ಬಿಜೆಪಿಯವರು ದ್ವೇಷ ಭಾಷಣ ನಿರ್ಬಂಧ ವಿಧೇಯಕವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಅಪಪ್ರಚಾರ ಮಾಡಲು ಯತ್ನಿಸುತ್ತಿದ್ದಾರೆ. ವಿಧೇಯಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗದಂತೆ ಅಭಿವ್ಯಕ್ತ ಮಾಡಬೇಕಾಗಿರುವ ಮಿತಿ ಇದೆ.
* ಎ.ಎಸ್. ಪೊನ್ನಣ್ಣ
- ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು
ದೇಶಾದ್ಯಂತ ದ್ವೇಷ ಭಾಷಣಗಳಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿದೆ. ದ್ವೇಷ ಹರಡುವಿಕೆಯು ಸಮಾಜದ ಪ್ರಗತಿಗೂ ಅಡ್ಡಿಯಾಗುತ್ತಿದೆ. ರಾಜಕೀಯ, ಸಾಮಾಜಿಕ ಹಾಗೂ ವೈಯಕ್ತಿಕ ಅಸಹಿಷ್ಣುತೆಯ ಫಲವಾಗಿ ಸಮಾಜದಲ್ಲಿ ದ್ವೇಷ ಹರಡುವ ಕೃತ್ಯಗಳು ನಡೆಯುತ್ತಿವೆ. ಇಂತಹ ದ್ವೇಷ ಭಾಷಣ ಹಾಗೂ ದ್ವೇಷ ಹರಡುವಿಕೆ ನಿಯಂತ್ರಿಸಲು ಅಗತ್ಯ ಕ್ರಮಕ್ಕೆ ಸರ್ವೋಚ್ಚ ನ್ಯಾಯಾಲಯ ಹಾಗೂ ಕಾನೂನು ಆಯೋಗಗಳು ಸಹ ಸಲಹೆ ನೀಡಿವೆ. ಅದರಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025’ ಮೂಲಕ ದ್ವೇಷ ನಿರ್ಬಂಧ ಕಾನೂನು ರೂಪಿಸಲು ಮುಂದಾಗಿದೆ.
ಆದರೆ, ರಾಜಕೀಯ ಹಾಗೂ ಕ್ಷುಲ್ಲಕ ಕಾರಣಕ್ಕೆ ಬಿಜೆಪಿಯವರು ವಿಧೇಯಕವನ್ನು ವಿರೋಧ ಮಾಡುತ್ತಿದ್ದಾರೆ. ದ್ವೇಷ ಭಾಷಣ ನಿರ್ಬಂಧ ವಿಧೇಯಕ ವಿರೋಧಿಸುವವರು ದ್ವೇಷದ ಪ್ರತಿಪಾದಕರಲ್ಲವೇ? ವಿಧೇಯಕ ವಿರೋಧಿಸುವವರು ಕಾನೂನಾತ್ಮಕ ವಿಷಯ ಮುಂದಿಟ್ಟುಕೊಂಡು ತಮ್ಮ ಆಕ್ಷೇಪ ತಿಳಿಸುತ್ತಿಲ್ಲ. ಬದಲಿಗೆ ದ್ವೇಷ ಭಾಷಣ ಎಂಬುದು ತಮ್ಮ ಹಕ್ಕು, ದ್ವೇಷ ಹರಡುವ ತಮ್ಮ ಹಕ್ಕಿಗೆ ಚ್ಯುತಿ ತರಲಾಗುತ್ತಿದೆ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ದ್ವೇಷ ಭಾಷಣ ನಿರ್ಬಂಧ ಎಂಬುದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ಎಂಬ ಪೂರ್ವಾಗ್ರಹದಲ್ಲಿದ್ದಾರೆ.
ವಿಧೇಯಕದಲ್ಲಿ ದ್ವೇಷ ಭಾಷಣ ಎಂದರೇನು? ಎಂಬ ಬಗ್ಗೆ ವ್ಯಾಖ್ಯಾನ ನೀಡಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ಯಾವ ರೀತಿಯ ಕ್ರಮಗಳಾಗಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಬಿಜೆಪಿಯವರು ವಸ್ತುನಿಷ್ಠವಾಗಿ, ಜನರ ಹಿತದೃಷ್ಟಿಯಿಂದ ತಮ್ಮ ಆಕ್ಷೇಪ ತಿಳಿಸಿದರೆ ತಿದ್ದುಪಡಿಗೂ ಸಹ ನಾವು ಮುಕ್ತವಾಗಿದ್ದೇವೆ.
ದ್ವೇಷ ಭಾಷಣ ರಾಜಕಾರಣಿಗಳಿಗೆ ಸೀಮಿತವಲ್ಲ
ದ್ವೇಷ ಭಾಷಣವು ಕೇವಲ ರಾಜಕಾರಣಿಗಳು ಅಥವಾ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಮಾತ್ರವಲ್ಲ. ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಸಿನಿಮಾ ನಟರು, ಕ್ರೀಡಾಪಟುಗಳಿಂದ ಹಿಡಿದು ಎಲ್ಲ ವರ್ಗದವರಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸಮಾಜದ ಸಾಮರಸ್ಯ ಕದಡುವ ಮೂಲಕ ಸಾಮಾಜಿಕ ಜೀವನದ ಗುಣಮಟ್ಟ ಹಾಳು ಮಾಡುತ್ತಿದೆ.
ತಂತ್ರಜ್ಞಾನ ಹೆಚ್ಚಾದಂತೆ ದ್ವೇಷ ಹರಡುವುದು ಮತ್ತಷ್ಟು ಸುಲಭವಾಗಿದೆ. ಕೃತಕ ಬುದ್ಧಿಮತ್ತೆಯಂತಹ (ಎಐ) ತಂತ್ರಜ್ಞಾನಗಳಿಂದ ದ್ವೇಷ ಹರಡುವಿಕೆಯ ವಿಕೃತ ಹೆಚ್ಚಾಗಿದೆ. ನರೇಂದ್ರ ಮೋದಿ, ರಾಹುಲ್‌ಗಾಂಧಿ, ಸಿದ್ದರಾಮಯ್ಯ ಸೇರಿ ಪಕ್ಷಭೇದವಿಲ್ಲದೆ ಎಲ್ಲರೂ ಇದರ ಸಂತ್ರಸ್ತರು. ಹಿಂದೆ ಜನ ಸೇರಿಸಿ ಭಾಷಣ ಮಾಡಿ ದ್ವೇಷದ ಹೇಳಿಕೆ ನೀಡಬೇಕಾಗಿತ್ತು. ಅದು ತಲುಪುತ್ತಿದ್ದವರ ಸಂಖ್ಯೆ ಸೀಮಿತವಾಗಿತ್ತು. ಆದರೆ, ತಂತ್ರಜ್ಞಾನ ಬೆಳೆದಂತೆ ಸಾಮಾಜಿಕ ಜಾಲತಾಣ ಯುಗದಲ್ಲಿ ಅತಿ ವೇಗವಾಗಿ ದ್ವೇಷ ಹರಡುತ್ತಿದೆ. ಅಷ್ಟೇ ವೇಗ ಹಾಗೂ ಪ್ರಮಾಣದಲ್ಲಿ ಜನರನ್ನು ಕೆರಳಿಸಬಹುದು. ಇದು ಸಮಾಜದ ಸಾಮರಸ್ಯ ಕದಡಿ ಅಶಾಂತಿಗೆ ಕಾರಣವಾಗಬಹುದು.
ಈ ದ್ವೇಷ ಭಾಷಣ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯ, ಕಾನೂನು ಆಯೋಗಗಳು ಸಹ ಗುರುತಿಸಿವೆ. ಈ ಬಗ್ಗೆ ಶಾಸಕಾಂಗ ಹಾಗೂ ಸಂಸತ್ತು ಏನಾದರೂ ಕ್ರಮ ಜರುಗಿಸಬೇಕು ಎಂದು ಕಾನೂನು ಆಯೋಗಗಳು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿವೆ. ಹೀಗಾಗಿ, ರಾಜ್ಯ ಸರ್ಕಾರವು ಜಾರಿಗೆ ತರುತ್ತಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025’ ಹಾಗೂ ಅದರಡಿಯ ಕಾನೂನುಗಳು ಸೂಕ್ತ ಹಾಗೂ ಅತ್ಯಗತ್ಯವಾಗಿದೆ.
ಕಾನೂನು ಕೇವಲ ರಾಜಕಾರಣದ ಕಾರಣಕ್ಕೆ ಆಗುವ ದ್ವೇಷಕ್ಕೆ ಸೀಮಿತವಾಗಿಲ್ಲ. ಧರ್ಮ, ಜನಾಂಗ, ಜಾತಿ, ಸಮುದಾಯ, ಲಿಂಗ, ಜನ್ಮಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟು ಮತ್ತಿತರ ವಿಷಯ ಇಟ್ಟುಕೊಂಡು ದ್ವೇಷ ಹರಡುವುದನ್ನು ನಿರ್ಬಂಧಿಸುತ್ತದೆ. ತನ್ಮೂಲಕ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಹಾಗೂ ಪರಸ್ಪರ ಗೌರವ, ಸಹಬಾಳ್ವೆಯನ್ನು ಉತ್ತೇಜಿಸುತ್ತದೆ.
ಸುಮೋಟೊ ಪ್ರಕರಣಕ್ಕೆ ಸುಪ್ರೀಂ ಸೂಚನೆ
ಸರ್ವೋಚ್ಚ ನ್ಯಾಯಾಲಯವು ಪ್ರವಾಸಿ ಬಲಾಯಿ ಸಂಘಟನ್ v/s ಯೂನಿಯನ್ ಆಫ್ ಇಂಡಿಯಾ (ಎಐಆರ್ 2014 ಎಸ್‌ಸಿ-1591) ಪ್ರಕರಣದಲ್ಲಿ ದ್ವೇಷ ಭಾಷಣ ಎಂದರೇನು ಎಂಬ ಬಗ್ಗೆ ವ್ಯಾಖ್ಯಾನ ಮಾಡಬೇಕು. ಜತೆಗೆ ಇದನ್ನು ತಡೆಯಲು ಮಾಡಬೇಕಿರುವ ಕಾನೂನು ಸುಧಾರಣೆ ಕುರಿತು ಶಿಫಾರಸು ಮಾಡುವಂತೆ ಹೇಳುತ್ತದೆ. ಪೊಲೀಸರು ದ್ವೇಷ ಭಾಷಣದ ಪ್ರಕರಣದಲ್ಲಿ ಸ್ವಇಚ್ಛೆಯಿಂದ (ಸುಮೋಟೊ) ಪ್ರಕರಣ ದಾಖಲಿಸಬೇಕು ಎಂದು ಸಹ ನ್ಯಾಯಾಲಯ ಹೇಳಿದೆ.
2023ರ ಅಶ್ವಿನಿಕುಮಾರ್ ಉಪಾಧ್ಯಾಯ v/s ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ದ್ವೇಷ ಭಾಷಣ ಎಂಬುದು ‘ಉದ್ಯಮ’ ಎಂದು ಹೇಳಿದೆ. ದ್ವೇಷ ಭಾಷಣದ ಬಗ್ಗೆ ಯಾವುದೇ ರೀತಿಯ ಕಾನೂನಾತ್ಮಕ ವ್ಯಾಖ್ಯಾನದ ಉಲ್ಲೇಖವಿಲ್ಲ. ಹೀಗಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು (ಯುಟಿ) ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ವಿಶಾಲ್ ತಿವಾರಿ v/s ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ದ್ವೇಷ ಭಾಷಣದ ವಿರುದ್ಧ ಅತ್ಯಂತ ತೀಕ್ಷ್ಣವಾಗಿ ಉಲ್ಲೇಖಿಸಿದ್ದು, ಕಠಿಣ ಕ್ರಮ ಅಗತ್ಯ ಎಂದು ಪ್ರತಿಪಾದಿಸಿದೆ. ನ್ಯಾಯಾಲಯಗಳ ಈ ಎಲ್ಲಾ ತೀರ್ಪುಗಳು ಹಾಗೂ ಕಾನೂನು ಆಯೋಗದ ಶಿಫಾರಸುಗಳನ್ನು ನೋಡಿದಾಗ ನಾಗರಿಕ ಸಮಾಜ ಮಾತ್ರವಲ್ಲದೆ ಸಾಂವಿಧಾನಿಕ ಸಂಸ್ಥೆಗಳು ಸಹ ಇದರ ಅಪಾಯವನ್ನು ಗುರುತಿಸಿವೆ.
ಇಂತಹ ಅಪರಾಧಿಕ ಪ್ರಕರಣಗಳನ್ನು ಪೊಲೀಸರು ಪ್ರಕರಣ ದಾಖಲಿಸುವ ಮೂಲಕ ಮಾತ್ರವೇ ನಿಯಂತ್ರಿಸಬಹುದು ಎಂದು ಸಾಂವಿಧಾನಿಕ ಸಂಸ್ಥೆಗಳು ಹೇಳಿವೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ವಿಧೇಯಕ ತಂದು ಕಾನೂನು ರೂಪಿಸುತ್ತಿದೆ. ಇದಕ್ಕೆ ಜನರು ವ್ಯಾಪಕವಾಗಿ ಬೆಂಬಲಿಸುತ್ತಿದ್ದು, ಪ್ರತಿಪಕ್ಷಗಳ ವಿರೋಧ ಕ್ಷುಲ್ಲಕ.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿಯಿಲ್ಲ
ಬಿಜೆಪಿಯವರು ದ್ವೇಷ ಭಾಷಣ ನಿರ್ಬಂಧ ವಿಧೇಯಕವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಅಪಪ್ರಚಾರ ಮಾಡಲು ಯತ್ನಿಸುತ್ತಿದ್ದಾರೆ. ನಾವು ತಂದಿರುವ ವಿಧೇಯಕದಲ್ಲಿ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಪೂರ್ಣ ಪ್ರಮಾಣದ ಸ್ವೇಚ್ಛಾಚಾರವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗದಂತೆ ಅಭಿವ್ಯಕ್ತ ಮಾಡಬೇಕಾಗಿರುವ ಮಿತಿ ಇದೆ.
ಉದಾ: ತೇಜೋವಧೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಅಭಿವ್ಯಕ್ತಿ ಸ್ವಾತಂತ್ರ್ಯವು ತನಗಿರುವ ನಿರ್ಬಂಧ ಮೀರಿ ಮತ್ತೊಬ್ಬರನ್ನು ತೇಜೋವಧೆ ಮಾಡಿದಾಗ ಅದು ಅಪರಾಧ ಆಗುತ್ತದೆ.
ಅದೇ ರೀತಿ ದ್ವೇಷ ಭಾಷಣವೂ ಅಪರಾಧ. ಸಂವಿಧಾನವು ಎಲ್ಲಾ ನಿಯಮಗಳಿಂತಲೂ ಮೇಲಿರುತ್ತದೆ. ಸಂವಿಧಾನಕ್ಕೆ ಪೂರಕವಾಗಿ, ಸಂವಿಧಾನದ ಉದ್ದೇಶಗಳನ್ನು ಸಾಕಾರಗೊಳಿಸುವ ಸಲುವಾಗಿಯೇ ವಿಧೇಯಕ ತರಲಾಗಿದೆ. ಇದು ಎಲ್ಲರ ಹಿತ ಕಾಯಲಿದೆ.
ವಿಧೇಯಕವನ್ನೇ ಓದದೆ ಬಿಜೆಪಿ ವಿರೋಧ:
ಬಿಜೆಪಿಯವರು ವಿಧೇಯಕದಲ್ಲಿನ ಅಂಶಗಳನ್ನು ಓದದೆ ಕುರುಡಾಗಿ ವಿರೋಧಿಸುತ್ತಿದ್ದಾರೆ. ವಿಧೇಯಕದಲ್ಲಿನ ಲೋಪ ಎತ್ತಿ ತೋರಲು ಅವರು ಸಿದ್ಧವಿಲ್ಲ. ಬದಲಿಗೆ ನಾಲ್ಕೈದು ಮಂದಿ ರೋಷಾವೇಷದಿಂದ ವಿರೋಧ ಮಾಡುತ್ತಿದ್ದಾರೆ. ವಿರೋಧಪಕ್ಷದಲ್ಲಿನ ಗುಂಪುಗಾರಿಕೆಯಿಂದ ನಾಲ್ಕೈದು ಮಂದಿ ವಿರೋಧಪಕ್ಷದ ನಾಯಕ ಆರ್. ಅಶೋಕ್, ಸದಸ್ಯರಾದ ಎಸ್. ಸುರೇಶ್ ಕುಮಾರ್ ಅವರಿಗೂ ಮಾತನಾಡುವ ಅವಕಾಶ ನೀಡಲಿಲ್ಲ. ಪ್ರತಿಪಕ್ಷ ನಾಯಕರ ಸೂಚನೆ ಇಲ್ಲದೆ ಸದನದ ಬಾವಿಗಿಳಿದು ಪ್ರತಿಭಟಿಸುತ್ತಾರೆ. ಇದಕ್ಕೆ ರಾಜಕಾರಣ ಹಾಗೂ ಬಿಜೆಪಿಯಲ್ಲಿ ಒಳಬೇಗುದಿ ಬಿಟ್ಟರೆ ಬೇರೆ ಸಕಾರಣವಿಲ್ಲ.
ಒಬ್ಬ ವಕೀಲನಾಗಿ ಪರಿಶೀಲಿಸಿದಾಗ ನ್ಯಾಯಾಲಯಗಳ ತೀರ್ಪು, ಕಾನೂನು ಆಯೋಗಗಳ ಸಲಹೆಯಂತೆ ಮಾಡಿರುವ ಈ ವಿಧೇಯಕ ಅತ್ಯವಶ್ಯಕ ಹಾಗೂ ಜರೂರು.
