ಸಾರಾಂಶ
ಬೆಂಗಳೂರು : ಇತ್ತೀಚೆಗೆ ಮನೆಯಲ್ಲಿ ರಾತ್ರಿ ಮಲಗಿದ್ದಾಗ ಕಿಟಕಿಯಿಂದ ಕೈ ಹಾಕಿ ಮಹಿಳೆಯ ಚಿನ್ನದ ಸರ ದೋಚಿದ್ದ ಕದೀಮನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ರಾಜೀವ ನಗರದ ಸೈಯದ್ ಅಸ್ಲಾಂ ಬಂಧಿತನಾಗಿದ್ದು, ಆರೋಪಿಯಿಂದ 120 ಗ್ರಾಂ ಚಿನ್ನಾಭರಣ, 4.292 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಮೊಬೈಲ್ ಸೇರಿ 23.64 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಚಿಕ್ಕಬೆಟ್ಟಹಳ್ಳಿಯ ಸಾಯಿ ಲೇಔಟ್‌ನಲ್ಲಿ ರಾತ್ರಿ ಸರಸ್ವತಿ ಅವರಿಂದ ಚಿನ್ನದ ಸರ ದೋಚಿ ಈತ ಪರಾರಿಯಾಗಿದ್ದ. ಇನ್ಸ್‌ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಕೆ.ಎಲ್.ಪ್ರಭು ಹಾಗೂ ಇಬ್ರಾಹಿಂ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆರೋಪಿಯನ್ನು ಸೆರೆ ಹಿಡಿದಿದೆ.
ವೃತ್ತಿಪರ ಕ್ರಿಮಿನಲ್ ಆಗಿರುವ ಸೈಯದ್ ವಿರುದ್ಧ ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ರಾಮನಗರ, ಚಿಕ್ಕಮಗಳೂರು ಹಾಗೂ ಹಾಸನ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ರಾತ್ರಿ ವೇಳೆ ವಸತಿ ಪ್ರದೇಶಗಳಲ್ಲಿ ಓಡಾಡಿ ಬೀಗ ಹಾಕಿರುವ ಮನೆಗಳು ಅಥವಾ ಬೆಡ್ ರೂಮ್ ಕಿಟಕಿ ತೆರೆದಿರುವ ಮನೆಗಳಿಗೆ ಆತ ಕನ್ನ ಹಾಕುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.