2 ಸಲ ಫೇಲಾಗಿದ್ದರೂ ರಾಜೀವ್‌ ಪ್ರಧಾನಿ ಆಗಿದ್ದರು : ಹಿರಿಯ ಕಾಂಗ್ರೆಸ್‌ ನಾಯಕ ಮಣಿಶಂಕರ್‌

| N/A | Published : Mar 06 2025, 01:31 AM IST / Updated: Mar 06 2025, 04:09 AM IST

ಸಾರಾಂಶ

ಬ್ರಿಟನ್‌ನ ಕೇಂಬ್ರಿಡ್ಜ್‌ ಮತ್ತು ಇಂಪೀರಿಯಲ್‌ ಎರಡೂ ಕಾಲೇಜಿನಲ್ಲಿ ಫೇಲ್‌ ಆಗಿದ್ದ ಹಾಗೂ ಪೈಲಟ್ ಎಂಬ ಒಂದೇ ಹಿನ್ನೆಲೆ ಹೊಂದಿದ್ದ ರಾಜೀವ್‌ ಗಾಂಧಿ ಅವರನ್ನು ಪ್ರಧಾನಿ ಮಾಡಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ. 

 ನವದೆಹಲಿ: ಬ್ರಿಟನ್‌ನ ಕೇಂಬ್ರಿಡ್ಜ್‌ ಮತ್ತು ಇಂಪೀರಿಯಲ್‌ ಎರಡೂ ಕಾಲೇಜಿನಲ್ಲಿ ಫೇಲ್‌ ಆಗಿದ್ದ ಹಾಗೂ ಪೈಲಟ್ ಎಂಬ ಒಂದೇ ಹಿನ್ನೆಲೆ ಹೊಂದಿದ್ದ ರಾಜೀವ್‌ ಗಾಂಧಿ ಅವರನ್ನು ಪ್ರಧಾನಿ ಮಾಡಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಅವರು ನೀಡಿದ ಈ ಹೇಳಿಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಸಂದರ್ಶನವೊಂದರಲ್ಲಿ ಅಯ್ಯರ್‌ ಆಡಿರುವ ಈ ಮಾತುಗಳ ವಿಡಿಯೋವೊಂದನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಹಂಚಿಕೊಂಡಿದ್ದಾರೆ. ಇದು ಯಾವಾಗ ನಡೆದ ಸಂದರ್ಶನ ಎಂಬುದು ಗೊತ್ತಾಗಿಲ್ಲ. ಆ ವಿಡಿಯೋದಲ್ಲಿ ‘ರಾಜೀವ್‌ ಶೈಕ್ಷಣಿಕವಾಗಿ ವಿಫಲರಾಗಿದ್ದರು. ಉತ್ತೀರ್ಣರಾಗುವುದು ಅತ್ಯಂತ ಸುಲಭವಾಗಿರುವ ಕೇಂಬ್ರಿಡ್ಜ್‌ನಲ್ಲೂ ರಾಜೀವ್‌ ಫೇಲ್‌ ಆಗಿದ್ದರು. ಬಳಿಕ ಇಂಪೀರಿಯಲ್‌ ಕಾಲೇಜಿಗೆ ಸೇರಿಸಿದರೆ ಅಲ್ಲೂ ಅವರು ಫೇಲ್‌ ಆಗಿದ್ದರು. ಇಂಥ ಶೈಕ್ಷಣಿಕ ಹಿನ್ನೆಲೆ ಹೊಂದಿದ ವ್ಯಕ್ತಿ ಹೇಗೆ ಭಾರತದ ಪ್ರಧಾನಿಯಾದರು ಎಂಬುದು ಹಲವರ ಪ್ರಶ್ನೆ. ಈ ಕುರಿತ ನಿಗೂಢತೆ ಬಹಿರಂಗವಾಗಲಿ’ ಎಂದು ಕಾಂಗ್ರೆಸ್‌ ನಾಯಕರ ಕಾಲೆಳೆದಿದ್ದಾರೆ.

ಅಯ್ಯರ್‌ ಹೇಳಿದ್ದೇನು?:

‘ನಾನು ಹಾಗೂ ರಾಜೀವ್‌ ಕೇಂಬ್ರಿಡ್ಜ್‌ನಲ್ಲಿ ಸಹಪಾಠಿಗಳಾಗಿದ್ದೆವು. ಅಲ್ಲಿ ಅನುತ್ತೀರ್ಣರಾಗುವುದು ಬಹಳ ಅಪರೂಪ. ಅರ್ಥಾತ್‌, ಎಲ್ಲರನ್ನೂ ಅಲ್ಲಿ ಪಾಸ್‌ ಮಾಡಲಾಗುತ್ತದೆ. ಆದರೂ ರಾಜೀವ್‌ ಫೇಲ್‌ ಆದರು. ಬಳಿಕ ಲಂಡನ್‌ನ ಇಂಪೀರಿಯಲ್‌ ಕಾಲೇಜಿಗೆ ಹೋಗಿ ಅಲ್ಲೂ ಅನುತ್ತೀರ್ಣರಾದರು. ಅವರೊಬ್ಬ ಪೈಲಟ್‌ ಹೊರತೂ ಬೇರೇನೂ ಆಗಿರಲಿಲ್ಲ. ಆದರೂ ಭಾರತದಂಥ ದೇಶಕ್ಕೆ ಅವರನ್ನು ಹೇಗೆ ಪ್ರಧಾನಿಯಾಗಿ ಮಾಡಲಾಯಿತು ಎಂಬುದು ನಮಗೆಲ್ಲಾ ಅಚ್ಚರಿ ತಂದಿತ್ತು.’ ಎಂದು ಅಯ್ಯರ್‌ ಹೇಳಿದ ಅಂಶಗಳು ವಿಡಿಯೋದಲ್ಲಿದೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಸಂಸದ ತಾರಿಕ್‌ ಅನ್ವರ್‌, ‘ಅತ್ಯುತ್ತಮ ವ್ಯಕ್ತಿಗಳೇ ಕೆಲವೊಮ್ಮೆ ಸೋಲುತ್ತಾರೆ. ಅಂಥದ್ದರಲ್ಲಿ ರಾಜೀವ್‌ರ ಶೈಕ್ಷಣಿಕ ವೈಫಲ್ಯ ದೊಡ್ಡದಲ್ಲ. ಅವರೆಂದೂ ರಾಜಕಾರಣದಲ್ಲಿ ಸೋಲಲಿಲ್ಲ. ಅವರು ಪ್ರಧಾನಿಯಾಗಿ 5 ವರ್ಷದಲ್ಲಿ ಸಾಧಿಸಿದ್ದನ್ನು ಮಾಡಿ ತೋರಿಸಿದವರು ಅತಿ ವಿರಳ’ ಎಂದಿದ್ದಾರೆ.