ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದ ಪತಿ ಗಂಜಾಂ ಸಮೀಪದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ...!

| N/A | Published : Apr 21 2025, 12:55 AM IST / Updated: Apr 21 2025, 04:33 AM IST

ಸಾರಾಂಶ

ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದ ಪತಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀರಂಗಪಟ್ಟಣ ಪಟ್ಟಣದ ಗಂಜಾಂ ಸಮೀಪದ ಕಾವೇರಿ ನದಿ ಬಳಿ ನಡೆದಿದೆ. ತಾಲೂಕಿನ ಪಿ.ಹೊಸಹಳ್ಳಿಯ ಚಂದ್ರ ಅಲಿಯಾಸ್ ಚಂದ್ರಾಚಾರಿ (32) ಕಾವೇರಿ ನದಿಯಲ್ಲಿ ಮುಳುಗಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.

 ಶ್ರೀರಂಗಪಟ್ಟಣ : ಪತ್ನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದ ಪತಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪಟ್ಟಣದ ಗಂಜಾಂ ಸಮೀಪದ ಕಾವೇರಿ ನದಿ ಬಳಿ ನಡೆದಿದೆ. ತಾಲೂಕಿನ ಪಿ.ಹೊಸಹಳ್ಳಿಯ ಚಂದ್ರ ಅಲಿಯಾಸ್ ಚಂದ್ರಾಚಾರಿ (32) ಕಾವೇರಿ ನದಿಯಲ್ಲಿ ಮುಳುಗಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.

ಈತ ಗುರುವಾರ ತಡರಾತ್ರಿ ಹಾಸಿಗೆ ಮೇಲೆ ಮಲಗಿದ್ದ ತನ್ನ ಪತ್ನಿ ಸೌಮ್ಯ (27)ಳ ತಲೆ ಮೇಲೆ ಒರಳುಕಲ್ಲು ಎತ್ತಿ ಹಾಕಿ ಕೊಲೆಗೈದು ತಲೆಮರೆಸಿಕೊಂಡಿದ್ದನು. ಈತ ನಂತರ ತನ್ನ ಬಳಿ ಇದ್ದ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಬೇರೆಡೆ ಎಸೆದು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಶನಿವಾರ ಸಂಜೆ ಗಂಜಾಂನ ನಿಮಿಷಾಂಬ ದೇಗುಲ ಹಿಂಭಾಗ ಸಮೀಪದ ಕಾವೇರಿ ನದಿಯಲ್ಲಿ ಅಪರಿಚಿತ ಪುರಷನ ಶವ ತೇಲುತ್ತಿದ್ದನ್ನು ಕಂಡ ಸ್ಥಳೀಯರು ಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ನೀರಿನಿಂದ ಹೊರತೆಗೆದು ಪರಿಶೀಲಿಸಿದ ವೇಳೆ ಈತನ ತಲೆಗೆ ಪೆಟ್ಟಾಗಿದ್ದ ಹಾಗೂ ಮುಖ ಚಹರೆಯಿಂದ ಚಂದ್ರು ವ್ಯಕ್ತಿ ಎಂಬ ಗುರುತು ಪತ್ತೆಯಾಗಿದೆ.

ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ನಾಪತ್ತೆ

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಯುವಕ ನಾಪತ್ತೆಯಾಗಿದ್ದು, ಈತನ ಜೊತೆ ನದಿಯಲ್ಲಿ ಈಜಲು ಹೋಗಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ರಕ್ಷಿಸಿರುವ ಘಟನೆ ತಾಲೂಕಿನ ಬಲಮುರಿ ಪ್ರವಾಸಿ ತಾಣದಲ್ಲಿ ಭಾನುವಾರ ಸಂಜೆ ಜರುಗಿದೆ.

ಮಂಡ್ಯ ನಗರದ ನೂರಾನಿ ಬಡಾವಣೆಯ ನಿವಾಸಿ ಅಬ್ದುಲ್ ಹುಸೇನ್ ತಮ್ಮ ಕುಟುಂಬಸ್ಥರ ಜೊತೆ ಬಲಮುರಿ ಪ್ರವಾಸಿ ತಾಣಕ್ಕೆ ಬಂದಿದ್ದ ವೇಳೆ ಈನ ಪುತ್ರ ಅಂಜಲ್ (22) ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದಾಗ ನಾಪತೆಯಾಗಿದ್ದಾನೆ.

ನಂತರ ಅಂಜಲ್ ನನ್ನು ಹುಡುಕಲು ಹೋದ ಅಂಜಲ್ ಸಂಬಂಧಿ ಇಬ್ಬರು ನದಿಯಲ್ಲಿ ಮುಳುಗುತ್ತಿದ್ದಾಗ ಸಹಾಯಕ್ಕಾಗಿ ಕೂಗಿದ್ದಾರೆ. ಈ ವೇಳೆ ಬಲಮುರಿ ಪ್ರವಾಸಿ ತಾಣದಲ್ಲಿ ಕರ್ತವ್ಯದಲ್ಲಿದ್ದ ಕೆ.ಆರ್.ಸಾಗರ ಪೊಲೀಸ್ ಠಾಣೆ ಸಿಬ್ಬಂದಿ ರೇಣುಕುಮಾರ್ ಮುಳುಗುತ್ತಿದ್ದ ಯುವಕನ್ನು ಸ್ಥಳದಲ್ಲಿ ಸಿಕ್ಕಿದ ಬಟ್ಟೆಯನ್ನು ಬಳಸಿ ರಕ್ಷಣೆ ಮಾಡಿದ್ದಾರೆ. ಮತ್ತೋರ್ವನನ್ನು ಸ್ಥಳದಲ್ಲಿದ್ದ ಇತರೆ ಪ್ರವಾಸಿಗರು ರಕ್ಷಿಸಿದ್ದು ಇಬ್ಬರು ಪ್ರಣಾಪಾಯದಿಂದ ಪಾರಾಗಿದ್ದಾರೆ.

ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿ.ಎಸೈ ರಮೇಶ್ ಕರ್ಕಿಕಟ್ಟೆ ನಾಪತ್ತೆಯಾಗಿರುವ ಅಂಜಲ್ ಎಂಬ ಯುವಕನಿಗಾಗಿ ನುರಿತ ಈಜಾಗಾರರನ್ನು ಬಳಸಿ ಶೋಧಕಾರ್ಯ ನಡೆಸಿದ್ದಾರೆ.