ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಆಡಳಿತಾರೂಢ ಪಕ್ಷವು ಕಾರ್ಯಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಲು ಪ್ರತಿಪಕ್ಷವು ಅತ್ಯಂತ ಮುಖ್ಯವಾಗಲಿದೆ.

ಬಳ್ಳಾರಿ: ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕರಾಗಿ 24ನೇ ವಾರ್ಡ್ ಸದಸ್ಯ ಶ್ರೀನಿವಾಸ ಮೋತ್ಕರ್ ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಇದೇ ವೇಳೆ ಮಾತನಾಡಿದ ಅವರು, ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ಆಡಳಿತಾರೂಢ ಪಕ್ಷವು ಕಾರ್ಯಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಲು ಪ್ರತಿಪಕ್ಷವು ಅತ್ಯಂತ ಮುಖ್ಯವಾಗಲಿದೆ. ಸಮರ್ಥ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಳ್ಳಾರಿ ನಗರದ ಬಿಜೆಪಿ ಸದಸ್ಯರಿಗೆ ಸರಿಯಾಗಿ ಅನುದಾನ ನೀಡದೆ ತಾರತಮ್ಯ ಎಸಲಾಗುತ್ತಿದೆ. ನಗರದ ಒಳ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ತೀವ್ರ ಪರಿತಪಿಸುವಂತಾಗಿದೆ. ಚರಂಡಿ ನಿರ್ವಹಣೆಯಲ್ಲಿ ಪಾಲಿಕೆ ವಿಫಲವಾಗಿರುವುದರಿಂದ ಹತ್ತಾರು ಸಮಸ್ಯೆಗಳು ಉದ್ಭವಿಸಿವೆ. ಈ ಹಿಂದೆ ಬಿಜೆಪಿ ಅವಧಿಯಲ್ಲಾಗಿರುವ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್‌ನವರು ತಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಗಡಗಿಚನ್ನಪ್ಪ ವೃತ್ತದ ಬಳಿಯ ರಸ್ತೆ ಅಭಿವೃದ್ಧಿ ಕೆಲಸ ಈ ಹಿಂದೆ ಶ್ರೀರಾಮುಲು ಸಚಿವರು, ಜಿ.ಸೋಮಶೇಖರ ರೆಡ್ಡಿ ಅವರು ನಗರ ಶಾಸಕರಾಗಿದ್ದ ವೇಳೆಯೇ ಅನುಮೋದಿತಗೊಂಡಿತ್ತಲ್ಲದೆ,

ಅರ್ಧ ಕೆಲಸವೂ ಆಗಿತ್ತು. ಬಳಿಕ ಚುನಾವಣೆ ಬಂದಿದ್ದರಿಂದ ಕೆಲಸ ಸ್ಥಗಿತವಾಯಿತು. ಆದರೆ, ಕಾಂಗ್ರೆಸ್‌ನವರು ತಾವೇ ರಸ್ತೆ ಅಭಿವೃದ್ಧಿ ಮಾಡಿದ್ದೇವೆ ಎಂದು ತಿಳಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿಯ ಎಲ್ಲ ಪಾಲಿಕೆಯ ಸದಸ್ಯರು ಒಗ್ಗೂಡಿ ಕಾರ್ಯನಿರ್ವಹಿಸುತ್ತೇವೆ. ಸಮರ್ಥ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಶ್ರೀನಿವಾಸಮೋತ್ಕರ್ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಮೋಕಾ, ಪಕ್ಷದ ಮುಖಂಡರಾದ ಗುತ್ತಿಗನೂರು ವಿರುಪಾಕ್ಷಗೌಡ, ಮಲ್ಲನಗೌಡ ಎಸ್, ಸುರೇಖಾ ಮಲ್ಲನಗೌಡ, ಪುಷ್ಪಾವತಿ ಮತ್ತಿತರರಿದ್ದರು.

ಬಳ್ಳಾರಿ ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಶ್ರೀನಿವಾಸ ಮೋತ್ಕರ್ ಅವರನ್ನು ಪಕ್ಷದ ಮುಖಂಡರು ಅಭಿನಂದಿಸಿದರು.