ಸಾರಾಂಶ
ಪ್ರಯಾಣಿಕರ ದರ ಹೆಚ್ಚಳದ ಸಾಕಷ್ಟು ವಿರೋಧ ಎದುರಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಈಗ ಸಂಚಾರದಿಂದ ಬರುವ ಆದಾಯ ಹೊರತುಪಡಿಸಿ ಜಾಹೀರಾತು, ಬಾಡಿಗೆ ಸೇರಿ ಇನ್ನಿತರ ಮೂಲಗಳಿಂದ ವಾರ್ಷಿಕ ₹100 ಕೋಟಿ ಆದಾಯ ಗಳಿಸಲು ಮುಂದಾಗಿದೆ.
ಮಯೂರ್ ಹೆಗಡೆ
ಬೆಂಗಳೂರು : ಪ್ರಯಾಣಿಕರ ದರ ಹೆಚ್ಚಳದ ಸಾಕಷ್ಟು ವಿರೋಧ ಎದುರಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಈಗ ಸಂಚಾರದಿಂದ ಬರುವ ಆದಾಯ ಹೊರತುಪಡಿಸಿ ಜಾಹೀರಾತು, ಬಾಡಿಗೆ ಸೇರಿ ಇನ್ನಿತರ ಮೂಲಗಳಿಂದ ವಾರ್ಷಿಕ ₹100 ಕೋಟಿ ಆದಾಯ ಗಳಿಸಲು ಮುಂದಾಗಿದೆ.
ಸದ್ಯ ಸಂಚಾರ ಹೊರತುಪಡಿಸಿ ಬೇರೆ ಬೇರೆ ಮೂಲಗಳಿಂದ ಬಿಎಂಆರ್‌ಸಿಎಲ್ ಶೇ.7ರಷ್ಟು ಆದಾಯ ಪಡೆಯುತ್ತಿದ್ದು, ಅದನ್ನು ಶೇ.10ಕ್ಕೆ ಹೆಚ್ಚಿಸಿಕೊಳ್ಳಲು ಉದ್ದೇಶಿಸಿದೆ. ಅದಕ್ಕಾಗಿ ಮುಂದಿನ ಒಂದು ವರ್ಷದಲ್ಲಿ ನಿಲ್ದಾಣಗಳಲ್ಲಿ ಜಾಹೀರಾತು ಅಳವಡಿಕೆ ಮೂಲಕ ₹30 ಕೋಟಿ, ನಿಲ್ದಾಣಗಳ ಸ್ಥಳದಲ್ಲಿ ಭಾಗಶಃ ಕಂಪನಿ, ಬ್ರ್ಯಾಂಡ್‌ಗಳ ನಾಮಕರಣ ಒಪ್ಪಂದದಿಂದ ₹30 ಕೋಟಿ, ರೈಲುಗಳಿಂದ ವಾರ್ಷಿಕ ₹25 ಕೋಟಿ ಹಾಗೂ ನಿಲ್ದಾಣಗಳಲ್ಲಿನ ಖಾಲಿಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ಕೊಡುವುದರ ಮೂಲಕ ₹ 15 ಕೋಟಿ ಸೇರಿ ಒಟ್ಟಾರೆ ₹ 100 ಕೋಟಿ ಮೊತ್ತವನ್ನು ಗಳಿಸಲು ಉದ್ದೇಶಿಸಿದೆ.
ರೈಲಿನ ಹೊರಭಾಗಕ್ಕೂ ಜಾಹೀರಾತು:
ಸದ್ಯ ಮೆಟ್ರೋ ರೈಲುಗಳ ಒಳಗೆ ಮಾತ್ರ ಜಾಹೀರಾತು ಭಿತ್ತಿಪತ್ರದ ಮೂಲಕ ಬಿಎಂಆರ್‌ಸಿಎಲ್ ಆದಾಯ ಗಳಿಸುತ್ತಿದೆ. ಶೀಘ್ರದಲ್ಲೇ ಸುಮಾರು ಹತ್ತು ರೈಲು ಬೋಗಿ ಹೊರಭಾಗದಲ್ಲಿ ಜಾಹೀರಾತು ಭಿತ್ತಿಪತ್ರ ಅಳವಡಿಕೆ ಮಾಡಲು ಮುಂದಾಗಿದೆ. ಇದರಿಂದ ಬೋಗಿಯ ಹೊರಭಾಗದ ಅಂದ ಹಾಳಾಗುವುದಿಲ್ಲ. ಕಿಟಕಿ ಭಾಗಕ್ಕೆ ಜಾಹೀರಾತು ಇರಲಾರದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಮೆಟ್ರೋ ರೈಲ್ವೇ ಬೋಗಿ ಮೇಲೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಸರ್ಕಾರದ ಜಾಹೀರಾತು ಅಳವಡಿಸಲಾಗಿತ್ತು. ರೈಲು ಬೋಗಿಗಳ ಒಳಗೆ ಹಾಗೂ ಹೊರಗಿನ ಜಾಹೀರಾತು ಭಿತ್ತಿ ಅಳವಡಿಕೆ, ನಿರ್ವಹಣೆಗೆ ಎರಡು ಏಜೆನ್ಸಿಗಳನ್ನು ಆಯ್ಕೆ ಮಾಡಲಾಗಿದೆ. ರೈಲಿನ ಹೊರಭಾಗದಲ್ಲಿ ಜಾಹೀರಾತು ಅಳವಡಿಕೆ ಸಂಬಂಧ ಮೆಟ್ರೋ ಅಧಿಕಾರಿಗಳ ತಂಡ ದೇಶದ ಬೇರೆ ಮೆಟ್ರೋದಲ್ಲಿ ಇರುವ ಈ ವ್ಯವಸ್ಥೆಯನ್ನು ಪರಿಶೀಲಿಸಿ ಬಂದಿದೆ ಎಂದು ತಿಳಿಸಿದರು.
ನಿಲ್ದಾಣಗಳಿಂದ ಆದಾಯ:
ಇತ್ತೀಚೆಗೆ ಆಯ್ದ 60ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಜಾಹೀರಾತು ಅಳವಡಿಕೆಗೆ ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. ನೇರಳೆ ಮಾರ್ಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ವರೆಗೆ ಮೊದಲ ಪ್ಯಾಕೇಜ್ ಮತ್ತು ಹಸಿರು ಮಾರ್ಗ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗಿನ ನಿಲ್ದಾಣಗಳ ಒಳಗೆ ಎರಡನೇ ಪ್ಯಾಕೇಜ್‌ನಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ನೀಡುತ್ತಿದೆ. ಜನರ ಓಡಾಟ ಆಧರಿಸಿ ಜಾಹೀರಾತು ಪ್ರದೇಶಗಳನ್ನು ಎ,ಬಿ,ಸಿ,ಡಿ, ಎಂದು ವರ್ಗೀಕರಿಸಲಾಗಿದೆ.
ಮೆಟ್ಟಿಲು, ಲಿಫ್ಟ್, ಎಸ್ಕಲೇಟರ್ ಸೇರಿ ನಿಲ್ದಾಣದ ಖಾಲಿ ಜಾಗದಲ್ಲಿ ಡಿಜಿಟಲ್ ಹಾಗೂ ಭಿತ್ತಿ ಜಾಹೀರಾತು ಫಲಕ ಅಳಡಿಸಲು ಮುಂದಾಗಿದೆ. ಇದಕ್ಕಾಗಿ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ 6 ಸಾವಿರ ಚ.ಮೀ ಹಾಗೂ ಉಳಿದ ನಿಲ್ದಾಣದಲ್ಲಿ 3 ಸಾವಿರ ಚದರ ಮೀಟರ್ ಸ್ಥಳಾವಕಾಶ ನೀಡಿದೆ. ಕೆಲವು ನಿಲ್ದಾಣದಲ್ಲಿ ಹೆಚ್ಚುವರಿ ಸ್ಥಳಾವಕಾಶಕ್ಕೂ ಅವಕಾಶ ಮಾಡಿಕೊಡಲಾಗಿದೆ. ಶೀಘ್ರವೇ ಹಳದಿ ಮಾರ್ಗ ಕೂಡ ತೆರೆಯುವುದರಿಂದ ಇಲ್ಲಿಂದಲೂ ಜಾಹೀರಾತು ಆದಾಯವನ್ನು ಬಿಎಂಆರ್‌ಸಿಎಲ್ ನಿರೀಕ್ಷಿಸಿದೆ.
ಇದರ ಜೊತೆಗೆ 67 ಮೆಟ್ರೋ ನಿಲ್ದಾಣದ ವಿವಿಧ ಸ್ಥಳಗಳಲ್ಲಿ ಕಂಪನಿಗಳ ಹೆಸರು, ಬ್ರ್ಯಾಂಡ್‌ಗಳ ಹೆಸರನ್ನು ನಾಮಕರಣ ಮಾಡಿ ಅದರಿಂದಲೂ ಆದಾಯ ಗಳಿಸಿಕೊಳ್ಳಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.
75 ಸ್ಥಳಗಳಲ್ಲಿ ಅಂಗಡಿ, ಎಟಿಎಂಗೆ ಟೆಂಡರ್
ಮೆಜಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣ ಸೇರಿದಂತೆ ಯಶವಂತಪುರ, ಇಂದಿರಾನಗರ, ಟ್ರಿನಿಟಿ, ಗೊರಗುಂಟೆಪಾಳ್ಯ, ಎಂ.ಜಿ.ರಸ್ತೆ, ಕೋಣನಕುಂಟೆ, ಲಾಲ್‌ಬಾಗ್, ಜಯನಗರ ಸೇರಿ ಇತರ ಮೆಟ್ರೋ ನಿಲ್ದಾಣಗಳಲ್ಲಿನ 75 ಸ್ಥಳಗಳಲ್ಲಿನ್ನು ಅಂಗಡಿ ಮುಂಗಟ್ಟು, ಬ್ಯಾಂಕ್ ಎಟಿಎಂ ಸೇರಿ ಇತರೆ ಉದ್ದೇಶಕ್ಕೆ ಟೆಂಡರ್ ಕರೆಯಲಾಗಿದೆ. ಈ ತಿಂಗಳಲ್ಲಿ ಇನ್ನೊಂದು ಪ್ಯಾಕೇಜ್‌ನಲ್ಲಿ 140ಕ್ಕೂ ಅಧಿಕ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ನೀಡಲಾಗುವುದು. ನಿಲ್ದಾಣಗಳನ್ನು ಕೂಡ ಅವುಗಳ ಜನಸಂಚಾರ ಸಾಮರ್ಥ್ಯದ ಮೇರೆಗೆ ಎ,ಬಿ,ಸಿ,ಡಿ ಎಂದು ವರ್ಗೀಕರಿಸಿ ಬಾಡಿಗೆ ದರ ನಿಗದಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.