ಕಾಮಿಕ್‌ ಪ್ರಿಯರ ಬಹುನಿರೀಕ್ಷಿತ ಉತ್ಸವ ಕಾಮಿಕ್‌ ಕಾನ್‌ ಬೆಂಗಳೂರು ಆರಂಭವಾಗಿದೆ. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾರುತಿ ಸುಜುಕಿ ಅರೇನಾ ಅರ್ಪಿಸುವ, ಕ್ರಂಚಿರೋಲ್ ಸಹಭಾಗಿತ್ವದ ಬೆಂಗಳೂರಿನ ಬಹು ನಿರೀಕ್ಷಿತ ಪಾಪ್ ಕಲ್ಚರ್ ಉತ್ಸವವಾದ ಬೆಂಗಳೂರು ಕಾಮಿಕ್ ಕಾನ್ ಡಿ.20ರಂದು ವೈಟ್‌ಫೀಲ್ಡ್‌ ನ ಕೆಟಿಪಿಓ ಟ್ರೇಡ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮತ್ತು ರಾಷ್ಟ್ರಮಟ್ಟದ ಸೃಜನಶೀಲ ವ್ಯಕ್ತಿಗಳು ಭಾಗವಹಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ಮೊದಲ ದಿನ ಕಾಮಿಕ್ಸ್, ಅನಿಮೆ, ಗೇಮಿಂಗ್ ಇತ್ಯಾದಿ ಕಲಾ ಪ್ರಕಾರಗಳನ್ನು ಸಂಭ್ರಮಿಸಲು ನಗರದ ಆಸಕ್ತರು ಮತ್ತು ಪಾಪ್ ಕಲ್ಚರ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಒಟ್ಟುಗೂಡಿದರು. ಕಾರ್ಯಕ್ರಮವನ್ನು ಸೊಗಸಾಗಿ ಆಯೋಜಿಸಲಾಗಿದ್ದು, ಪಾಪ್ ಕಲ್ಚರ್ ಸಂಭ್ರಮಾಚರಣೆಗೆ ಸೂಕ್ತ ವೇದಿಕೆ ರೂಪುಗೊಂಡಿದೆ.

ಮಕ್ಕಳು ಮತ್ತು ಯುವಜನತೆ ಸ್ಪೈಡರ್-ಮ್ಯಾನ್, ಹ್ಯಾರಿ ಪಾಟರ್ ಮತ್ತು ಇತರ ಅನೇಕ ಐತಿಹಾಸಿಕ ಕಾಮಿಕ್ ಪಾತ್ರಗಳಂತೆ ಉಡುಗೆ ತೊಟ್ಟು, ತಮ್ಮ ಪೋಷಕರೊಂದಿಗೆ ಸಂತೋಷ ಪಟ್ಟರು ಮತ್ತು ಪೋಷಕರು ಕೂಡಾ ಅಷ್ಟೇ ಉತ್ಸಾಹದಿಂದ ಭಾಗವಹಿಸಿದರು.

ಈ ಆವೃತ್ತಿಯ ಮುಖ್ಯ ಆಕರ್ಷಣೆಯೆಂದರೆ ಪ್ರಸಿದ್ಧ ಅಂತಾರಾಷ್ಟ್ರೀಯ ಅತಿಥಿಗಳು ಭಾಗವಹಿಸಿರುವುದು. ಅದರಲ್ಲಿ ಪ್ರಮುಖವಾಗಿ ಡೈರಿ ಆಫ್ ಎ ವಿಂಪಿ ಕಿಡ್ ಟ್ರಯಾಲಜಿ ಸಿನಿಮಾದಲ್ಲಿ ‘ರೌಲಿ’ ಪಾತ್ರಕ್ಕೆ ಹೆಸರಾದ ರಾಬರ್ಟ್ ಕ್ಯಾಪ್ರಾನ್ ಅವರು ಅಭಿಮಾನಿಗಳ ಜೊತೆ ಸಂವಾದ ಮಾಡಿದರು. ಫೋಟೋಗಳಿಗೆ ನಿಂತು ಪಾಲ್ಗೊಂಡವರನ್ನು ಸಂತೋಷಪಡಿಸಿದರು. ಗಾಥಮ್ ಸಿಟಿ ಸೈರೆನ್ಸ್, ಡಿಟೆಕ್ಟಿವ್ ಕಾಮಿಕ್ಸ್, ಬ್ರೂಸ್ ವೇನ್: ದಿ ರೋಡ್ ಹೋಮ್ ಮತ್ತು ಡೆತ್ ಆಫ್ ವೂಲ್ವರೀನ್ ಕೃತಿಗಳಿಗೆ ಹೆಸರಾಗಿರುವ ಕಾಮಿಕ್ ಬುಕ್ ಆರ್ಟಿಸ್ಟ್ ಪೀಟರ್ ನ್ಗುಯೆನ್ ಅವರು ಲೈವ್ ಸ್ಕೆಚಿಂಗ್ ನಲ್ಲಿ ತೊಡಗಿಸಿಕೊಂಡು ಅಭಿಮಾನಿಗಳಿಗೆ ಅಟೋಗ್ರಾಫ್ ನೀಡಿದರು. ಖುಷಿಯಿಂದ ಸಂವಾದ ನಡೆಸಿದರು. ಇದಲ್ಲದೆ, ಓವರ್‌ವಾಚ್ ಮತ್ತು ಓವರ್‌ವಾಚ್ 2 ಚಿತ್ರದಲ್ಲಿನ ವಿಡೋಮೇಕರ್‌ನ ಧ್ವನಿಗೆ ಖ್ಯಾತರಾದ ಫ್ರೆಂಚ್- ಆಸ್ಟ್ರೇಲಿಯನ್ ನಟಿ ಮತ್ತು ವಾಯ್ಸ್ ಆರ್ಟಿಸ್ಟ್ ಕ್ಲೋ ಹಾಲಿಂಗ್ಸ್ ಕೂಡ ಭಾಗವಹಿಸಿದ್ದು, ಅಭಿಮಾನಿಗಳು ಮತ್ತು ಕಾಸ್‌ಪ್ಲೇಯರ್‌ಗಳೊಂದಿಗೆ ಸಂವಾದ ನಡೆಸಿದರು.

ಅವರ ಜೊತೆಗೆ ಭಾರತದ ಸ್ಯಾವಿಯೋ ಮಸ್ಕರೇನ್ಹಸ್ (ಅಮರ್ ಚಿತ್ರ ಕಥಾ ಪ್ರೈ. ಲಿ.ನ ಗ್ರೂಪ್ ಆರ್ಟ್ ಡೈರೆಕ್ಟರ್), ಅಲಿಸಿಯಾ ಸೌಜಾ (ಜನಪ್ರಿಯ ಹ್ಯಾಪಿನೆಸ್ ಇಲ್ಲಸ್ಟ್ರೇಟರ್, ಉದ್ಯಮಿ ಮತ್ತು ಲೇಖಕಿ) ಮತ್ತು ಸುಮಿತ್ ಕುಮಾರ್ (ಕಾರ್ಟೂನಿಸ್ಟ್ ಮತ್ತು ಬಕರಮ್ಯಾಕ್ಸ್ ಸಂಸ್ಥಾಪಕ) ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಭಾರತೀಯ ಕಂಟೆಂಟ್ ಕ್ರಿಯೇಟರ್ ಗಳು ಪಾಲ್ಗೊಂಡಿದ್ದಾರೆ.

ಶಾರ್ಲೈನ್ & ಫಾರ್ಮಲ್‌ಜೋನ್ (ಹೈ-ಎನರ್ಜಿ ಹಿಪ್-ಹಾಪ್ ಮತ್ತು ರಾಪ್), ಫ್ಲೂಟ್‌ಬಾಕ್ಸರ್ಸ್ (ಉತ್ತರದ ಫ್ಲೂಟಿಸ್ಟ್ ಮತ್ತು ದಕ್ಷಿಣದ ಬೀಟ್‌ಬಾಕ್ಸರ್‌ ಗಳ ಅನನ್ಯ ಸಹಯೋಗ), ಕರ್ಮ (ರಾಪರ್), ಗೀಕ್ ಫ್ರೂಟ್ (ಬಾಂಬೆ ಮೂಲದ ಗೀಕ್ ಎಂಟರ್ಟೈನ್‌ಮೆಂಟ್ ಟ್ರಯೋ), ಮತ್ತು ವಿವೇಕ್ ದೇಸಾಯಿ (ಇಲ್ಲ್ಯೂಷನಿಸ್ಟ್) ಮುಂತಾದವರ ನೇರ ಪ್ರದರ್ಶನಗಳು ನೆರೆದವರನ್ನು ಸಂತುಷ್ಟಗೊಳಿಸಿದವು.

ಈ ಕುರಿತು ಮಾತನಾಡಿರುವ ಕಾಮಿಕ್ ಕಾನ್ ಇಂಡಿಯಾದ ಸಿಇಓ ಶೆಫಾಲಿ ಜಾನ್ಸನ್ ಅವರು, ‘ಬೆಂಗಳೂರು ಭಾರತದ ಟೆಕ್ ರಾಜಧಾನಿ ಮಾತ್ರವೇ ಅಲ್ಲ, ಜೊತೆಗೆ ಇನ್ನೋವೇಷನ್ ಮತ್ತು ಸೃಜನಶೀಲ ಅಬಿವ್ಯಕ್ತಿ ಜೊತೆ ಜೊತೆಗೆ ಸಾಗುವ ಒಂದು ವಿಶಿಷ್ಟ ನಗರವಾಗಿದೆ. ಗಾಢವಾದ ಕಲೆ, ಸಂಗೀತ ಮತ್ತು ಸಂಸ್ಕೃತಿ ಹೊಂದಿರುವ ಈ ನಗರವು ಕಾಮಿಕ್ ಕಾನ್‌ಗೆ ಉತ್ತಮ ವೇದಿಕೆಯಾಗಿದೆ. ಕಾಮಿಕ್ ಕಾನ್‌ನಲ್ಲಿ ತಂತ್ರಜ್ಞಾನ ವೃತ್ತಿಪರರರು ಲೈವ್ ಮ್ಯೂಸಿಕ್‌ ಅನ್ನು ಆನಂದಿಸುತ್ತಾ, ಪ್ಯಾನಲ್ ಸೆಷನ್‌ಗಳಲ್ಲಿ ಭಾಗವಹಿಸುತ್ತಾ, ನೆಚ್ಚಿನ ಪಾತ್ರಗಳಂತೆ ಕಾಸ್‌ಪ್ಲೇ ಮಾಡುತ್ತಾ, ಹೈ-ಎನರ್ಜಿ ಗೇಮಿಂಗ್ ಅರೇನಾಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಾಮಿಕ್ ಕಾನ್ ತನ್ನ ಅಭಿಮಾನಿಗಳಿಗೆ ‘ವರ್ಷದ ಅತ್ಯುತ್ತಮ ವಾರಾಂತ್ಯ’ ವನ್ನು ಒದಗಿಸುತ್ತಿದ್ದು, ಬೆಂಗಳೂರಿನ ಅಭಿಮಾನಿಗಳು ಈ ಪಾಪ್ ಕಲ್ಚರ್ ಆಚರಣೆಯ ಮಹಾಕಾವ್ಯಕ್ಕೆ ಅದ್ದೂರಿ ಆರಂಭ ಒದಗಿಸಿದ್ದಾರೆ’ ಎಂದು ಹೇಳಿದರು.