಿತರು. ಆರೋಪಿಗಳಿಂದ ಎರಡು ಐಷಾರಾಮಿ ಕಾರು, ಎರಡು ದ್ವಿಚಕ್ರ ವಾಹನ, ₹66 ಲಕ್ಷ ನಗದು, 24 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ರಾಜಸ್ಥಾನ ಮೂಲದ ಮಗ್‌ ಸಿಂಗ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಬಂಧಿತ ಆರೋಪಿಗಳು ಎರಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ‘ಸುಲ್ತಾನ್‌ ಇಂಟರ್‌ ನ್ಯಾಷನಲ್‌ ಡಾಟ್‌ ಕೋ ಡಾಟ್‌ ಇನ್‌’ ಕಂಪನಿ ಹೆಸರಿನಲ್ಲಿ ಜಪಾನ್‌, ನ್ಯೂಜಿಲ್ಯಾಂಡ್‌, ದಕ್ಷಿಣ ಕೋರಿಯಾ, ಐರ್ಲೆಂಡ್‌, ಫ್ರಾನ್ಸ್‌, ಗಲ್ಫ್‌ ದೇಶಗಳಲ್ಲಿ ಜಾಕಿ, ರೈಡಿಂಗ್‌ ಬಾಯ್ಸ್, ಗ್ರೂಮಿಂಗ್‌, ಫೆರಿ ಸೇರಿದಂತೆ ಇತರೆ ಉದ್ಯೋಗಾವಕಾಶಗಳಿವೆ ಎಂದು ಜಾಹೀರಾತು ಪೋಸ್ಟ್‌ ಹಾಕಿದ್ದರು.

ದೂರುದಾರ ಮಗ್‌ ಸಿಂಗ್‌ ಫೇಸ್‌ಬುಕ್‌ ನೋಡುವಾಗ ಈ ಜಾಹೀರಾತು ಗಮನಿಸಿದ್ದರು. ಇದೇ ಸಮಯಕ್ಕೆ ಅವರ ಇಬ್ಬರು ಸ್ನೇಹಿತರು ವಿದೇಶದಲ್ಲಿ ಕೆಲಸ ಮಾಡಲು ವೀಸಾ ಮಾಡಿಕೊಡುವವರು ಯಾರಾದರೂ ಇದ್ದಲ್ಲಿ ತಿಳಿಸುವಂತೆ ಕೇಳಿದ್ದರು. ಹೀಗಾಗಿ ಮಗ್‌ ಸಿಂಗ್‌ ಆ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಆರೋಪಿಗಳು ತಮ್ಮ ಕಂಪನಿ ಬೆಂಗಳೂರಿನಲ್ಲಿ ಇದ್ದು, ವಿದೇಶಗಳಲ್ಲಿ ಕೆಲಸ ಮಾಡಲು ವರ್ಕಿಂಗ್‌ ವೀಸಾ ಮಾಡಿಸಿಕೊಡುವುದಾಗಿ ಹೇಳಿದ್ದಾರೆ. ವೀಸಾ ಕೊಡಿಸಲು ತಲಾ ₹8 ಲಕ್ಷ ನೀಡಬೇಕು ಎಂದಿದ್ದಾರೆ.

ಮೊದಲಿಗೆ ಇಬ್ಬರಿಗೆ ವೀಸಾ ಮಾಡಿಸಿಕೊಟ್ಟರು:

ಇದಕ್ಕೆ ಒಪ್ಪಿದ ಮಗ್‌ ಸಿಂಗ್‌, ತಮ್ಮ ಇಬ್ಬರು ಸ್ನೇಹಿತರ ಪಾಸ್‌ಪೋರ್ಟ್‌, ಶೈಕ್ಷಣಿಕ ದಾಖಲಾತಿಗಳನ್ನು ಆರೋಪಿಗಳಿಗೆ ವಾಟ್ಸಾಪ್‌ ಮುಖಾಂತರ ಕಳುಹಿಸಿದ್ದರು. ಈ ವೇಳೆ ಆರೋಪಿಗಳು ಇಬ್ಬರಿಂದ ₹16 ಲಕ್ಷ ಪಡೆದು ಜಪಾನ್‌ ಮತ್ತು ನ್ಯೂಜಿಲ್ಯಾಂಡ್‌ ವೀಸಾ ಮಾಡಿಸಿಕೊಟ್ಟಿದ್ದರು. ಪ್ರಸ್ತುತ ಮಗ್‌ ಸಿಂಗ್‌ ಅವರ ಆ ಇಬ್ಬರು ಸ್ನೇಹಿತರು ಜಪಾನ್‌ ಮತ್ತು ನ್ಯೂಜಿಲೆಂಡ್‌ನಲ್ಲಿ ಹಾರ್ಸ್‌ ರೈಡರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಹೇಳಿದಂತೆ ವೀಸಾ ಮಾಡಿಸಿಕೊಟ್ಟಿದ್ದರಿಂದ ಮಗ್‌ ಸಿಂಗ್‌ ಆರೋಪಿಗಳನ್ನು ನಂಬಿದ್ದರು. ಬಳಿಕ ಮತ್ತೆ ಮೂವರು ಸ್ನೇಹಿತರಿಗೆ ವರ್ಕಿಂಗ್‌ ವೀಸಾ ಮಾಡಿಸಿಕೊಡುವಂತೆ ತಲಾ ₹8 ಲಕ್ಷದಂತೆ ಒಟ್ಟು ₹24 ಲಕ್ಷವನ್ನು ಆರೋಪಿಗಳಿಗೆ ವರ್ಗಾಯಿಸಿದ್ದರು. ತಿಂಗಳು ಕಳೆದರೂ ವೀಸಾ ಮಾಡಿಸಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಎಂಬೆಸ್ಸಿಯಲ್ಲಿ ಬಾಕಿ ಇದ್ದು, ಕೆಲವೇ ದಿನಗಳಲ್ಲಿ ವೀಸಾ ಸಿಗಲಿದೆ ಎಂದು ಆರೋಪಿಗಳು ಹೇಳಿದ್ದರು.

51 ಮಂದಿಯಿಂದ ₹2.64 ಕೋಟಿ ಪಡೆದರು:

ಈ ನಡುವೆ ಮಗ್‌ ಸಿಂಗ್‌ ಅವರು ತಮ್ಮ ಸ್ನೇಹಿತರು, ಸಂಬಂಧಿಕರು ಸೇರಿದಂತೆ 33 ಮಂದಿಗೆ ವೀಸಾ ಮಾಡಿಸಲು ಆರೋಪಿಗಳಿಗೆ ದಾಖಲೆಗಳು ಹಾಗೂ ।₹1.78 ಕೋಟಿ ನೀಡಿದ್ದಾರೆ. ಮಗ್‌ ಸಿಂಗ್‌ ಅವರ ಸ್ನೇಹಿತ ಸಹ 15 ಮಂದಿಗೆ ವೀಸಾ ಮಾಡಿಸಲು ದಾಖಲೆಗಳು ಹಾಗೂ ₹86 ಲಕ್ಷವನ್ನು ಆರೋಪಿಗಳಿಗೆ ನೀಡಿದ್ದಾರೆ. ಅಂದರೆ, ಆರೋಪಿಗಳು ಒಟ್ಟು 51 ಮಂದಿಗೆ ವೀಸಾ ಕೊಡಿಸಲು ತಲಾ ₹8 ಲಕ್ಷದಂತೆ ಒಟ್ಟು ₹2.64 ಕೋಟಿ ಪಡೆದುಕೊಂಡಿದ್ದರು.

ನಕಲಿ ವೀಸಾ ಕಳುಹಿಸಿದರು:

ಆರೋಪಿಗಳು ಮೂರು ತಿಂಗಳ ಹಿಂದೆ ಮಗ್‌ ಸಿಂಗ್‌ ಅವರ ಮೂವರು ಸ್ನೇಹಿತರಿಗೆ ನ್ಯೂಜಿಲೆಂಡ್‌ ವೀಸಾ ನೀಡಿದ್ದರು. ಆನ್‌ಲೈನ್‌ನಲ್ಲಿ ಪರಿಶೀಲನೆ ಮಾಡಿದಾಗ ಆ ವೀಸಾಗಳು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಲು ಮಗ್‌ ಸಿಂಗ್‌ ಕರೆ ಮಾಡಿದಾಗ, ಆರೋಪಿಗಳು ಕರೆ ಸ್ವೀಕರಿಸಿಲ್ಲ. ಬಳಿಕ ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ಆರೋಪಿಗಳು ನೀಡಿದ್ದ ವಿಳಾಸಕ್ಕೆ ತೆರಳಿ ನೋಡಿದಾಗ ಅದು ನಕಲಿ ವಿಳಾಸ ಎಂಬುದು ಗೊತ್ತಾಗಿದೆ. ಹೀಗಾಗಿ ಮಗ್‌ ಸಿಂಗ್‌ ಆರೋಪಿಗಳ ವಿರುದ್ಧ ಸೈಬರ್‌ ಕ್ರೈಂ ಠಾಣೆಗೆ ವಂಚನೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿದೇಶಿ ಜಾಕಿಯಿಂದ ಕಮಿಷನ್‌ ಆಫರ್‌

ಆರೋಪಿ ನಿಖಿತಾ ಸುಲ್ತಾನ್‌ ಈ ಹಿಂದೆ ನಗರದ ರೇಸ್‌ಕೋರ್ಸ್‌ನಲ್ಲಿ ಹಾರ್ಸ್‌ ರೈಡಿಂಗ್‌ ಕಲಿಯುವಾಗ ವಿದೇಶದ ಜಾಕಿಯೊಬ್ಬನ ಪರಿಚಯವಾಗಿತ್ತು. ಈ ವೇಳೆ ಆತ ವಿದೇಶದಲ್ಲಿ ಹಾರ್ಸ್‌ ಜಾಕಿ ಸೇರಿ ಬೇರೆ ಕೆಲಸ ಮಾಡಲು ಆಸಕ್ತರಿರುವ ವ್ಯಕ್ತಿಗಳಿಗೆ ವೀಸಾ ಮಾಡಿಸಿಕೊಡುತ್ತೇನೆ. ಆಸಕ್ತರನ್ನು ಪರಿಚಯಿಸಿದರೆ ಒಂದು ವೀಸಾಗೆ ₹50 ಸಾವಿರ ಕಮಿಷನ್‌ ನೀಡುವುದಾಗಿ ಹೇಳಿದ್ದ. ಅದರಂತೆ ಆರೋಪಿಗಳು ಆರಂಭದಲ್ಲಿ ಇಬ್ಬರಿಗೆ ಈ ವಿದೇಶಿ ಜಾಕಿ ಮುಖಾಂತರ ವೀಸಾ ಮಾಡಿಸಿಕೊಟ್ಟು ₹1 ಲಕ್ಷ ಕಮಿಷನ್‌ ಪಡೆದಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ವಿದೇಶ ಪ್ರವಾಸ, ಐಷಾರಾಮಿ ಜೀವನ!

ಆರೋಪಿಗಳು ಈ ವಂಚನೆ ಹಣದಲ್ಲಿ ದುಬೈ, ಶ್ರೀಲಂಕಾ. ಗೋವಾ, ಊಟಿ ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾರೆ. ಅಂತೆಯೇ ತಿಲಕನಗರದಲ್ಲಿ ₹50 ಲಕ್ಷ ನೀಡಿ ಐಷಾರಾಮಿ ಮನೆಯನ್ನು ಭೋಗ್ಯಕ್ಕೆ ಪಡೆದಿದ್ದಾರೆ. ಎರಡು ಕಾರು, ಎರಡು ದ್ವಿಚಕ್ರ ವಾಹನಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.