ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಆದ್ಯತೆ : ಸಚಿವೆ ಶೋಭಾ ಕರಂದ್ಲಾಜೆ

| N/A | Published : Mar 03 2025, 01:48 AM IST / Updated: Mar 03 2025, 07:27 AM IST

ಸಾರಾಂಶ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಬಟ್ಟೆ ವ್ಯಾಪಾರಿಗಳ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.

 ಬೆಂಗಳೂರು : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಬಟ್ಟೆ ವ್ಯಾಪಾರಿಗಳ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.

ಭಾನುವಾರ ನಗರದಲ್ಲಿ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘದಿಂದ ಆಯೋಜಿಸಲಾಗಿದ್ದ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ನೀಡಿದ್ದು, ಉತ್ತಮ ಬಜೆಟ್‌ ಮಂಡಿಸಲಾಗಿದೆ. ವ್ಯಾಪಾರಿಗಳು ಬಟ್ಟೆ ತಯಾರಿಸುವಾಗ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಗುಣಮಟ್ಟ ಉತ್ತಮವಾಗಿದ್ದರೆ ರಫ್ತು ಮಾಡಲು ಸಹಾಯಕವಾಗುತ್ತದೆ. ಆ ಮೂಲಕ ಹೆಚ್ಚು ಆದಾಯ ಗಳಿಸಬಹುದು ಎಂದು ಸಲಹೆ ನೀಡಿದರು.

ವ್ಯಾಪಾರಸ್ಥರ ಅನುಕೂಲಕ್ಕಾಗಿ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮೊದಲ ಬಾರಿ ನ್ಯಾಷನಲ್‌ ಟ್ರೇಡರ್ಸ್‌ ವೆಲ್ಫೇರ್‌ ಬೋರ್ಡ್‌ ಸ್ಥಾಪಿಸಿದೆ. ಇದರಿಂದಾಗಿ ವ್ಯಾಪಾರಸ್ಥರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಸೂಕ್ತ ದಾರಿ ಸಿಕ್ಕಂತಾಗಿದೆ. ವ್ಯಾಪಾರ, ವಹಿವಾಟು ಉತ್ತಮವಾದರೆ ವ್ಯಾಪಾರಿಗಳು, ರೈತರು ಸೇರಿದಂತೆ ಉತ್ಪಾದಕರಿಗೆ ಸಹಾಯಕವಾಗಲಿದೆ. ದೇಶದ ಪ್ರಗತಿಗೂ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಟ್ರೇಡ್‌ ಲೈಸೆನ್ಸ್‌ ಅನವಶ್ಯಕ:  ಸಂಘದ ಅಧ್ಯಕ್ಷ ಪ್ರಕಾಶ್‌ ಪಿರಗಲ್‌ ಮಾತನಾಡಿ, ಕೇಂದ್ರ ಸರ್ಕಾರ ಟ್ರೇಡರ್ಸ್‌ ವೆಲ್ಫೇರ್‌ ಬೋರ್ಡ್‌ ಸ್ಥಾಪಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಭೆ ಆಯೋಜನೆಯಾಗಿದ್ದು ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹರಿಸಬೇಕು. ವ್ಯಾಪಾರಿಗಳು ಜಿಎಸ್‌ಟಿ ಪ್ರಮಾಣಪತ್ರ ಹೊಂದಿರುವುದರಿಂದ ಪ್ರತ್ಯೇಕವಾಗಿ ರಾಜ್ಯ ಸರ್ಕಾರದಿಂದ ವ್ಯಾಪಾರ ಪರವಾನಗಿ ಅಗತ್ಯವಿಲ್ಲ. ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

20 ಕ್ಕಿಂತ ಕಡಿಮೆ ಕಾರ್ಮಿಕರಿರುವ ವ್ಯಾಪಾರಿಗಳಿಗೆ ಕಾರ್ಮಿಕ ಕಾನೂನಿನಿಂದ ವಿನಾಯಿತಿ ನೀಡಬೇಕು. ಏಕೆಂದರೆ ನೌಕರರ ಹಾಜರಾತಿ, ಸಂಬಳ ಮತ್ತಿತರ ವಿವರಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಸಣ್ಣ ಪುಟ್ಟ ಸಿದ್ಧ ಉಡುಪು ವ್ಯಾಪಾರಿಗಳಿಗೆ ತೂಕ ಮತ್ತು ಅಳತೆಗೆ ಸಂಬಂಧಿಸಿದ ಕಾನೂನುಗಳನ್ನು ಅನ್ವಯಿಸಬಾರದು ಎಂದು ಮನವಿ ಮಾಡಿದರು.

ನ್ಯಾಷನಲ್‌ ಟ್ರೇಡರ್ಸ್‌ ವೆಲ್ಫೇರ್‌ ಬೋರ್ಡ್‌ ಅಧ್ಯಕ್ಷ ಸುನಿಲ್‌ ಸಿಂಘಿ, ಸಂಘದ ಉಪಾಧ್ಯಕ್ಷ ನರೇಶ್‌ ಗುಪ್ತಾ, ಕಾರ್ಯದರ್ಶಿ ಯೋಗೇಶ್‌ ವಿ.ಸೇಠ್‌, ಜಂಟಿ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.