ಸಾರಾಂಶ
ತನ್ನ ಸಹಪಾಠಿಯನ್ನು ಕಾಲೇಜಿನ ಪುರುಷರ ಶೌಚಾಲಯಕ್ಕೆ ಕರೆದೊಯ್ದು ಅತ್ಯಾ*ರ ಎಸಗಿದ ಆರೋಪದ ಮೇರೆಗೆ ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ 7ನೇ ಸೆಮಿಸ್ಟರ್ ವಿದ್ಯಾರ್ಥಿಯೊಬ್ಬನನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ತನ್ನ ಸಹಪಾಠಿಯನ್ನು ಕಾಲೇಜಿನ ಪುರುಷರ ಶೌಚಾಲಯಕ್ಕೆ ಕರೆದೊಯ್ದು ಅತ್ಯಾ*ರ ಎಸಗಿದ ಆರೋಪದ ಮೇರೆಗೆ ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ 7ನೇ ಸೆಮಿಸ್ಟರ್ ವಿದ್ಯಾರ್ಥಿಯೊಬ್ಬನನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೆನ್ನಮ್ಮನಕೆರೆ ಅಚ್ಚುಕಟ್ಟು ನಿವಾಸಿ ಜೀವನ್‌ಗೌಡ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಕಾಲೇಜಿನ ಆರನೇ ಮಹಡಿಯ ಪುರುಷರ ಶೌಚಾಲಯಕ್ಕೆ ಬಲವಂತವಾಗಿ ಎಳೆದೊಯ್ದು ಆರೋಪಿ ಈ ಕೃತ್ಯ ಎಸಗಿದ್ದ. ಈ ಘಟನೆ ಬಗ್ಗೆ ಸಂತ್ರಸ್ತೆ ಪೋಷಕರು ಹನುಮಂತನಗರ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಜೀವನ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಖಾಸಗಿ ಕಂಪನಿಯ ಉದ್ಯೋಗಿ ಪುತ್ರ ಜೀವನ್ ಗೌಡ, ಹನುಮಂತನಗರ ಸಮೀಪದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 7ನೇ ಸೆಮಿಸ್ಟರ್ ಓದುತ್ತಿದ್ದ. ಅದೇ ಕಾಲೇಜಿನಲ್ಲಿ ಬಸವನಗುಡಿ ಸಮೀಪ ನಿವಾಸಿ ಸಂತ್ರಸ್ತೆ ಸಹ ಓದುತ್ತಿದ್ದಳು.
ಆದರೆ ವೈಯಕ್ತಿಕ ಕಾರಣಗಳಿಂದ ಒಂದು ವರ್ಷ ಆಕೆಯ ಬಿಇ ಓದಿಗೆ ಅಡ್ಡಿಯಾಗಿತ್ತು. ಹೀಗಾಗಿ ಅನುತ್ತೀರ್ಣವಾಗಿದ್ದ ವಿಷಯಗಳ ಕುರಿತು ಜೀವನ್‌ನಿಂದ ಆಕೆ ನೋಟ್ಸ್ ಪಡೆದಿದ್ದಳು. ಐದಾರು ತಿಂಗಳಿಂದ ಇಬ್ಬರು ಆತ್ಮೀಯರಾಗಿದ್ದು, ಈ ಗೆಳೆತನದಲ್ಲಿ ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದರು. ಅ.10 ರಂದು ಮಧ್ಯಾಹ್ನ ಕಾಲೇಜಿನ ಆವರಣದಲ್ಲಿ ತನ್ನ ಜರ್ಸಿ ಪಡೆಯಲು ಭೇಟಿ ಆಗುವುದಾಗಿ ಜೀವನ್‌ಗೆ ಸಂತ್ರಸ್ತೆ ಹೇಳಿದ್ದಳು. ಅಂತೆಯೇ ಕಾಲೇಜಿನ ಕೆಳ ಮಹಡಿಯಲ್ಲಿ ಮಧ್ಯಾಹ್ನ ಗೆಳೆಯನನ್ನು ಆಕೆ ಭೇಟಿಯಾಗಿದ್ದಳು. ಆಗ ಆತ ಆರ್ಕಿಟೆಕ್ಚರ್ ಬ್ಲಾಕ್‌ಗೆ ಹೋಗೋಣ ಎಂದಿದ್ದಾನೆ. ಇದಕ್ಕೊಪ್ಪಿದ ಬಳಿಕ 7ನೇ ಮಹಡಿಯ ಪಿಜಿ ಬ್ಲಾಕ್‌ಗೆ ಸ್ನೇಹಿತೆ ಜತೆ ಜೀವನ್ ಹೋಗಿದ್ದಾನೆ. ಅಲ್ಲಿ ಸ್ನೇಹಿತೆಗೆ ಆಕೆಯ ಜರ್ಸಿಯನ್ನು ಮರಳಿಸಿ ಮುತ್ತು ಕೊಡಲು ಜೀವನ್ ಮುಂದಾಗಿದ್ದಾನೆ. ಇದಕ್ಕೆ ಆಕೆ ವಿರೋಧಿಸಿದಾಗ ಬಲವಂತವಾಗಿ ಆತ ಚುಂಬಿಸಿದ್ದಾನೆ. ಈ ವರ್ತನೆಯಿಂದ ಬೇಸರಗೊಂಡು ಲಿಫ್ಟ್‌ನಲ್ಲಿ 6ನೇ ಮಹಡಿಗೆ ಸಂತ್ರಸ್ತೆ ಬಂದಿದ್ದಾಳೆ.
ಹಿಂಬಾಲಿಸಿ ಬಂದು ಶೌಚಕ್ಕೆ ಎಳೆದೊಯ್ದ!
ಈ ವೇಳೆ ಆಕೆಯನ್ನು ಹಿಂಬಾಲಿಸಿ ಬಂದ ಜೀವನ್, 6ನೇ ಮಹಡಿಯ ಪುರುಷರ ಶೌಚಾಲಯಕ್ಕೆ ಎಳೆದೊಯ್ದು ಬಾಗಿಲು ಬಂದ್ ಮಾಡಿ ಸ್ನೇಹಿತೆ ಮೇಲೆ ಅತ್ಯಾ*ರ ಎಸಗಿದ್ದಾನೆ. ಈ ಬಗ್ಗೆ ತನ್ನ ಸ್ನೇಹಿತರ ಬಳಿ ಸಂತ್ರಸ್ತೆ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ನಂತರ ಪೋಷಕರಿಗೂ ಆಕೆ ತಿಳಿಸಿದ್ದಾಳೆ. ಕೊನೆಗೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.