ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ರೋಟರಿ ಮಡಿಕೇರಿ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಗರ್ಭಕಂಠದ ಕ್ಯಾನ್ಸರ್ ನಿರೋಧಕ ಲಸಿಕೆ ವಿತರಿಸಲಾಯಿತು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರಿನ ಮದರ್‌ಹುಡ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸೋನಿಯಾ ಮಂದಪ್ಪ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರನ್ನು ಕಾಡುತ್ತಿರುವ ಅತಿ ಮಾರಕ ಕಾಯಿಲೆಯಾಗಿದ್ದು, ಪ್ರತಿ 8 ನಿಮಿಷಕ್ಕೆ ಒಂದು ಮಹಿಳೆ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ. ಇದು ಬಾರದಂತೆ ತಡೆಗಟ್ಟಲು ಲಸಿಕೆಯ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ 9 ರಿಂದ 14 ವಯಸ್ಸಿನ ಮಕ್ಕಳಿಗೆ ಹೆಚ್‌ಪಿವಿ ಲಸಿಕೆ ನೀಡಲಾಗುತ್ತಿದ್ದು, ಈ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲೆ ಕೆ.ವಿ.ಶಶಿಕಲಾ ಮಾತನಾಡಿ, ಯುವ ಶಕ್ತಿಯನ್ನು ಜಾಗೃತಗೊಳಿಸಿ, ಪ್ರೋತ್ಸಾಹಿಸುವ ಕಾರ್ಯ ರೋಟರಿ ಸಂಸ್ಥೆಯಿಂದ ಆಗುತ್ತಿದೆ. ಈ ಸಂಸ್ಥೆ ಆರೋಗ್ಯವಂತ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವುದು ಶ್ಲಾಘನೀಯ ಎಂದರು.ರೋಟರಿ ಜಿಲ್ಲಾ ಮಾಜಿ ಗವರ್ನರ್ ರೋಟರಿಯನ್ ಸುರೇಶ್ ಚಂಗಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಜವಾಬ್ದಾರಿಯುತ ವ್ಯಕ್ತಿಗಳಾಗಬೇಕು. ಜವಾಬ್ದಾರಿ ಇದ್ದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಮಾಜಿ ಗವರ್ನರ್ ಡಾ. ರವಿ ಅಪ್ಪಾಜಿ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಅರಿವು ಅಗತ್ಯ. ವಿದ್ಯಾರ್ಥಿನಿಯರು ಆರಂಭಿಕ ಹಂತದಲ್ಲೇ ಈ ಬಗ್ಗೆ ಜಾಗೃತರಾಗಬೇಕು, ಲಸಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಮಡಿಕೇರಿ ಅಧ್ಯಕ್ಷ ಸುದಯ್ ನಾಣಯ್ಯ, ರೋಟರಿ ಕ್ಲಬ್ ಮಡಿಕೇರಿ, ರೋಟರಿ ಕ್ಲಬ್ ಮೈಸೂರು ಹಾಗೂ ದಿವಾಕರ್ ಸರ್ವಿಸ್ ಟ್ರಸ್ಟ್ ಸಹಯೋಗದಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಈಗಾಗಲೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಪೋಷಕರಿಗೆ ಒಪ್ಪಿಗೆ ಪತ್ರವನ್ನು ವಿತರಿಸಲಾಗಿದ್ದು, ಸುಮಾರು 50 ವಿದ್ಯಾರ್ಥಿನಿಯರು ಲಸಿಕೆ ಪಡೆಯಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿನಿಯರು ಈ ಬಗ್ಗೆ ಜಾಗೃತರಾಗಿ ಲಸಿಕೆ ಪಡೆಯುವಂತಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ವೃತ್ತಿಪರ ನಿರ್ದೇಶಕ ಅನಿಲ್ ಕೃಷ್ಣಾನಿ, ಸದಸ್ಯೆ ಮಲ್ಲಿಗೆ ಪೈ, ಮೈಸೂರಿನ ಮದರ್‌ಹುಡ್ ಆಸ್ಪತ್ರೆಯ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶಿವಕುಮಾರ್, ಚಂದನ್, ವಿಶಾಲ್ ಪ್ರಾರ್ಥಿಸಿದರು. ರೋಟರಿ ಸದಸ್ಯೆ ಲಲಿತಾ ರಾಘವನ್ ವಂದಿಸಿದರು. ಮಡಿಕೇರಿ ಪ್ರೌಢಶಾಲೆಯ 39 ವಿದ್ಯಾರ್ಥಿನಿಯರು, ಕಡಗದಾಳು ಸರ್ಕಾರಿ ಪ್ರೌಢಶಾಲೆಯ 8, ಕಕ್ಕಬ್ಬೆ ಪ್ರೌಢಶಾಲೆಯ 1 ಹಾಗೂ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಶಾಲೆಯ 2 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ವಿದ್ಯಾರ್ಥಿನಿಯರು ಲಸಿಕೆ ಪಡೆದುಕೊಂಡರು.