ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ

| Published : Sep 26 2025, 02:10 AM IST

ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ನೀತಿ ರೂಪಿಸಲು ಒಂದು ತಿಂಗಳು ಕಾಲಾವಕಾಶ ನೀಡಿದರೂ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಬೈಕ್‌ ಟ್ಯಾಕ್ಸಿಗೆ ವಿಧಿಸಿರುವ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಮೌಖಿಕವಾಗಿ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ನೀತಿ ರೂಪಿಸಲು ಒಂದು ತಿಂಗಳು ಕಾಲಾವಕಾಶ ನೀಡಿದರೂ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಬೈಕ್‌ ಟ್ಯಾಕ್ಸಿಗೆ ವಿಧಿಸಿರುವ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಮೌಖಿಕವಾಗಿ ತಿಳಿಸಿದೆ.

ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಓಲಾ, ಉಬರ್‌ ಮತ್ತು ರ‍್ಯಾಪಿಡೋ ಮಾತೃ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ರಾಜ್ಯದಲ್ಲಿ ಪ್ರಯಾಣಿಕರು ಬಳಸಲು ಬೈಕ್‌ ಟ್ಯಾಕ್ಸಿಗೆ ಸರ್ಕಾರ ಅನುಮತಿ ನೀಡಿಲ್ಲ. ಬೈಕ್‌ ಗಳನ್ನು ಡೆಲಿವರಿಗಾಗಿ ಬಳಸಲು ಮಾತ್ರ ಅವಕಾಶ ನೀಡಲಾಗಿದೆ. ಡೆಲಿವರಿಗಾಗಿ ಟ್ಯಾಕ್ಸಿ ಎಂದು ನೋಂದಣಿ ಮಾಡಿಸುವ ಅಗತ್ಯವಿಲ್ಲ. ಬೈಕ್‌ ಗಳನ್ನು ಡೆಲಿವರಿಗೆ ಬಳಸುವವರಿಗೆ ನೀತಿ ರೂಪಿಸಿದ್ದೇವೆ. ಬೈಕ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಕೆಲ ಟ್ಯಾಕ್ಸಿ ಕಂಪನಿಗಳು ಅನುಮತಿಯಿಲ್ಲದಿದ್ದರೂ ಬೈಕ್‌ ಟ್ಯಾಕ್ಸಿಗಳನ್ನು ಪ್ರಯಾಣಿಕರಿಗಾಗಿ ಬಳಸುತ್ತಿವೆ. ಇದು ನ್ಯಾಯಾಲಯ ಆದೇಶದ ಉಲ್ಲಂಘನೆ. ಆ ಕಂಪನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

ಈ ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡಿ ನೀತಿ ರೂಪಿಸಲು ನ್ಯಾಯಾಲಯ ಒಂದು ತಿಂಗಳು ಸಮಯ ನೀಡಿದ್ದರೂ ಸರ್ಕಾರ ನೀತಿ ರೂಪಿಸಿಲ್ಲ. ನ್ಯಾಯಾಲಯ ಸೂಚಿಸಿದ್ದು ಬೈಕ್‌ ಟ್ಯಾಕ್ಸಿ ವಿಚಾರ. ಆದರೆ ಸರ್ಕಾರ ಇದೀಗ ಗಿಗ್‌ ಕಾರ್ಮಿಕರ ಬಗ್ಗೆ ಹೇಳುತ್ತಿರುವುದನ್ನು ಒಪ್ಪಲಾಗದು. ಬೈಕ್‌ ಟ್ಯಾಕ್ಸಿಗೆ ನಿರ್ಬಂಧ ಹೇರಿರುವ ಕ್ರಮಕ್ಕೆ ತಡೆ ನೀಡುವ ಬಗ್ಗೆ ನ್ಯಾಯಾಲಯ ಪರಿಶೀಲಿಸುತ್ತಿದೆ. ಬೈಕ್‌ ಟ್ಯಾಕ್ಸಿ ಬಗ್ಗೆ ನಿಮ್ಮ ವಾದ ಮಂಡಿಸಿ, ನಂತರ ನ್ಯಾಯಾಲಯ ಸೂಕ್ತ ಆದೇಶ ಹೊರಡಿಸುತ್ತದೆ ಎಂದು ತಿಳಿಸಿ ವಿಚಾರಣೆಯನ್ನು ಅ.15ಕ್ಕೆ ನಿಗದಿಪಡಿಸಿತು.

ಮೇಲ್ಮನವಿ ಕುರಿತು ಕಳೆದ ಆ.22ರಂದು ನ್ಯಾಯಾಲಯ, ಬೈಕ್‌ ಟ್ಯಾಕ್ಸಿ ಸೇವೆ ನೀಡುವ ವ್ಯಕ್ತಿಗಳಿಗೆ ಕಿರುಕುಳ ನೀಡಬಾರದು. ವ್ಯಕ್ತಿಗತ ಬೈಕ್‌ ಟ್ಯಾಕ್ಸಿ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಬಾರದು. ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡಲು ನೀತಿ ರೂಪಿಸುವ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.