ಸಾರಾಂಶ
ನಗರ ಹೊರವಲಯದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ₹90 ಲಕ್ಷ ಮೌಲ್ಯದ ತಲೆಕೂದಲನ್ನು ಕಿಡಿಗೇಡಿಗಳು ಕಳವು ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ನಗರ ಹೊರವಲಯದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ₹90 ಲಕ್ಷ ಮೌಲ್ಯದ ತಲೆಕೂದಲನ್ನು ಕಿಡಿಗೇಡಿಗಳು ಕಳವು ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಕ್ಷ್ಮೀಪುರ ಕ್ರಾಸ್ ಸಮೀಪದ ವೆಂಕಟರಮಣ ಎಂಬುವರಿಗೆ ಸೇರಿದ ಗೋದಾಮಿನಲ್ಲಿ ಈ ಕೃತ್ಯ ನಡೆದಿದ್ದು, ಮಾಲಿಕರ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ. ವಿದೇಶದ ವಿಗ್ ತಯಾರಿಕಾ ಕಂಪನಿಗಳಿಗೆ ರಫ್ತು ಮಾಡಲು ಸಂಗ್ರಹಿಸಿಟ್ಟಿದ್ದ ತಲೆಕೂದಲು ಇದಾಗಿತ್ತು ಎಂದು ತಿಳಿದು ಬಂದಿದೆ.
ಚೀನಾ, ಬರ್ಮಾ ಹಾಗೂ ಹಾಂಕಾಂಗ್‌ಗೆ ರಫ್ತು ಮಾಡಲು 27 ಮೂಟೆಗಳಲ್ಲಿ ಕೂದಲು ದಾಸ್ತಾನು ಮಾಡಲಾಗಿತ್ತು. ಕಳೆದ ವಾರ ಕೂದಲು ಖರೀದಿ ಸಂಬಂಧ ಚೀನಾ ಮೂಲದ ವ್ಯಾಪಾರಿಗಳ ಜತೆ ಮಾತುಕತೆ ನಡೆದಿತ್ತು. ಹೀಗಿರುವಾಗ ಎರಡು ದಿನಗಳ ಹಿಂದೆ ಗೋದಾಮಿನ ಬೀಗ ಮುರಿದು ಆರು ಮಂದಿ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ ಎಂದು ದೂರಿದ್ದಾರೆ.