ಸಾರಾಂಶ
ಮನಸ್ತಾಪವನ್ನು ಮಾತನಾಡಿ ಸರಿಮಾಡಿಕೊಳ್ಳೋಣ ಎಂದು ಕರೆದ ಬಾಯ್ ಫ್ರೆಂಡ್ ಬಳಿಕ ಲೈಂಗಿಕ ಕಿರುಕುಳ, ದೌರ್ಜನ್ಯ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಪ್ರೇಯಸಿಯನ್ನು ಮನಸ್ತಾಪ ಬಗೆಹರಿಸಿಕೊಳ್ಳುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಬಳಿಕ ಆಕೆಯ ಮೇಲೆ ಹಲ್ಲೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.22 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವಸಂತನಗರ ನಿವಾಸಿ ದಿಗ್ವಿಜಯ್‌ಸಿಂಗ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿದ್ಯಾರ್ಥಿಯಾಗಿರುವ ಸಂತ್ರಸ್ತೆ ಹಾಗೂ ಆರೋಪಿ ದಿಗ್ವಿಜಯ್ ಸಿಂಗ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಇಬ್ಬರೂ ಒಂದೇ ಮನೆಯಲ್ಲಿ ಸಹಜೀವನ (ಲಿವ್ ಇನ್ ರಿಲೇಶನ್‌ಶಿಪ್) ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪವಾಗಿ ದೂರಾಗಿದ್ದರು. ಸಂತ್ರಸ್ತೆ ಪ್ರತ್ಯೇಕವಾಗಿ ನೆಲೆಸಿದ್ದರು.ಆರೋಪಿ ದಿಗ್ವಿಜಯ್ ಸಿಂಗ್ ಜ.19ರಂದು ರಾತ್ರಿ ಸಂತ್ರಸ್ತೆಗೆ ಕರೆ ಮಾಡಿ, ಇಬ್ಬರ ನಡುವಿನ ಮನಸ್ತಾಪ ಬಗೆಹರಿಸಿಕೊಳ್ಳೋಣ ಎಂದು ಮನೆಗೆ ಆಹ್ವಾನಿಸಿದ್ದಾನೆ. ಅದರಂತೆ ಸಂತ್ರಸ್ತೆ ರಾತ್ರಿ 12 ಗಂಟೆಗೆ ಆತನ ಮನೆಗೆ ಬಂದಿದ್ದಾರೆ. ಈ ವೇಳೆ ಮಾತು ಶುರು ಮಾಡಿದ ದಿಗ್ವಿಜಯ್‌ಸಿಂಗ್, ಏಕಾಏಕಿ ಸಂತ್ರಸ್ತೆಯ ಬಾಯಿ ಮುಚ್ಚಿ ಬಳಿಕ ಆಕೆಯ ಕೆನ್ನೆ ಮತ್ತು ತುಟಿಯನ್ನು ಕಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.