ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಪ್ರಿಯತಮೆಯನ್ನು ಕೊಂದು ಬಳಿಕ ಆತ್ಮಹತ್ಯೆ ನಾಟಕ ಸೃಷ್ಟಿಸಿದ್ದ ವ್ಯಕ್ತಿಯೊಬ್ಬನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮದಾಸ್ ಲೇಔಟ್‌ ನಿವಾಸಿ ರಂಜಿತಾ (24) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪ್ರಿಯಕರ ಅಯ್ಯಪ್ಪನನ್ನು ಬಂಧಿಸಲಾಗಿದೆ. ಎರಡು ದಿನಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಈ ಜೋಡಿ ಮಧ್ಯೆ ಜಗಳವಾಗಿದೆ. ಆಗ ರಂಜಿತಾ ಮೇಲೆ ಹಲ್ಲೆ ನಡೆಸಿ ಕೊಂದು ಬಳಿಕ ನೇಣು ಬಿಗಿದು ಆತ್ಮಹತ್ಯೆ ಎಂದು ಆತ ಬಿಂಬಿಸಲು ಯತ್ನಿಸಿದ್ದ. ಆದರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.

ಹಲವು ದಿನಗಳಿಂದ ಸಹಜೀವನವನ್ನು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಶೆಟ್ಟಿಗೇರೆ ಗ್ರಾಮದ ಅಯ್ಯಪ್ಪ ಹಾಗೂ ರಂಜಿತಾ ನಡೆಸುತ್ತಿದ್ದರು. ಈ ಮೊದಲು ವಿವಾಹವಾಗಿ ಬಳಿಕ ಕೌಟುಂಬಿಕ ಕಲಹದಿಂದ ಪತ್ನಿಯಿಂದ ಅಯ್ಯಪ್ಪ ದೂರವಾಗಿದ್ದ. ಈ ನಡುವೆ ಆತನಿಗೆ ತನ್ನೂರಿನ ಪಕ್ಕದ ರಂಜಿತಾ ಜತೆ ಪ್ರೇಮವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರೇಮದ ಹಿನ್ನೆಲೆಯಲ್ಲಿ ರಾಮದಾಸ ಲೇಔಟ್‌ನಲ್ಲಿ ಇಬ್ಬರು ಒಟ್ಟಿಗೆ ನೆಲೆಸಿದ್ದರು. ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದರು. ಇನ್ನು ಹಣ್ಣಿನ ಅಂಗಡಿಯಲ್ಲಿ ಅಯ್ಯಪ್ಪ ಮೇಲ್ವಿಚಾರಕನಾಗಿದ್ದರೆ, ಡಿ -ಮಾರ್ಟ್‌ನಲ್ಲಿ ಆಕೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮದುವೆ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪವಾಗಿತ್ತು. ವಿವಾಹಕ್ಕೆ ರಂಜಿತಾ ಒತ್ತಾಯಿಸುತ್ತಿದ್ದಳು. ಆದರೆ ಇದಕ್ಕೆ ಅಯ್ಯಪ್ಪ ಸಮ್ಮತಿಸಿರಲಿಲ್ಲ. ಎರಡು ದಿನಗಳ ಇದೇ ವಿಷಯವಾಗಿ ಮನೆಯಲ್ಲಿ ಪ್ರೇಮಿಗಳ ಮಧ್ಯೆ ಜಗಳವಾಗಿದೆ. ಕೊನೆಗೆ ಪರಸ್ಪರ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ.