ಗ್ರೇಟರ್‌ ಬೆಂಗಳೂರು ವಿಧೇಯಕ ಪರ್ಯಾಲೋಚನೆಗೆ ? ಜಂಟಿ ಪರಿಶೀಲನಾ ಸಮಿತಿ ಶಿಫಾರಸು

| N/A | Published : Mar 06 2025, 01:31 AM IST / Updated: Mar 06 2025, 04:05 AM IST

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ, ನಗರ ಪಾಲಿಕೆಗಳ ವಾರ್ಡ್‌ಗಳ ನಿಗದಿ, ಕಾರ್ಪೋರೇಟರ್‌ಗಳ ಸದಸ್ಯತ್ವ ರದ್ದು, ಶಾಸಕರ ಅಧಿಕಾರ ವಿಸ್ತರಣೆಯಂತಹ ಹಲವು ಶಿಫಾರಸುಗಳನ್ನು ಒಳಗೊಂಡ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕದ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯು ಬುಧವಾರ ಪರಿಶೀಲನಾ ವರದಿ ಮಂಡಿಸಿತು.

 ವಿಧಾನಸಭೆ : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ, ನಗರ ಪಾಲಿಕೆಗಳ ವಾರ್ಡ್‌ಗಳ ನಿಗದಿ, ಕಾರ್ಪೋರೇಟರ್‌ಗಳ ಸದಸ್ಯತ್ವ ರದ್ದು, ಶಾಸಕರ ಅಧಿಕಾರ ವಿಸ್ತರಣೆಯಂತಹ ಹಲವು ಶಿಫಾರಸುಗಳನ್ನು ಒಳಗೊಂಡ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕದ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯು ಬುಧವಾರ ಪರಿಶೀಲನಾ ವರದಿ ಮಂಡಿಸಿತು.

ಜತೆಗೆ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕವನ್ನು ಪರ್ಯಾಲೋಚನೆಗೆ ತೆಗೆದುಕೊಳ್ಳುವಂತೆಯೂ ಸಮಿತಿಯು ಶಿಫಾರಸು ಮಾಡಿದೆ.

ಪರಿಶೀಲನಾ ಸಮಿತಿ ಅಧ್ಯಕ್ಷ, ಶಾಸಕ ರಿಜ್ವಾನ್‌ ಅರ್ಷದ್‌ ಪರಿಶೀಲನಾ ವರದಿ ಮಂಡಿಸಿದರು. ವಿಧೇಯಕದಲ್ಲಿನ ಲೋಪಗಳು, ಬೆಂಗಳೂರಿನ ಆಡಳಿತ ಸುಧಾರಣೆಗೆ ಅಗತ್ಯವಿರುವ ಅಂಶಗಳನ್ನು ಒಳಗೊಂಡ ವರದಿ ಸಿದ್ಧಪಡಿಸಿ ಮಂಡಿಸಲಾಗಿದೆ. ಸಾರ್ವಜನಿಕರಿಂದಲೂ ಇದಕ್ಕೆ ಅಭಿಪ್ರಾಯ ಪಡೆಯಲಾಗಿದ್ದು, ವಿಧೇಯಕವನ್ನು ಬಲಿಷ್ಠಗೊಳಿಸುವಂತಹ ಅಂಶಗಳನ್ನು ಸೇರಿಸಲಾಗಿದೆ. ಬೆಂಗಳೂರಿನ ಬೆಳವಣಿಗೆಯನ್ನು ಗಮನಿಸಿ ವಿಧೇಯಕದ ಅವಶ್ಯಕತೆಯಿದ್ದು, ಅದನ್ನು ಪರ್ಯಾಲೋಚಿಸಲೂ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ಸಲಹಾತ್ಮಕ ಪ್ರಾಧಿಕಾರ:

ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಕೇವಲ ಸಲಹಾತ್ಮಕ ಮತ್ತು ನೀತಿ ಅನುಷ್ಠಾನಕ್ಕೆ ಸಂಬಂಧಿಸಿದ ಸಕ್ಷಮ ಸಂಸ್ಥೆಯಾಗಿ ಕೆಲಸ ಮಾಡಬೇಕಿದೆ. ಅದನ್ನು ಹೊರತುಪಡಿಸಿ ತೆರಿಗೆ, ಶುಲ್ಕ, ಉಪಕರ, ಬಳಕೆದಾರರ ಶುಲ್ಕ ಸೇರಿದಂತೆ ಇನ್ನಿತರ ಆರ್ಥಿಕ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಬಾರದು. ಆದರೆ, ಸರ್ಕಾರದಿಂದ ಒದಗಿಸಲಾಗುವ ಅನುದಾನವನ್ನು ಪ್ರಾಧಿಕಾರದ ಮೂಲಕ ನಗರ ಪಾಲಿಕೆಗೆ ಹಂಚಿಕೆ ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕಕ್ಕೆ ಒಪ್ಪಿಗೆ ದೊರೆತು ಅಧಿನಿಯಮ ಆರಂಭವಾದ ನಿರ್ಧಿಷ್ಟ ಕಾಲಮಿತಿಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ರಚಿಸಬೇಕು. ಹಾಗೆಯೇ, ವಿಧೇಯಕದಲ್ಲಿ ಪ್ರಸ್ತುತ ಇರುವ ಸದಸ್ಯರೊಂದಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 

ಮತದಾರರ ಪಟ್ಟೀಲಿ ಹೆಸರು ಬದಲಾದರೆ ಸದಸ್ಯತ್ವ ರದ್ದು:

ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಸ್ಪರ್ಧಿಸುವವರು ಆಯಾ ನಗರ ಪಾಲಿಕೆ ವ್ಯಾಪ್ತಿಯ ಮತದಾರರಾಗಿರಬೇಕು. ಒಂದು ವೇಲೆ ಚುನಾವಣೆಯಲ್ಲಿ ಗೆದ್ದ ನಂತರ ಬೇರೆ ನಗರ ಪಾಲಿಕೆಯ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿದರೆ ಅವರ ಸದಸ್ಯತ್ವ ರದ್ದುಗೊಳಿಸಬಹುದು ಎಂದೂ ತಿಳಿಸಲಾಗಿದೆ.

ಹಾಗೆಯೇ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ನಗರ ಪಾಲಿಕೆಗಳು ಕೆಲಸ ಮಾಡಲಿದ್ದು, ಅವುಗಳ ಸಂಖ್ಯೆಯನ್ನು ಸರ್ಕಾರ ನಿರ್ಧರಿಸಲಿದೆ. ಆದರೆ, ನಗರ ಪಾಲಿಕೆಗಳಲ್ಲಿನ ವಾರ್ಡ್‌ಗಳ ಸಂಖ್ಯೆ ಕನಿಷ್ಠ 100ಕ್ಕಿಂತ ಕಡಿಮೆ ಇರಬಾರದು ಮತ್ತು ಗರಿಷ್ಠ 200ಕ್ಕಿಂತ ಹೆಚ್ಚಿರಬಾರದು. ನಗರ ಪಾಲಿಕೆಗಳ ಮೇಯರ್‌ ಮತ್ತು ಉಪಮೇಯರ್‌ ಆಡಳಿತಾವಧಿ 30 ತಿಂಗಳು (ಎರಡೂವರೆ ವರ್ಷ) ನಿಗದಿ ಮಾಡಬೇಕು, ವಾರ್ಡ್‌ ಸಮಿತಿಗಳ ಪದಾವಧಿ 20 ತಿಂಗಳಿಗೆ ನಿಗದಿ ಮಾಡುವಂತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಸಕರೇ ಸುಪ್ರೀಂ:

ನಗರ ಪಾಲಿಕೆಗಳ ರಚನೆಯಾದರೂ ವಿಧಾನಸಭಾ ಕ್ಷೇತ್ರವಾರು ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ರೂಪಿಸಲು ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಕ್ಷೇತ್ರ ಸಮಾಲೋಚನೆ ಮತ್ತು ಸಮನ್ವಯ ಸಮಿತಿ ರಚಿಸಬೇಕು. ವಿಧಾನಪರಿಷತ್‌ ಸದಸ್ಯರು, ಬಿಬಿಎಂಪಿ ಸದಸ್ಯರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಹಾಗೆಯೇ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಜನಸಂಖ್ಯೆಯನ್ನಾಧರಿಸಿ ಕ್ಷೇತ್ರ ಮಟ್ಟದ ಅಭಿವೃದ್ಧಿ ನಿಧಿ ಸ್ಥಾಪಿಸಲು ವಿಧೇಯಕದಲ್ಲಿ ಅವಕಾಶ ನೀಡಬೇಕು ಎಂದು ತಿಳಿಸಲಾಗಿದೆ.

ತ್ಯಾಜ್ಯಕ್ಕೆ ಹೆಚ್ಚುವರಿ ಕರ ನಿಗದಿಗೆ ಸೂಚನೆ

ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರದ ನಿರ್ಧರಿಸಿದಂತೆ ಘನತ್ಯಾಜ್ಯ ನಿರ್ವಹಣೆಗೆ ತ್ಯಾಜ್ಯ ಉಪಕರ ವಸೂಲಿ ಮಾಡಬಹುದು. ಅದರೊಂದಿಗೆ ಹೆಚ್ಚುವರಿಯಾಗಿ ನಿರ್ಮಾಣ ಹಂತದ ಕಟ್ಟಡಗಳಿಗೆ ಮೂಲಸೌಕರ್ಯ ಉಪಕರ, ಮನರಂಜನಾ ಮತ್ತು ವಿನೋದ ಕಾರ್ಯಕ್ರಮಗಳ ಮೇಲೆ ತೆರಿಗೆ ವಿಧಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. 

ಆಸ್ತಿ ತೆರಿಗೆ ಬಾಕಿಗೆ 2 ವರ್ಷ ಅವಕಾಶ:

ನಗರ ಪಾಲಿಕೆಗಳ ಆರ್ಥಿಕ ಪರಿಸ್ಥಿತಿ ಸದೃಢಗೊಳಿಸಲು ಹಾಗೂ ಆಸ್ತಿ ತೆರಿಗೆ ಬಾಕಿ ಪ್ರಮಾಣ ಹೆಚ್ಚದಂತೆ ಮಾಡಲು ಆಸ್ತಿ ತೆರಿಗೆ ಬಾಕಿ ಉಳಿಸಿಕೊಳ್ಳಲು 2 ವರ್ಷ ಮಾತ್ರ ಅವಕಾಶ ನೀಡಬೇಕು. 2 ವರ್ಷಗಳ ನಂತರವೂ ತೆರಿಗೆ ಬಾಕಿ ಉಳಿಸಿಕೊಂಡರೆ ಆಸ್ತಿ ಜಪ್ತಿ ಮಾಡಬೇಕು. ಆನಂತರದ ಒಂದು ವರ್ಷದಲ್ಲಿ ಜಪ್ತಿ ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ವರದಿಯಲ್ಲಿ ತಿಳಿಸಲಾಗಿದೆ.

ಹಾಗೆಯೇ, ನಗರ ಪಾಲಿಕೆಗಳ ಒಡೆತನದ ಸ್ಥಿರ ಆಸ್ತಿಗಳ ಪೈಕಿ 5 ಸಾವಿರ ಚದರ ಅಡಿಗೂ ಹೆಚ್ಚಿನ ವಿಸ್ತೀರ್ಣದ ಆಸ್ತಿಗಳನ್ನು 5 ವರ್ಷಕ್ಕೆ ಮಾತ್ರ ಭೋಗ್ಯಕ್ಕೆ ನೀಡಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಅವಧಿಗೆ ಭೋಗ್ಯಕ್ಕೆ ನೀಡಬೇಕಾದರೆ ಸರ್ಕಾರದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದೂ ತಿಳಿಸಲಾಗಿದೆ.