ಸಾರಾಂಶ
ಬೆಂಗಳೂರು : ಮನೆಯ ಹಿತ್ತಲಲ್ಲಿ ಐದಾರು ಗಾಂಜಾ ಗಿಡ ಬೆಳೆದ ಆರೋಪದ ಮೇಲೆ 67 ವರ್ಷದ ಹಿರಿಯ ನಾಗರಿಕರೊಬ್ಬರ ವಿರುದ್ಧ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ತಮ್ಮ ವಿರುದ್ಧ ಬನಶಂಕರಿ ಠಾಣಾ ಪೊಲೀಸರು ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಜಯನಗರದ 7ನೇ ಬ್ಲಾಕ್ ನಿವಾಸಿ ಚಂದ್ರಶೇಖರ್ (67) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರರು ಗಾಂಜಾ ಬೆಳೆಯುತ್ತಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ (ತನಿಖಾಧಿಕಾರಿಗಳು) ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಅರ್ಜಿದಾರರ ಮನೆಯ ಹಿತ್ತಲಿನಲ್ಲಿ ಪತ್ತೆಯಾದ ಗಾಂಜಾ ಪ್ರಮಾಣ ಪ್ರತ್ಯೇಕಿಸದೆ ಬೇರುಸಹಿತ ಸಸ್ಯಗಳ ಜೊತೆಗೆ ತೂಕ ಹಾಕಲಾಗಿದೆ. ಪ್ಲಾಸ್ಟಿಕ್ ಚೀಲ ಸೇರಿದಂತೆ ಗಾಂಜಾ ಗಿಡದ ಬೇರು, ಕಾಂಡ, ಎಲೆ ಮೊಗ್ಗುಗಳನ್ನು ತೂಕ ಮಾಡಲಾಗಿದೆ. ಬೆಳೆ ಬೆಳೆಯುವುದಕ್ಕೂ ಹಾಗೂ ನೈಸರ್ಗಿಕವಾಗಿ ಹುಟ್ಟಿ ಬೆಳೆದ ಸಸಿಗಳನ್ನು ಸಮಾನವಾಗಿ ನೋಡಲಾಗದು. ಆದ್ದರಿಂದ ದೋಷಾರೋಪ ಪಟ್ಟಿಯೇ ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿಸಿದ ಚಂದ್ರಶೇಖರ್ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ಪ್ರಕರಣದ ವಿವರ
2023ರಲ್ಲಿ ಪೊಲೀಸರು ಅರ್ಜಿದಾರರ ಮನೆಯನ್ನು ಶೋಧ ಮಾಡಿದ ವೇಳೆ ಮನೆಯ ಹಿತ್ತಲಿನಲ್ಲಿ 5 ರಿಂದ 6 ಗಾಂಜಾ ಗಿಡ ಬೆಳೆದಿರುವುದು ಕಂಡು ಬಂದಿತ್ತು. ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಧೀನ ನ್ಯಾಯಾಲಯ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಸೆಕ್ಷನ್ 20(ಎ) ಮತ್ತು 20(ಬಿ)(2)(ಸಿ) ಅಡಿಯಲ್ಲಿ ಗಾಂಜಾ ಬೆಳೆದ, ಸಂಗ್ರಹಣೆ ಹಾಗೂ ಮಾರಾಟ ಮಾಡಿದ ಆರೋಪದಡಿ ಅರ್ಜಿದಾರರ ವಿರುದ್ಧ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಇದರಿಂದ ತಮ್ಮ ವಿರುದ್ದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯ ವಿಚಾರಣೆ ರದ್ದುಪಡಿಸುವಂತೆ ಕೋರಿ ಚಂದ್ರಶೇಖರ ಹೈಕೋರ್ಟ್ ಮೊರೆ ಹೋಗಿದ್ದರು.
ಆರೋಪಿ ಪರ ವಕೀಲರು, ಅರ್ಜಿದಾರರ ಮನೆಯ ಹಿತ್ತಲಿನಲ್ಲಿ ಸಾಮಾನ್ಯ ಕಳೆಗಳ ಜೊತೆಗೆ ಬೆಳದಿದ್ದ 5 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಗಿಡವನ್ನು ಅರ್ಜಿದಾರರೇ ಬೆಳೆಸಿದ್ದಾರೆ ಎಂಬುದನ್ನು ದೃಢಪಡಿಸುವ ಯಾವುದೇ ಪುರಾವೆ ಇಲ್ಲ. ವಶಪಡಿಸಿಕೊಂಡ ಗಿಡಗಳನ್ನು ಬೇರು, ಕಾಂಡ, ಎಲೆ, ಮೊಗ್ಗುಗಳನ್ನು ಬೇರ್ಪಡಿಸದೆ ತೂಕ ಹಾಕಿ, ಗಾಂಜಾ ಪ್ರಮಾಣವನ್ನು 27.360 ಕೇಜಿ ಎಂದು ತೋರಿಸಲಾಗಿದೆ. ಇದು ಸಂಪೂರ್ಣವಾಗಿ ಕಾನೂನು ಬಾಹಿರ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು.
ನ್ಯಾಯಪೀಠ ಹೇಳಿದ್ದೇನು?
*ಅರ್ಜಿದಾರರು ಗಾಂಜಾ ಬೆಳೆಯುತ್ತಿದ್ದರು ಎನ್ನುವುದಕ್ಕೆ ಸಾಕ್ಷ್ಯ ಇಲ್ಲ
*ಗಾಂಜಾ ಪ್ರಮಾಣ ಪ್ರತ್ಯೇಕಿಸದೆ ಬೇರುಸಹಿತ ಸಸ್ಯ ಜೊತೆಗೆ ತೂಕ
*ಬೆಳೆ ಬೆಳೆಯುವುದಕ್ಕೂ, ನೈಸರ್ಗಿಕವಾಗಿ ಹುಟ್ಟಿದ ಸಸಿ ಸಮಾನವಲ್ಲ