ಸಾರಾಂಶ
ಬೆಂಗಳೂರು : ಮೆಟ್ರೋ ಪ್ರಯಾಣ ದರ ಏರಿಕೆ ವಿರುದ್ಧ ಹೋರಾಟ ತೀವ್ರವಾಗಿಸಲು ನಿರ್ಧರಿಸಿರುವ ‘ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ’, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದರ ಇಳಿಕೆಗಾಗಿ ಮನವಿ ಸಲ್ಲಿಸುವ ಜೊತೆಗೆ ರಾಜ್ಯಪಾಲರು, ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿಕೊಳ್ಳಲು ನಿರ್ಣಯಿಸಿದೆ.
ಬೆಂಗಳೂರು ಉಳಿಸಿ ಸಮಿತಿ ಸಹಯೋಗದಲ್ಲಿ ಭಾನುವಾರ ಸ್ಕೌಟ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಸಮಾವೇಶದಲ್ಲಿ ವಿವಿಧ ಸಂಘಟನೆಗಳ ಮುಖಂಡರು ದರ ಏರಿಕೆಯನ್ನು ಖಂಡಿಸಿ, ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಬೆಂಗಳೂರಿನ ಐಐಎಸ್ಸಿ ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ। ಆಶಿಶ್ ವರ್ಮಾ ಮಾತನಾಡಿ, ಜನತೆಗೆ ಕೈಗೆಟುಕುವ ದರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಟ್ರಾಫಿಕ್ ದಟ್ಟಣೆ ನಿವಾರಣೆ ಜೊತೆಗೆ ಪ್ರಮುಖವಾಗಿ ನಗರದ ವಾಯು ಗುಣಮಟ್ಟ ಸುಧಾರಣೆ, ಜನತೆಯ ಆರೋಗ್ಯ ದೃಷ್ಟಿಯಿಂದ ಸರ್ಕಾರ ದುಬಾರಿ ದರ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.ನಿಮ್ಮ ಹೊರೆ ನಮ್ಮ ಮೇಲೆ ಬೇಡ:
ಸಾರ್ವಜನಿಕ ಸಾರಿಗೆಯ ಆರ್ಥಿಕ ಹೊರೆಯನ್ನು ದೈನಂದಿನ ಪ್ರಯಾಣಿಕರ ಹೆಗಲ ಮೇಲೆ ಹೇರಬಾರದು. ಬದಲಿಗೆ ಸರ್ಕಾರ ಕಾರ್ಯತಂತ್ರದ ರೂಪಿಸಿ ಆದಾಯ ಮೂಲಗಳ ಮೂಲಕ ಅದನ್ನು ನಿರ್ವಹಿಸಬೇಕು ಎಂದು ಡಾ। ವರ್ಮಾ ವಾದಿಸಿದರು. ಮೆಟ್ರೋ ಸಾರ್ವಜನಿಕ ಸೇವೆಯ ಬದಲು ಲಾಭಕ್ಕೆ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದ ಅವರು, ದರ ನಿಗದಿ ಕಾರ್ಯವಿಧಾನಗಳಲ್ಲಿ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದರು.
‘ಸೇವ್ ಬೆಂಗಳೂರು ಸಮಿತಿ’ ವಿ.ಎನ್.ರಾಜಶೇಖರ್ ಮಾತನಾಡಿ, ಸಾಲ ಮರುಪಾವತಿಯ ಆಧಾರ, ಆರ್ಥಿಕ ಹೊರೆಯ ಕಾರಣ ನೀಡಿ ಬಿಎಂಆರ್‌ಸಿಎಲ್‌ನ ಪ್ರಯಾಣ ದರ ಹೆಚ್ಚಳ ಮಾಡಿರುವುದು ಅಸಂಬಂಧ. ಹಾಗೆ ನೋಡಿದಲ್ಲಿ, ಸದ್ಯ ಸಾಲ ಮರುಪಾವತಿಗಾಗಿ ಪ್ರತಿದಿನ ₹3 ಕೋಟಿ (ವರ್ಷಕ್ಕೆ ₹1,080 ಕೋಟಿ) ಗಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಇದು 2029-30ರ ವೇಳೆಗೆ ಪ್ರತಿದಿನ ₹7.6 ಕೋಟಿ (ವರ್ಷಕ್ಕೆ ₹2,776.58 ಕೋಟಿ) ಏರಿಕೆಯಾಗಲಿದೆ ಎಂದು ಅಂದಾಜಿಸಿದರು. ಆಗ ದರಗಳು ನಾಲ್ಕು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ಪ್ರತಿ ಕಿಲೋಮೀಟರ್‌ಗೆ ₹5 (ಗರಿಷ್ಠ ₹90) ಇದ್ದು, ಮುಂದೆ ಪ್ರತಿ ಕಿಲೋಮೀಟರ್‌ಗೆ ₹20 (ಗರಿಷ್ಠ ₹400) ಕ್ಕೆ ಏರಲಿದೆ ಎಂದರು.ಸೆಸ್ ಬಗ್ಗೆ ತಿಳಿಸಿ:
‘ಮೆಟ್ರೋ ಸೆಸ್’ ಬಗ್ಗೆ ಪ್ರಶ್ನಿಸಿದ ಅವರು, ಆರು ವರ್ಷ ಪೆಟ್ರೋಲ್, ಡೀಸೆಲ್ ಮತ್ತು ಆಸ್ತಿ ನೋಂದಣಿಯಿಂದ ಸಂಗ್ರಹವಾದ ಸೆಸ್ ಆದಾಯದ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು. ವಿದೇಶಿ ಹೂಡಿಕೆ ಒಪ್ಪಂದಗಳ ಷರತ್ತು ಮತ್ತು ಕಾರ್ಯಾಚರಣಾ ವೆಚ್ಚ, ಲಾಭಗಳನ್ನು ನಿರ್ಣಯದ ಬಗ್ಗೆ ಸಿಎಜಿ ಆಡಿಟ್ ನಡೆಸಬೇಕು ಒತ್ತಾಯಿಸಿದರು.
ಸೇವ್ ಬೆಂಗಳೂರು ಸಮಿತಿಯ ಎನ್.ರವಿ ಮಾತನಾಡಿ, ಅವೈಜ್ಞಾನಿಕವಾಗಿ ದರ ಏರಿಸಿರುವ ಹಾಗೂ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲಿ ಕೊಂಚ ಇಳಿಸುವ ಮೂಲಕ ಪ್ರಯಾಣಿಕರ ಮೂಗಿಗೆ ಬಿಎಂಆರ್‌ಸಿಎಲ್ ತುಪ್ಪ ಸವರಿದೆ. ದರ ಇಳಿಕೆಗಾಗಿ ಚಳವಳಿ ನಡೆಸುವ ಅಗತ್ಯವಿದೆ. ಮೆಟ್ರೋ ದರ ಹೆಚ್ಚಳದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಂಘಟನೆ ನಿರ್ಧರಿಸಿದ್ದು, ಹೋರಾಟ ಮುಂದುವರಿಸುವುದಾಗಿ ಹೇಳಿದರು.ಮಧ್ಯಮ ಕುಟುಂಬಕ್ಕೆ ಹೊಡೆತ:
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಹ ಪ್ರಾಧ್ಯಾಪಕಿ ಡಾ। ಮೇಘನಾ ವರ್ಮಾ ಮಾತನಾಡಿ, ಮೆಟ್ರೋ ವಿಶೇಷವಾಗಿ ಮಹಿಳೆಯರು ಮತ್ತು ಅಂಗವಿಕಲರಿಗೆ ಅನುಕೂಲವಾಗಿದೆ. ಹೆಚ್ಚುತ್ತಿರುವ ದರದಿಂದ ತಿಂಗಳಿಗೆ ₹20 ಸಾವಿರ - ₹30 ಸಾವಿರ ದುಡಿವ ಈ ವರ್ಗಕ್ಕೆ ತೊಂದರೆಯಾಗಲಿದೆ. ಬೆಂಗಳೂರಿನಂತಹ ಪ್ರಗತಿಶೀಲ ನಗರಕ್ಕೆ ಕ್ರಿಯಾತ್ಮಕ ಮತ್ತು ಕೈಗೆಟುಕುವ ಮೆಟ್ರೋ ವ್ಯವಸ್ಥೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಾಸ್ತಾವಿಕ ಮಾತನಾಡಿದ ಸಂಘಟನೆ ಅಧ್ಯಕ್ಷ ರಾಜೇಶ್ ಭಟ್ ಅವರು, ಮೆಟ್ರೋ ದರ ಹೆಚ್ಚಳದ ವಿರುದ್ಧ 10 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹಿಸಿದ್ದೇವೆ. ಸಾಕಷ್ಟು ಮಧ್ಯಮ ವರ್ಗದ ಪ್ರಯಾಣಿಕರು ದರ ಏರಿಕೆ ಬಳಿಕ ಮೆಟ್ರೋ ತೊರೆದಿದ್ದಾರೆ. ಪ್ರತಿದಿನ ವೆಬಿನಾರ್‌ನಲ್ಲಿ ಜನ ಇದನ್ನು ಹೇಳಿಕೊಂಡಿದ್ದು, ಇದರ ವಿರುದ್ಧ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
ಸೇವ್ ಬೆಂಗಳೂರು ಸಮಿತಿಯ ಸದಸ್ಯ ಡಾ। ಜಿ.ಶಶಿಕುಮಾರ್, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಪ್ರೊ.ಮುರುಗಿಯಪ್ಪ, ಮೆಡಿಕಲ್ ಸರ್ವಿಸ್ ಸೆಂಟರ್ ಕರ್ನಾಟಕ ರಾಜ್ಯಾಧ್ಯಕ್ಷೆ ಡಾ। ಸುಧಾ ಕಾಮತ್ ಮಾತನಾಡಿದರು.
ಸಮ್ಮೇಳನದಲ್ಲಿ ಕೇಳಿಬಂದ ಮಾತುಗಳು
*ಟ್ರಾಫಿಕ್ ದಟ್ಟಣೆ ನಿವಾರಣೆ, ವಾಯು ಗುಣಮಟ್ಟ ಸುಧಾರಣೆಗೆ ಮೆಟ್ರೋ ಅಗತ್ಯ
*ಜನತೆಯ ಆರೋಗ್ಯ ದೃಷ್ಟಿಯಿಂದ ಸರ್ಕಾರ ದುಬಾರಿ ದರ ನಿರ್ಧಾರ ಸೂಕ್ತವಲ್ಲ
*ಆರ್ಥಿಕ ಹೊರೆಯ ಕಾರಣ ನೀಡಿ ಪ್ರಯಾಣ ದರ ಹೆಚ್ಚಳ ನಿಜಕ್ಕೂ ಅಸಂಬಂಧ
*ಪೆಟ್ರೋಲ್, ಡೀಸೆಲ್, ಆಸ್ತಿ ನೋಂದಣಿಯ ಸೆಸ್ ಬಗ್ಗೆ ಮಾಹಿತಿಗಾಗಿ ಆಗ್ರಹ