ಸಾರಾಂಶ
ಆಗ್ರಾ (ಉ.ಪ್ರ.): ದೇಶಾದ್ಯಂತ ಸುದ್ದಿ ಮಾಡಿದ್ದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಸುವ ಮುನ್ನವೇ ಆಗ್ರಾದಲ್ಲಿ ಟೆಕ್ಕಿಯೊಬ್ಬರು ಪತ್ನಿ ವಿರುದ್ಧ ಕಿರುಕುಳ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಟಿಸಿಎಸ್ ಉದ್ಯೋಗಿ ಮಾನವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಮಾನವ್ ಮತ್ತು ನಿಕಿತಾ ಕಳೆದ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದರು. ಮುಂಬೈನಲ್ಲಿ ನೆಲೆಸಿದ್ದ ದಂಪತಿ ದಾಂಪತ್ಯ ಕಲಹದಿಂದ ಆಗ್ರಾಕ್ಕೆ ಹಿಂದಿರುಗಿದ್ದರು.
ಈ ನಡುವೆಯೇ ಫೆ.24ರಂದು ಮಾನವ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ವಿಡಿಯೋ ಮಾಡಿ, ಪತ್ನಿ ಕಿರುಕುಳ ಸಾವಿಗೆ ಕಾರಣ ಎಂದಿದ್ದಾನೆ. ಜತೆಗೆ ‘ಪುರುಷರ ಬಗ್ಗೆಯೂ ಯೋಚಿಸಿ.ಇಲ್ಲಿದ್ದರೆ ಅಪರಾಧಿಯಾಗಲೂ ಯಾವುದೇ ಪುರುಷ ಉಳಿಯುವುದಿಲ್ಲ’ ಎಂದಿದ್ದಾನೆ.
ಆರೋಪ ಸುಳ್ಳು- ಪತ್ನಿ: ಆದರೆ ನಿಕಿತಾ ಆರೋಪ ನಿರಾಕರಿಸಿದ್ದು, ‘ಗಂಡ ಅತಿಯಾಗಿ ಕುಡಿಯುತ್ತಿದ್ದ. ಹಲವು ಸಲ ಆತ್ಮಹತ್ಯೆಗೆ ಯತ್ನಿಸಿದ್ದ. ಕುಡಿದ ಬಳಿಕ ಹಲ್ಲೆ ಮಾಡುತ್ತಿದ್ದ. ಅತ್ತೆ-ಮಾವನಿಗೆ ಈ ಬಗ್ಗೆ ಹೇಳಿದ್ದರೂ ನಿರ್ಲಕ್ಷಿಸಿದ್ದರು’ ಎಂದಿದ್ದಾಳೆ. ತನ್ನ ವಿರುದ್ಧ ಕೇಳಿ ಬಂದಿರುವ ಅಕ್ರಮ ಸಂಬಂಧದ ಆರೋಪವನ್ನೂ ನಿರಾಕರಿಸಿದ್ದಾಳೆ.
ಈ ಸಂಬಂಧ ಟೆಕ್ಕಿ ತಂದೆ, ಸೊಸೆ ವಿರುದ್ಧ ದೂರು ದಾಖಲಿಸಿದ್ದು, ಇದುವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ.