ಮೊಬೈಲ್‌ ಕದಿಯುವಾಗ ಪ್ರತಿರೋಧ ಮಾಡಿದವನಿಗೆ ಇಬ್ಬರು ದುಷ್ಕರ್ಮಿಗಳು ಚಾಕು ಇರಿದು ಕೊಲೆ

| N/A | Published : Feb 22 2025, 12:46 AM IST / Updated: Feb 22 2025, 04:23 AM IST

ಸಾರಾಂಶ

ಮೊಬೈಲ್‌ ಕದಿಯಲು ಪ್ರಯತ್ನಿಸುವಾಗ ಎಚ್ಚರಗೊಂಡು ಪ್ರತಿರೋಧವೊಡ್ಡಿದ ವ್ಯಕ್ತಿಗೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಹಾಡಹಗಲೇ ನಡೆದಿದೆ.

 ಬೆಂಗಳೂರು :  ಮೊಬೈಲ್‌ ಕದಿಯಲು ಪ್ರಯತ್ನಿಸುವಾಗ ಎಚ್ಚರಗೊಂಡು ಪ್ರತಿರೋಧವೊಡ್ಡಿದ ವ್ಯಕ್ತಿಗೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಹಾಡಹಗಲೇ ನಡೆದಿದೆ.

ಕಾಮಾಕ್ಷಿಪಾಳ್ಯದ ವೃಷಭಾವತಿನಗರ ನಿವಾಸಿ ಚಂದ್ರ(45) ಹತ್ಯೆಯಾದ ದುರ್ದೈವಿ. ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಟರ್ಮಿನಲ್‌-1ರ 15ನೇ ಪ್ಲಾಟ್‌ಫಾರ್ಮ್‌ನಲ್ಲಿ ಗುರುವಾರ ಮಧ್ಯಾಹ್ಯ ಸುಮಾರು 1.30ಕ್ಕೆ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಉಪ್ಪಾರಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಮೈಸೂರು ಮೂಲದ ಚಂದ್ರ ಹಲವು ವರ್ಷಗಳಿಂದ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದರು. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಗುರುವಾರ ಮಧ್ಯಾಹ್ನ ಮದ್ಯ ಸೇವಿಸಿದ್ದ ಚಂದ್ರ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಟರ್ಮಿನಲ್‌-1ರ 15ನೇ ಪ್ಲಾಟ್‌ ಫಾರ್ಮ್‌ನ ಪ್ರಯಾಣಿಕರು ಕೂರುವ ಆಸನದ ಮೇಲೆ ಮಲಗಿದ್ದರು. ಇದೇ ಸಮಯಕ್ಕೆ ಇಬ್ಬರು ದುಷ್ಕರ್ಮಿಗಳು ಅಲ್ಲಿಗೆ ಬಂದಿದ್ದು, ಚಂದ್ರ ಅವರ ಜೇಬಿನಿಂದ ಮೊಬೈಲ್‌ ಕದಿಯಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಚಂದ್ರ ಎಚ್ಚರಗೊಂಡು ಮೊಬೈಲ್‌ ಬಿಗಿಯಾಗಿ ಹಿಡಿದುಕೊಂಡು ದುಷ್ಕರ್ಮಿಗಳಿಗೆ ಪ್ರತಿರೋಧವೊಡ್ಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಏಕಾಏಕಿ ಚಾಕು ತೆಗೆದು ಚಂದ್ರ ಅವರ ಎದೆ, ಮುಖ, ಹೊಟ್ಟೆಗೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿರುವ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಶೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.