ಈಗಲಾದರೂ ಗದಗಿನತ್ತ ಕೈಗಾರಿಕೆ ಬರುತ್ತವೆಯೇ?

| Published : Feb 11 2025, 12:48 AM IST

ಸಾರಾಂಶ

ಸಮಾವೇಶದ ಮೂಲಕ ಜಿಲ್ಲೆಯಲ್ಲಿಯೂ ಕೃಷಿ ಆಧಾರಿತ ಬೃಹತ್ ಕೈಗಾರಿಕೆ ಸ್ಥಾಪನೆಗೆ ಒಡಂಬಡಿಕೆಯಾಗಲಿ, ಅಂತಹ ಪ್ರಯತ್ನಗಳು ಸರ್ಕಾರದಿಂದ ಆಗಲಿ ಎಂಬುದು ಜಿಲ್ಲೆಯ ಜನರ ಆಶಯ

ಶಿವಕುಮಾರ ಕುಷ್ಟಗಿ ಗದಗ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಇನ್ವೆಸ್ಟ್ ಕರ್ನಾಟಕ- 2025) ಬೆಂಗಳೂರಿನಲ್ಲಿ ಫೆ. 11ರಿಂದ 14ರ ವರೆಗೆ ನಡೆಯಲಿದೆ. ಈ ಸಮಾವೇಶದಲ್ಲಿ ಗದಗ ಜಿಲ್ಲೆಗೆ ಹೆಚ್ಚಿನ ಪ್ರಾಧಾನ್ಯ ಸಿಕ್ಕು ಕೈಗಾರಿಕೆಗಳು ಸ್ಥಾಪನೆಯಾಗಲಿ ಎನ್ನುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.

ರಾಜ್ಯದಲ್ಲಿಯೇ ಗದಗಿಗೆ ಯಾವುದೇ ಕೈಗಾರಿಕೆ ಹೊಂದಿರದ ಜಿಲ್ಲೆ ಎನ್ನುವ ಅಪಕೀರ್ತಿ ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ ಎಂದು ಜಿಲ್ಲೆಯ ಜನರು ಆಗ್ರಹಿಸುತ್ತಾರೆ.

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಜಿಲ್ಲೆಯ ಹಳ್ಳಿಗುಡಿ ವ್ಯಾಪ್ತಿಯಲ್ಲಿ ₹3600 ಕೋಟಿ ವೆಚ್ಚದ ಬೃಹತ್ ಸ್ಟೀಲ್ ಉತ್ಪಾದನಾ ಕಂಪನಿ ಪೋಸ್ಕೋ ಸ್ಥಾಪನೆಗೆ ಒಡಂಬಡಿಕೆಯಾಗಿತ್ತು. ಆದರೆ ಅದರ ಸ್ಥಾಪನೆಯಿಂದ ಜಿಲ್ಲೆಯ ಪರಿಸರ ಹಾಳಾಗುತ್ತದೆ ಮತ್ತು ಕಪ್ಪತ್ತಗುಡ್ಡದಲ್ಲಿರುವ ಅಪಾರ ಪ್ರಮಾಣದ ಕಬ್ಬಿಣದ ಅದಿರು ಬಹುರಾಷ್ಟ್ರೀಯ ಕಂಪನಿ ಪಾಲಾಗುವ ಆತಂಕದಿಂದ ಬೃಹತ್ ಹೋರಾಟ ನಡೆಯಿತು. ಆಗ ಸರ್ಕಾರ ಮತ್ತು ಕಂಪನಿ ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಯಿಂದ ಹಿಂದೆ ಸರಿದಿತ್ತು.

ಕೃಷಿ ಆಧಾರಿತವಾಗಿರಲಿ: ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ. ಈ ಸಮಾವೇಶದ ಮೂಲಕ ಜಿಲ್ಲೆಯಲ್ಲಿಯೂ ಕೃಷಿ ಆಧಾರಿತ ಬೃಹತ್ ಕೈಗಾರಿಕೆ ಸ್ಥಾಪನೆಗೆ ಒಡಂಬಡಿಕೆಯಾಗಲಿ, ಅಂತಹ ಪ್ರಯತ್ನಗಳು ಸರ್ಕಾರದಿಂದ ಆಗಲಿ ಎಂಬುದು ಜಿಲ್ಲೆಯ ಜನರ ಆಶಯ.

ಗಾಳಿ ವಿದ್ಯುತ್‌ ಕಂಪನಿ: ಏಷ್ಯಾಖಂಡದಲ್ಲಿಯೇ ಅತೀ ವೇಗವಾಗಿ ಗಾಳಿ ಬೀಸುವುದು ಇದೇ ಜಿಲ್ಲೆಯಲ್ಲಿ. ಹಾಗಾಗಿ 350ಕ್ಕೂ ಹೆಚ್ಚು ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಸ್ಥಳೀಯರಿಗೆ ಮಾತ್ರ ಯಾವುದೇ ಉದ್ಯೋಗ ದೊರೆತಿಲ್ಲ. ವರ್ಷದ 7 ತಿಂಗಳು ಉತ್ತಮ ಬಿಸಿಲು ಹೊಂದಿದ ಹಿನ್ನೆಲೆಯಲ್ಲಿ 18ಕ್ಕೂ ಹೆಚ್ಚು ಸೋಲಾರ್ ಕಂಪನಿಗಳು ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಇವರಿಂದಲೂ ಸ್ಥಳೀಯರಿಗೆ ಉದ್ಯೋಗ ದೊರೆತಿಲ್ಲ. ದೂರದ ಬಿಹಾರ, ಯುಪಿ, ತಮಿಳುನಾಡು, ಕೇರಳದ ಹೆಚ್ಚಿನ ಕಾರ್ಮಿಕರಿಗೆ ಉದ್ಯೋಗ ದೊರೆತಿದೆ. ಅದಕ್ಕಾಗಿ ಕೃಷಿ ಆಧಾರಿತ ಕೈಗಾರಿಕೆ ಜಿಲ್ಲೆಗೆ ಬರಲಿ ಎಂದು ಜನ ಆಶಿಸುತ್ತಾರೆ.

1050ಕ್ಕೂ ಹೆಚ್ಚು ಎಕರೆ ಭೂಮಿ:ಜಿಲ್ಲೆಯಲ್ಲಿ ಕೃಷಿಗೆ ಯೋಗ್ಯವಲ್ಲದ 1050ಕ್ಕೂ ಅಧಿಕ ಎಕರೆ ಭೂಮಿಯನ್ನು ಕೈಗಾರಿಕೆ ಇಲಾಖೆ ಈಗಾಗಲೇ ಗುರುತಿಸಿದೆ. ಇದರೊಟ್ಟಿಗೆ ಇನ್ನು ಹೆಚ್ಚಿನ ಜಮೀನು ಲಭ್ಯವಿದೆ. ಜಿಲ್ಲೆಯ ಒಂದು ಭಾಗದಲ್ಲಿ ತುಂಗಭದ್ರಾ ಇನ್ನೊಂದು ಭಾಗದಲ್ಲಿ ಮಲಪ್ರಭಾ ನದಿ ಹರಿಯುತ್ತಿವೆ. ಒಂದು ಭಾಗದಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ ಇದೆ. ಇನ್ನೊಂದು ಭಾಗದಲ್ಲಿ ಕೊಪ್ಪಳವೂ ಇದೆ.

ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಯಾಗಬೇಕು. ಅದಕ್ಕಾಗಿ ಸಾಕಷ್ಟು ಪ್ರಯತ್ನಗಳು ನಡೆದಿವೆ, ಈಗಲೂ ನಡೆಯುತ್ತಿವೆ. ಸರ್ಕಾರ ಗದಗ ಜಿಲ್ಲೆಯಲ್ಲಿ ಕೃಷಿ ಆಧಾರಿತವಾಗಿರುವ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವತ್ತ ಆಸಕ್ತಿ ವಹಿಸಬೇಕು. ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ರಾಮನಗೌಡ ದಾನಪ್ಪಗೌಡ್ರ ತಿಳಿಸಿದ್ದಾರೆ.