ಯಲ್ಲಾಪುರ ದುರ್ಗಮ್ಮ-ಕಾಳಮ್ಮ ದೇವಿಯರ ಒಂಬತ್ತು ದಿನಗಳ ಜಾತ್ರಾ ಮಹೋತ್ಸವ ದೇವಿಯರನ್ನು ವಿಸರ್ಜನಾ ಗದ್ದುಗೆಗೆ ಮೆರವಣಿಗೆಯಲ್ಲಿ ಭಕ್ತರು ಶಿರದ ಮೇಲೆ ಹೊತ್ತು ತರುವ ಮೂಲಕ ಜಾತ್ರಾ ಉತ್ಸವಕ್ಕೆ ತೆರೆ ಎಳೆಯಲಾಯಿತು. ೫೦ ಸಾವಿರಕ್ಕೂ ಹೆಚ್ಚಿನ ಭಕ್ತರು ದೇವಿಯರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಯಲ್ಲಾಪುರ: ಯಲ್ಲಾಪುರ ದುರ್ಗಮ್ಮ-ಕಾಳಮ್ಮ ದೇವಿಯರ ಒಂಬತ್ತು ದಿನಗಳ ಜಾತ್ರಾ ಮಹೋತ್ಸವ ದೇವಿಯರನ್ನು ವಿಸರ್ಜನಾ ಗದ್ದುಗೆಗೆ ಮೆರವಣಿಗೆಯಲ್ಲಿ ಭಕ್ತರು ಶಿರದ ಮೇಲೆ ಹೊತ್ತು ತರುವ ಮೂಲಕ ಜಾತ್ರಾ ಉತ್ಸವಕ್ಕೆ ತೆರೆ ಎಳೆಯಲಾಯಿತು. ೫೦ ಸಾವಿರಕ್ಕೂ ಹೆಚ್ಚಿನ ಭಕ್ತರು ದೇವಿಯರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಅಪರಾಹ್ನ ೩.೪೪ಕ್ಕೆ ಜಾತ್ರಾ ಗದ್ದುಗೆಯಲ್ಲಿ ಮಹಾಪೂಜೆ ನೆರವೇರಿಸಿ, ಹುಲ್ಲಿನ ಗುಡಿಸಲಿನಲ್ಲಿ ಇಟ್ಟ ಹಿಟ್ಟಿನ ಕೋಣನ ತಲೆಯ ಆಕೃತಿಗೆ ಕೊಳ್ಳಿ ಹಚ್ಚಿ ಗುಡಿಸಲ ಸಮೇತ ಸುಟ್ಟ ಬೂದಿಯನ್ನು ದೇವಿಯರ ಪಾದಗಳ ಮೇಲೆ ಸುರಿದರು. ಅಂದರೆ ಕೋಣನ ಬಲಿಯಾಯಿತೆಂದು ಅರ್ಥ. ಈ ಸಂದರ್ಭದಲ್ಲಿ "ಹುಲುಸು " ಅಕ್ಕಿರಾಶಿಯ ಪ್ರಸಾದ ವಿತರಣೆ ಮಾಡಲಾಯಿತು. ಆನಂತರ ೪.೪೫ರ ಸುಮಾರಿಗೆ ಮುಂಡಗೋಡು ರಸ್ತೆಯಲ್ಲಿರುವ ವಿಸರ್ಜನಾ ಗದ್ದುಗೆಗೆ ತಂದು ಪ್ರತಿಷ್ಠಾಪಿಸಲಾಯಿತು. ಅಲ್ಲಿ ಭಕ್ತರು ದೇವಿಯರ ಅಂತಿಮ ದರ್ಶನ ಪಡೆದರು. ಆನಂತರ ಪುರೋಹಿತರು ಸೆಳೆದೇವರು ಮಿರಾಶಿ ಅವರಿಂದ ದೇವಿಯರಿಗೆ ವಿಧಿ-ವಿಧಾನಗಳ ಮೂಲಕ ವಿಸರ್ಜನೆ ಮಾಡಿ ಮಧ್ಯರಾತ್ರಿ ವರೆಗೂ ದೇವಿಯರ ಸಹಸ್ರನಾಮಗಳಿಂದ ಪೂಜಿಸಿ, ಲಗ್ನ ತೊಡಿಸಿದ ಬಳೆಗಳನ್ನು ಒಡೆದು ದೇವಿಯರ ಉತ್ಸವಕ್ಕೆ ಕೊನೆ ಹೇಳಲಾಗಿದೆ. ಇದು ಒಂಬತ್ತು ದಿನಗಳ ಭೂಲೋಕದ ಪರೋಕ್ಷ ಬಂಧನಕ್ಕೆ ಮುಕ್ತಿ ಎಂಬ ಭಾವನೆಯಾಗಿದೆ.

ಆನಂತರ ದೇವಿಯರನ್ನು ಮೂಲ ಮಂದಿರಕ್ಕೆ ಕಾಳರಾತ್ರಿಯಲ್ಲಿ (೧೨.೩೦ರ ಆನಂತರ) ಬಿದಿರಿನ ಪೆಟ್ಟಿಗೆಯಲ್ಲಿ ಹಾಕಿಕೊಂಡು ದೇವಸ್ಥಾನಕ್ಕೆ ಸೆಳೆದೇವರು ಮತ್ತು ಮಿರಾಶಿಯವರು ಮಾತ್ರ ತರುತ್ತಾರೆ. ಈ ಕಾರ್ಯಕ್ರಮದಲ್ಲಿ ಭಕ್ತರಾರೂ ಭಾಗವಹಿಸುವಂತಿಲ್ಲ. ಆ ಸಮಯಕ್ಕೆ ರಾತ್ರಿ ವಿದ್ಯುತ್ ಕೂಡ ಸ್ಥಗಿತಗೊಳಿಸಲಾಗುತ್ತದೆ. ಆನಂತರ ಮುಂದಿನ ೧೦ ದಿನಗಳ ಕಾಲ ದೇವರ ದರ್ಶನ ಯಾರಿಗೂ ಸಿಗುವುದಿಲ್ಲ. ಪುರೋಹಿತರು, ವಿಶ್ವಕರ್ಮ ಬ್ರಾಹ್ಮಣರು ವಿಧಿ-ವಿಧಾನಗಳ ಮೂಲಕ ೧೦ ದಿನಗಳ ಆನಂತರ ಸಾರ್ವಜನಿಕರಿಗೆ ದೇವಿಯರ ದರ್ಶನಕ್ಕೆ ಅವಕಾಶ ಕಲ್ಪಿಸುವ ಸಂಪ್ರದಾಯ ಇದೆ.

ಜಾತ್ರೆಯ ಅವಧಿಯಲ್ಲಿ ರಾಧಾಕೃಷ್ಣ ನಾಯ್ಕ ನೇತೃತ್ವದಲ್ಲಿ ಪಾನಕ ವ್ಯವಸ್ಥೆ ಕಲ್ಪಿಸಲಾಗಿತ್ತು.ಲಾರಿ ಮಾಲೀಕರ ಸಂಘದವರು ಲಡ್ಡು ಪ್ರಸಾದ ವಿತರಣೆ ಮಾಡಿದರು. ವಿ.ವಿ. ಜೋಷಿ ನೇತೃತ್ವದಲ್ಲಿ ಅನ್ನಪ್ರಸಾದ ಸಮಿತಿಯವರು ಜಾತ್ರಾವಧಿಯಲ್ಲಿ ೪೦ ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಪ್ರಸಾದ ವಿತರಿಸಿದರು. ದೇವಸ್ಥಾನದ ಪ್ರಧಾನ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ಟ, ಶಾಸಕ ಶಿವರಾಮ ಹೆಬ್ಬಾರ, ಆಯಗಾರ ಟ್ರಸ್ಟಿ ಮನೋಹರ ಹೆಗಡೆ ಸೇರಿದಂತೆ ಪ್ರಮುಖರು ಇದ್ದರು. ೯ ದಿನಗಳ ಕಾಲ ಅತ್ಯಂತ ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ವ್ಯವಸ್ಥಿತವಾದ ಅವಕಾಶ ಕಲ್ಪಿಸುವಲ್ಲಿ ಬಾಲಕೃಷ್ಣ ನಾಯ್ಕ, ರವಿ ಶಾನಭಾಗ, ಗಿರೀಶ ಶಾನಭಾಗ, ರಾಜೇಂದ್ರ ಬದ್ದಿ, ಶಿರೀಷ ಪ್ರಭು, ರಜತ ಬದ್ದಿ, ಮಾಲತೇಶ ಗೌಳಿ, ಬಾಬು ಗುಡಿಗಾರ, ಗುರು ನಾಯ್ಕ, ಸುಧಾಕರ ಪ್ರಭು, ಪವನ ಕಾಮತ್, ಅಮಿತ ಅಂಗಡಿ, ಸಚಿನ್ ಬಳ್ಕೂರ ಸೇರಿದಂತೆ ಅನೇಕರು ಹಗಲು ರಾತ್ರಿ ಎನ್ನದೇ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಗಜಾನನೋತ್ಸವ ಸಮಿತಿಯಿಂದ ಅನ್ನಸಂತರ್ಪಣೆ:

ಪಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ಹಳೆಕಟ್ಟಿಗೆ ಡಿಪೊ ಸಾರ್ವಜನಿಕ ಗಜಾನನೋತ್ಸವ ಸಮಿತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಶಾಸಕ ಶಿವರಾಮ ಹೆಬ್ಬಾರ ಹಾಗೂ ಗ್ರಾಮದೇವಿ ಕನ್‌ಸ್ಟ್ರಕ್ಷನ್‌ನ ವಿಶಾಲ ವಾಳಂಬಿ ಅನ್ನಪ್ರಸಾದ ವಿತರಣೆಗೆ ಚಾಲನೆ ನೀಡಿದರು. ಸಾವಿರಾರು ಜನರು ಅನ್ನ ಪ್ರಸಾದ ಸ್ವೀಕರಿಸಿದರು. ಜಾತ್ರೆಯ ಮೊದಲ ಹಾಗೂ ಕೊನೆಯ ದಿನ ಸಮಿತಿಯಿಂದ ಅನ್ನ ಪ್ರಸಾದ ವಿತರಣೆ ಅಚ್ಚುಕಟ್ಟಾಗಿ ನಡೆಯಿತು.