ಸಾರಾಂಶ
ನವದೆಹಲಿ: ಕೌಟುಂಬಿಕ ಸಮಸ್ಯೆಗಳಿಂದಾಗಿ ಪುರುಷರು ಜೀವಾಘಾತ ಮಾಡಿಕೊಂಡ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆಯೆಂಬಂತೆ, ಉತ್ತರಪ್ರದೇಶದ ಓರ್ವ ಟೆಕ್ಕಿ ತನ್ನ ಮಡದಿ ಹಾಗೂ ಆಕೆಯ ಪರಿವಾರದ ವಿರುದ್ಧ ಮಾನಸಿಕ ಶೋಷಣೆಯ ಆರೋಪ ಹೊರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಔರೈಯಾ ಜಿಲ್ಲೆಯ ನಿವಾಸಿಯಾಗಿದ್ದ ಮೋಹಿತ್ ಕುಮಾರ್, ನೋಯ್ಡಾದ ಹೋಟೆಲ್ ಒಂದರಲ್ಲಿ ನೇಣು ಹಾಕಿಕೊಂಡು ಜೀವಾಘಾತ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ವಿಡಿಯೋ ಮಾಡಿರುವ ಅವರು, ‘ನನ್ನ ಮೇಲೆ ಪತ್ನಿ ಹಾಗೂ ಆಕೆಯ ಕಡೆಯವರಿಂದ ಮಾನಸಿಕ ಒತ್ತಡ ಹೇರಲಾಗುತ್ತಿದೆ. ಈ ವಿಡಿಯೋ ನಿಮ್ಮನ್ನು ತಲುಪುವ ಮುನ್ನ ನಾನು ಈ ಲೋಕದಿಂದಲೇ ಹೋಗಿರುತ್ತೇನೆ. ಪುರುಷರಿಗಾಗಿ ಒಂದು ಕಾನೂನಿದ್ದರೆ ನಾನು ಹೀಗೆ ಮಾಡುತ್ತಿರಲಿಲ್ಲವೇನೋ’ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ ಹಾಗೂ ‘ಅಮ್ಮ, ಅಪ್ಪ, ನನ್ನನ್ನು ಕ್ಷಮಿಸಿ. ಸಾವಿನ ಬಳಿಕವೂ ನ್ಯಾಯ ಸಿಗದಿದ್ದರೆ ನನ್ನ ಚಿತಾಭಸ್ಮವನ್ನು ಚರಂಡಿಯಲ್ಲಿ ಹರಿಬಿಡಿ’ ಎಂದು ಭಾವುಕ ವಿದಾಯ ಹೇಳಿದ್ದಾರೆ.
ಮೋಹಿತ್ ಆರೋಪಗಳೇನು?:
ಪ್ರಿಯಾ ಯಾದವ್ ಎಂಬಾಕೆಯನ್ನು 7 ವರ್ಷ ಪ್ರೀತಿಸಿ. ಬಳಿಕ ವರಿಸಿದ್ದ ಮೋಹಿತ್, ತಮ್ಮ ಸಾವಿಗೆ ಆಕೆಯೇ ಕಾರಣ ಎಂದಿದ್ದಾರೆ. ಅವರು ಮಾಡಿರುವ ವಿಡಿಯೋದಲ್ಲಿ, ‘ಪ್ರಿಯಾಗೆ ಶಿಕ್ಷಕಿಯ ಕೆಲಸ ಸಿಕ್ಕಿದ ಬಳಿಕ, ಆಕೆಯ ತಾಯಿ ಹಾಗೂ ಸಹೋದರನ ಮಾತು ಕೇಳಿಕೊಂಡು, ನನ್ನೆಲ್ಲಾ ಆಸ್ತಿಯನ್ನು ಅವಳ ಹೆಸರಿಗೆ ಮಾಡದಿದ್ದರೆ ವರದಕ್ಷಿಣೆಯ ಕೇಸ್ ಹಾಕುವುದಾಗಿ ಬೆದರಿಸುತ್ತಿದ್ದಳು. ಪ್ರಿಯಾಳಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಆಕೆಯ ತಾಯಿ, ಎಲ್ಲಾ ಒಡವೆ, ಸೀರೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು’ ಎಂದು ಆರೋಪಿಸಿದ್ದಾರೆ.