ಬೆಂಗಳೂರು ಮೆಟ್ರೋಗೆ ಹೆಬ್ಬಾಳದ 45 ಎಕರೆ ಭೂಮಿ - ಹಸ್ತಾಂತರ ಕುರಿತು ಫೆ. 28ಕ್ಕೆ ಸಭೆ ನಿಗದಿ

| N/A | Published : Feb 27 2025, 07:28 AM IST

Namma Metro

ಸಾರಾಂಶ

ಬೆಂಗಳೂರು ಮೆಟ್ರೋ ರೈಲು ನಿಗಮದ ಮೂರನೇ ಹಂತದ ಮೆಟ್ರೋ ಯೋಜನೆಗೆ ಹೆಬ್ಬಾಳದಲ್ಲಿನ 45 ಎಕರೆ ಜಮೀನು ಹಸ್ತಾಂತರ ವಿಚಾರದಲ್ಲಿ ಉಂಟಾಗಿರುವ ಕಗ್ಗಂಟು ನಿವಾರಣೆಗೆ ಫೆ. 28ರಂದು   ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಭೆ ನಡೆಯಲಿದೆ.

  ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮದ ಮೂರನೇ ಹಂತದ ಮೆಟ್ರೋ ಯೋಜನೆಗೆ ಹೆಬ್ಬಾಳದಲ್ಲಿನ 45 ಎಕರೆ ಜಮೀನು ಹಸ್ತಾಂತರ ವಿಚಾರದಲ್ಲಿ ಉಂಟಾಗಿರುವ ಕಗ್ಗಂಟು ನಿವಾರಣೆಗೆ ಫೆ. 28ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಎಂ.ಬಿ.ಪಾಟೀಲ್‌ ಅವರ ನೇತೃತ್ವದಲ್ಲಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಭೆ ನಡೆಯಲಿದೆ.

ಸಭೆಯಲ್ಲಿ ‘ಮಲ್ಟಿ ಮಾಡಲ್‌ ಟ್ರಾನ್ಸ್‌ಪೋರ್ಟ್‌ ಹಬ್‌’ ನಿರ್ಮಿಸುವ ಬಿಎಂಆರ್‌ಸಿಎಲ್‌ ಯೋಜನೆ ಕೈಗೂಡುತ್ತದೆಯೆ ಇಲ್ಲವೆ ಎಂಬುದು ಈ ಸಭೆಯಲ್ಲಿ ನಿರ್ಧಾರವಾಗಲಿದೆ. ಕಳೆದ ಅಕ್ಟೋಬರ್‌ನಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಬಿಎಂಆರ್‌ಸಿಎಲ್‌ಗೆ ಭೂಮಿ ನೀಡುವ ಬಗ್ಗೆ ನಿರ್ಧಾರ ಆಗಿರಲಿಲ್ಲ. ಹೀಗಾಗಿ ಮತ್ತೊಂದು ಸುತ್ತಿನ ಸಭೆ ನಡೆಯುತ್ತಿದೆ. ರಿಯಲ್‌ ಎಸ್ಟೇಟ್‌ ಲಾಬಿಯ ಕಾರಣದಿಂದ ಬಿಎಂಆರ್‌ಸಿಎಲ್‌ಗೆ ಭೂಮಿ ಹಸ್ತಾಂತರ ಆಗುತ್ತಿಲ್ಲವೆ ಎಂಬ ಸಂಶಯ ಇರುವುದರಿಂದ ಸಭೆಯ ನಿರ್ಣಯದತ್ತ ನಗರ ಸಾರಿಗೆ ತಜ್ಞರು ಕಣ್ಣಿಟ್ಟಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ, ಉದ್ಯಮಿ ಮೋಹನ್‌ದಾಸ್‌ ಪೈ ಸೇರಿ ಹಲವರು ‘ನಮ್ಮ ಮೆಟ್ರೋ’ಗೆ ಈ ಭೂಮಿಯನ್ನು ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

45 ಎಕರೆ ಬೇಕು:

ಹೆಬ್ಬಾಳದ ಭೂಮಿಯನ್ನು 2000ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಖಾಸಗಿ ಕಂಪನಿಗಾಗಿ 55ಎಕರೆ ಭೂಸ್ವಾಧೀನ ಮಾಡಿಕೊಂಡಿತ್ತು. . ಆದರೆ, ಇಲ್ಲಿ ಕಂಪನಿ ಕೆಲಸ ಆರಂಭಿಸದ ಕಾರಣ ಬಿಎಂಆರ್‌ಸಿಎಲ್‌ ಎಕರೆಗೆ ತಲಾ ₹ 12.10 ಕೋಟಿಯಂತೆ ಒಟ್ಟಾರೆ ₹ 551.15 ಕೋಟಿ ನೀಡುವುದಾಗಿ ಹೇಳಿ ಭೂಮಿ ನೀಡುವಂತೆ ಕೋರಿದೆ. ಇಲ್ಲಿಯೇ ಬಿಎಂಆರ್‌ಸಿಎಲ್‌ ಮೊದಲು 6712.97 ಚ.ಮೀ ಜಾಗವನ್ನು ಕೇಳಿತ್ತು. ಆಗ ಕೆಐಎಡಿಬಿ ನಿಗದಿಸಿದಂತೆ ಎಕರೆಗೆ ₹ 12.10ಕೋಟಿ ನೀಡಿ ಖರೀದಿ ಮಾಡಿದೆ. ಮುಂದುವರಿದು 3ನೇ ಹಂತದ ಯೋಜನೆಗೆ 45 ಎಕರೆ ಕೇಳುತ್ತಿದೆ.

ಸಮಸ್ಯೆ ಏನಾಗಿದೆ:

ತಾಂತ್ರಿಕವಾಗಿ ಭೂಮಿ ಕೆಐಎಡಿಬಿ ಬಳಿಯಿದೆ. ಆದರೆ, ಭೂಸ್ವಾದೀನ ಮಾಡಿಕೊಂಡಿದ್ದು ಖಾಸಗಿ ಕಂಪನಿಗಾಗಿ. ಕೆಐಎಡಿಬಿ ಮೂಲಕ ಸರ್ಕಾರ ನೇರವಾಗಿ ಭೂಮಿ ಹಸ್ತಾಂತರಕ್ಕೆ ಮುಂದಾದಲ್ಲಿ ಕಂಪನಿಯು ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆಯಿದೆ. ಇದರಿಂದ 10-12ವರ್ಷ ವ್ಯಾಜ್ಯ ನಡೆಯುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ ಬಿಎಂಆರ್‌ಸಿಎಲ್‌ ಸಂಸ್ಥೆಯೇ ಕಂಪನಿ ಜೊತೆ ಮಾತನಾಡಿ ಮನವೊಲಿಸಲಿ ಎಂಬುದು ಕಳೆದ ಸಭೆಯಲ್ಲಿ ಸರ್ಕಾರದ ಇಂಗಿತವಾಗಿತ್ತು.

ಏನು ಪ್ರಯೋಜನ

ಹೆಬ್ಬಾಳದಲ್ಲಿ ಜೆ.ಪಿ.ನಗರದ 4ನೇ ಹಂತದಿಂದ ಕೆಂಪಾಪುರ ಸಂಪರ್ಕಿಸುವ ಮೆಟ್ರೋ 3ನೇ ಹಂತದ (ಕಿತ್ತಳೆ ಮಾರ್ಗ) ಹೆಬ್ಬಾಳ ನಿಲ್ದಾಣ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಇಲ್ಲಿ ನೀಲಿ ಮಾರ್ಗ ನಿಲ್ದಾಣ ಹಾಗೂ ಕೆಂಪು ಮಾರ್ಗ ಮಾರ್ಗದ ನಿಲ್ದಾಣ ನಿರ್ಮಿಸುವ ಉದ್ದೇಶ ಹೊಂದಿದೆ. ಜತೆಗೆ ಇಲ್ಲಿ ಉಪನಗರ ರೈಲು ಯೋಜನೆಯ ನಿಲ್ದಾಣ ಕೆ-ರೈಡ್‌ನಿಂದ ನಿರ್ಮಾಣ ಆಗಲಿದೆ. ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್, ಮಲ್ಟಿ ಮಾಡಲ್ ಹಬ್, ಬಸ್ ನಿಲ್ದಾಣ, ಮೆಟ್ರೋದ ಚಿಕ್ಕ ಡಿಪೋ ಕೂಡ ನಿರ್ಮಿಸುವ ಪ್ರಸ್ತಾಪವಿದೆ.