ಸಾರಾಂಶ
ಬೆಂಗಳೂರು : ನಗರ ಹಾಗೂ ಹೊರ ವಲಯಗಳಲ್ಲಿ ಅಭಿವೃದ್ಧಿಪಡಿಸಿರುವ ನಿವೇಶನಗಳಿಗೆ, ಉದ್ದೇಶಿತ ಫ್ಲ್ಯಾಟ್‌ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಮಂಡಳಿಯು ಒಂದು ಸಾವಿರ ಸ್ವತಂತ್ರ ಡೂಪ್ಲೆಕ್ಸ್ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಸಿದ್ಧಪಡಿಸಿದೆ.
ಆನೇಕಲ್-ಚಂದಾಪುರ ರಸ್ತೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಸೂರ್ಯ ನಗರ 4ನೇ ಹಂತದಲ್ಲಿ ‘ಸ್ವತಂತ್ರ ಮನೆ’ಗಳು ನಿರ್ಮಾಣವಾಗಲಿವೆ. ಐಟಿ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಯಿಂದ 8-9 ಕಿ.ಮೀ ದೂರದಲ್ಲಿರುವ ಈ ಬಡಾವಣೆಗೆ ಈಗ ಸಾಕಷ್ಟು ಬೇಡಿಕೆ ಬಂದಿದೆ. ಹೀಗಾಗಿ, ಮಧ್ಯಮ ವರ್ಗದವರನ್ನು ಗುರಿಯಾಗಿಟ್ಟುಕೊಂಡು ಮೂರು ಮತ್ತು ನಾಲ್ಕು ಬೆಡ್ ರೂಮ್‌ಗಳ ಡೂಪ್ಲೆಕ್ಸ್ ಮನೆ ನಿರ್ಮಿಸಲಾಗುತ್ತದೆ.
ಒಟ್ಟು 1000 ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ 100 ಮನೆಗಳು ನಿರ್ಮಾಣವಾಗಲಿವೆ. ಕೆಲವೇ ದಿನಗಳಲ್ಲಿ ಸಾರ್ವಜನಿಕರಿಂದ ಬೇಡಿಕೆ ಸಮೀಕ್ಷೆಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಪ್ರತಿಕ್ರಿಯೆ ಆಧರಿಸಿ ಉಳಿದ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಕೆಎಚ್‌ಬಿ ಆಯುಕ್ತರಾದ ಕವಿತಾ ಮನ್ನಿಕೇರಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
30/40, 30/50 ಹಾಗೂ 40/60 ಅಳತೆಯ ಜಾಗದಲ್ಲಿ ಸುತ್ತಲು ಕಾಂಪೌಂಡ್ ಸಹಿತ ಸ್ವತಂತ್ರ ಮನೆಯ ಕೆಳ ಮಹಡಿಯಲ್ಲಿ ಒಂದು ಬೆಡ್ ರೂಮ್, ಕಿಚನ್ ಮತ್ತು ಹಾಲ್, ವಾಹನ ಪಾರ್ಕಿಂಗ್ ಹಾಗೂ ಮೊದಲ ಮಹಡಿಯಲ್ಲಿ 2 ಮತ್ತು 3 ಬೆಡ್ ರೂಮ್‌ಗಳು, ಸಿಟ್‌ಔಟ್ ಇರಲಿವೆ. ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಲಿರುವ ಮನೆಗಳ ಸಮೀಪದಲ್ಲಿ ಬಿಡಿಎ ಮಾದರಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ಗುರಿ ಇದೆ. ನಿವೇಶನ ದರ ಮತ್ತು ನಿರ್ಮಾಣ ವೆಚ್ಚ ಆಧರಿಸಿ ಶೀಘ್ರದಲ್ಲೇ ಮನೆಯ ದರ ನಿಗದಿಪಡಿಸಲಾಗುತ್ತದೆ ಎಂದು ಕೆಎಚ್‌ಬಿ ಮುಖ್ಯ ಎಂಜಿನಿಯರ್ ಕೆ.ಟಿ. ರವಿಕುಮಾರ್ ಹೇಳಿದರು.