ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಪತ್ನಿಯಿಂದಲೇ ಭೀಕರ ಹತ್ಯೆ

| N/A | Published : Apr 21 2025, 01:36 AM IST / Updated: Apr 21 2025, 04:27 AM IST

ಸಾರಾಂಶ

ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ (68) ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ 

 ಬೆಂಗಳೂರು : ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ (68) ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಾಗಿದ್ದ ಓಂ ಪ್ರಕಾಶ್‌ ಅವರ ಹತ್ಯೆ ಭಾನುವಾರ ಮಧ್ಯಾಹ್ನ ಸುಮಾರು 3.30ಕ್ಕೆ ನಡೆದಿದ್ದು, ಘಟನೆ ಸಂಬಂಧ ಮೃತರ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆಸ್ತಿ ವಿಚಾರ ಸಂಬಂಧ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಬಿಹಾರ ಮೂಲದ ಓಂ ಪ್ರಕಾಶ್‌ 1981ರ ಬ್ಯಾಚ್‌ನ ಕರ್ನಾಟಕ ಕೇಡರ್‌ ಐಪಿಎಸ್ ಅಧಿಕಾರಿಯಾಗಿದ್ದರು. ರಾಜ್ಯದ ವಿವಿಧ ಜಿಲ್ಲೆ ಹಾಗೂ ನಗರ ಮತ್ತು ಪೊಲೀಸ್‌ ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಎಚ್ಎಸ್‌ಆರ್‌ ಲೇಔಟ್‌ನ ಮೂರು ಅಂತಸ್ತಿನ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು.

ಕೊಲೆ ಮಾಡಿ ಸ್ನೇಹಿತೆಗೆ ಕರೆ:

ಭಾನುವಾರ ಮನೆಯಲ್ಲಿ ಓಂ ಪ್ರಕಾಶ್‌, ಪತ್ನಿ ಪಲ್ಲವಿ ಹಾಗೂ ಪುತ್ರಿ ಇದ್ದರು ಎನ್ನಲಾಗಿದೆ. ಮಧ್ಯಾಹ್ನ ದಂಪತಿ ನಡುವೆ ಗಲಾಟೆಯಾಗಿದೆ. ಈ ವೇಳೆ ಪತ್ನಿ ಪಲ್ಲವಿ ಚಾಕುವಿನಿಂದ ಇರಿದು ಒಂ ಪ್ರಕಾಶ್‌ ಅವರನ್ನು ಕೊಲೆ ಮಾಡಿದ್ದಾರೆ. ಬಳಿಕ ಸ್ನೇಹಿತೆಯಾಗಿರುವ ಮಾಜಿ ಐಪಿಎಸ್‌ ಅಧಿಕಾರಿಯೊಬ್ಬರ ಪತ್ನಿಗೆ ವಿಡಿಯೋ ಕರೆ ಮಾಡಿ ‘ಐ ಕಿಲ್ಲಡ್‌ ಮಾನ್‌ಸ್ಟರ್‌’ ಎಂದು ಹೇಳಿದರು ಎನ್ನಲಾಗಿದೆ. ಬಳಿಕ ಆ ಮಾಜಿ ಐಪಿಎಸ್‌ ಅಧಿಕಾರಿ ಪತ್ನಿ ಗಾಬರಿಗೊಂಡು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.

ಓಂ ಪ್ರಕಾಶ್‌ ಕೊಲೆ ವಿಚಾರ ತಿಳಿದು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು, ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಒಂ ಪ್ರಕಾಶ್‌ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ವೇಳೆ ರಕ್ತಸಿಕ್ತ ಉಡುಪಿನಲ್ಲೇ ಮನೆಯಲ್ಲಿದ್ದ ಓಂ ಪ್ರಕಾಶ್‌ ಅವರ ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೃತರ ಪುತ್ರ ನೀಡಿದ ದೂರಿನ ಮೇರೆಗೆ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ 

ವಾಟ್ಸಾಪ್‌ ಗ್ರೂಪ್‌ನಲ್ಲಿ ಸಂದೇಶ

ಓಂ ಪ್ರಕಾಶ್‌ ಮತ್ತು ಅವರ ಪತ್ನಿ ಪಲ್ಲವಿ ನಡುವೆ ಕೌಟುಂಬಿಕ ವಿಚಾರವಾಗಿ ಹಲವು ವರ್ಷಗಳಿಂದ ಕಲಹಗಳು ನಡೆಯುತ್ತಿದ್ದೆವು ಎನ್ನಲಾಗಿದೆ. ಈ ವಿಚಾರವಾಗಿ ಪಲ್ಲವಿ ಅವರು ತಮ್ಮ ಸ್ನೇಹಿತೆಯರು ಹಾಗೂ ಸಂಬಂಧಿಕರ ವಾಟ್ಸಾಪ್‌ ಗ್ರೂಪ್‌ಗೆ ಸಂದೇಶಗಳನ್ನು ಹಾಕುತ್ತಿದ್ದರು ಎನ್ನಲಾಗಿದೆ.

ಆಸ್ತಿ ವಿಚಾರಕ್ಕೆ ಗಲಾಟೆ?

ಕೊಲೆಯಾದ ಓಂ ಪ್ರಕಾಶ್‌ ರಾವ್‌ ಬೆಂಗಳೂರು, ಬೆಂಗಳೂರು ಹೊರವಲಯ ಸೇರಿ ರಾಜ್ಯದ ವಿವಿಧೆಡೆ ತಮ್ಮ ಪುತ್ರ, ತಂಗಿಯರು ಸೇರಿ ಕೆಲ ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಗಳು ಆಗುತ್ತಿದ್ದವು. ಆಸ್ತಿಯಲ್ಲಿ ತನಗೂ ಪಾಲು ಕೊಡುವಂತೆ ಪತ್ನಿ ಪಲ್ಲವಿ ಕೇಳುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳಗಳು ಆಗುತ್ತಿದ್ದವು. ಈ ಆಸ್ತಿ ವಿಚಾರದ ಗಲಾಟೆ ಬಗ್ಗೆಯೂ ಪಲ್ಲವಿ ಸ್ನೇಹಿತೆಯರ ಜತೆಗೆ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಮಹಿಳೆ ವಿಚಾರಕ್ಕೆ ಕಲಹ?

ಕೊಲೆಯಾದ ಓಂ ಪ್ರಕಾಶ್‌ಗೆ ಹಲವು ವರ್ಷಗಳ ಹಿಂದೆ ಮಹಿಳೆಯೊಬ್ಬರ ಜತೆಗೆ ಸ್ನೇಹವಿತ್ತು. ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳಗಳು ಆಗಿದ್ದವು. ಅಂದಿನಿಂದ ದಾಂಪತ್ಯದಲ್ಲಿ ಎಲ್ಲವೂ ಸರಿಯಿರಲಿಲ್ಲ. ಬೆಂಗಳೂರಿನಲ್ಲಿ ಓಂ ಪ್ರಕಾಶ್‌ ಎರಡು ಮನೆಗಳಿವೆ. ಕಾವೇರಿ ಜಂಕ್ಷನ್‌ನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಹಾಗೂ ಎಚ್‌ಎಸ್‌ಆರ್‌ ಲೇಔಟ್‌ನ ಮೂರು ಅಂತಸ್ತಿನ ಮನೆ ಇತ್ತು. ಓಂ ಪ್ರಕಾಶ್‌ ಹೆಚ್ಚಿನ ಸಮಯ ಈ ಫ್ಲ್ಯಾಟ್‌ನಲ್ಲೇ ಕಳೆಯುತ್ತಿದ್ದರು ಎಂದು ತಿಳಿದು ಬಂದಿದೆ.

10ಕ್ಕೂ ಅಧಿಕ ಬಾರಿ ಇರಿದು ಕೊಲೆ

ಮೂರು ಅಂತಸ್ತಿನ ಮನೆಯಲ್ಲಿ ನೆಲ ಮಹಡಿಯ ಹಾಲ್‌ನಲ್ಲಿ ಓಂ ಪ್ರಕಾಶ್‌ ಅವರ ಕೊಲೆಯಾಗಿದೆ. ಎದೆ, ಹೊಟ್ಟೆ, ಕೈ ಸೇರಿ ದೇಹದ ಇತರೆ ಭಾಗಗಳಿಗೆ 10ಕ್ಕೂ ಅಧಿಕ ಬಾರಿ ಇರಿದು ಕೊಲೆ ಮಾಡಲಾಗಿದೆ. ಚಾಕು ಇರಿತದಿಂದ ಇಡೀ ಹಾಲ್‌ನಲ್ಲಿ ರಕ್ತ ಹರಿದಿದೆ. ಚಾಕು ಇರಿತದ ಬಳಿಕ ಸುಮಾರು 10-15 ನಿಮಿಷ ಓಂ ಪ್ರಕಾಶ್‌ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 ಪಲ್ಲವಿಗೆ ಮಾನಸಿಕ ಕಾಯಿಲೆ?

ಓಂ ಪ್ರಕಾಶ್‌ ಪತ್ನಿ ಪಲ್ಲವಿ ಕಳೆದ 12 ವರ್ಷಗಳಿಂದ ಸ್ಕಿಜೋಫ್ರೇನಿಯಾ(ಭ್ರಮೆಯಲ್ಲಿರುವುದು) ಎಂಬ ಮಾನಸಿಕ ಕಾಯಿಲೆಯಿಂದ ಬಳಸುತ್ತಿದ್ದರು. ಇದಕ್ಕೆ ಚಿಕಿತ್ಸೆ ಸಹ ಪಡೆಯುತ್ತಿದ್ದರು ಎನ್ನಲಾಗಿದೆ. ಪತಿ ಮೇಲೆ ಇಲ್ಲ ಸಲ್ಲದ ಊಹೆ ಮಾಡಿಕೊಂಡು ಜಗಳ ಮಾಡುತ್ತಿದ್ದರು. ಗನ್‌ ಹಿಡಿದುಕೊಂಡು ಭಯ ಪಡಿಸುತ್ತಿದ್ದಾರೆ ಎಂದು ಹಲವು ಬಾರಿ ಸಂಬಂಧಿಕರ ಜತೆಗೆ ಪತಿ ಓಂ ಪ್ರಕಾಶ್‌ ವಿರುದ್ಧ ದೂರು ಹೇಳುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಕುಟುಂಬದ ವಾಟ್ಸಾಪ್‌ ಗ್ರೂಪ್‌ನಲ್ಲಿ ಸಂದೇಶಗಳನ್ನು ಹಾಕುತ್ತಿದ್ದರು ಎನ್ನಲಾಗಿದೆ.

ರಾಜ್ಯದಲ್ಲಿ 36 ವರ್ಷ ಸೇವೆ

ಬಿಹಾರದ ಚಂಪಾರಣ್‌ ಜಿಲ್ಲೆಯ ಓಂ ಪ್ರಕಾಶ್‌ ಅವರು 1981ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿ ಹರಪನಹಳ್ಳಿ ಉಪವಿಭಾಗದ ಎಎಸ್ಪಿಯಾಗಿ ಸೇವೆ ಆರಂಭಿಸಿದ್ದರು. ಬಳಿಕ ರಾಜ್ಯ ಜಾಗೃತ ಆಯೋಗ, ಕರ್ನಾಟಕ ಲೋಕಾಯುಕ್ತ ಎಸ್ಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಡಿಐಜಿ( ಆಡಳಿತ), ಡಿಐಜಿ ಉತ್ತರ ವಲಯ, ಡಿಐಜಿ(ತರಬೇತಿ), ಐಜಿಪಿ, ಐಸಿಡಿ ಐಜಿಪಿ, ಸಾರಿಗೆ ಇಲಾಖೆ ಆಯುಕ್ತರಾಗಿಯೂ ಕೆಲಸ ಮಾಡಿದ್ದರು. ಎಡಿಜಿಪಿ (ಅಪರಾಧ), ಡಿಜಿ(ಡಿಸಿಆರ್‌ಇ), ಡಿಜಿ ಅಗ್ನಿಶಾಮಕ ಸೇರಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಎರಡು ವರ್ಷ ಕೆಲಸ 2017ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

ಭಾನುವಾರ ಸಂಜೆ ಸುಮಾರು 4.30ಕ್ಕೆ ಕೊಲೆ ಘಟನೆ ಬೆಳಕಿಗೆ ಬಂದಿದೆ. ದೈಹಿಕ ಹಲ್ಲೆ ಹಾಗೂ ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಸಿಕ್ಕ ಹರಿತ ಆಯುಧ ಜಪ್ತಿ ಮಾಡಲಾಗಿದೆ. ಘಟನೆ ವೇಳೆ ಮನೆಯಲ್ಲಿ ಮೂವರು ಇದ್ದರು ಎಂಬುದು ಗೊತ್ತಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈವರೆಗೂ ನಾವು ಯಾರನ್ನೂ ಬಂಧಿಸಿಲ್ಲ. ಕೆಲವರನ್ನು ವಿಚಾರಣೆ ಮಾಡಲಾಗುತ್ತಿದೆ. ಮೃತರ ಪುತ್ರ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು

- ವಿಕಾಸ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ