ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊದಲ ರಾತ್ರಿ ಲೈಂಗಿಕ ಕ್ರಿಯೆ ನಡೆಸದ ಕಾರಣಕ್ಕೆ ₹2 ಕೋಟಿ ರುಪಾಯಿ ಜೀವನಾಂಶ ಕೋರುತ್ತಿದ್ದಾರೆ, ತನ್ನ ಮೇಲೆ ದೌರ್ಜನ್ಯವನ್ನೂ ನಡೆಸಿದ್ದಾರೆ!ಹೀಗಂತ ನಗರದ ಮಾರೇನಹಳ್ಳಿ ನಿವಾಸಿ ಕೆ.ಎಂ.ಪ್ರವೀಣ್ ಕುಮಾರ್ ಅವರು ತಮ್ಮ ಪತ್ನಿ, ಕುಟುಂಬದವರ ವಿರುದ್ಧ ಗೋವಿಂದರಾಜನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಗಿರಿನಗರದ ಅವರ ಪತ್ನಿ ಚಂದನ ಹಾಗೂ ಕುಟುಂಬದವರಾದ ಅಶೋಕ್ ಕುಮಾರ್ ಮಂಜುಳ, ಜಯಮ್ಮ, ಮಂಜುನಾಥ್, ಎಂ.ಕೋಮಲ, ಸ್ನೇಹ, ಶೋಭ, ಪುನೀತ್ ಹಾಗೂ ವೆಂಕಟೇಶ್ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ವಿವರ ಹೀಗಿದೆ:ಕಳೆದ ಮೇ ತಿಂಗಳಲ್ಲಿ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಪ್ರವೀಣ್ ಹಾಗೂ ಚಂದನ ವಿವಾಹವಾಗಿದ್ದರು. ಮದುವೆ ಖರ್ಚು-ವೆಚ್ಚವನ್ನು ಎರಡೂ ಕುಟುಂಬಗಳು ಭರಿಸಿದ್ದವು. ಅದೇ ದಿನ ಬೆಂಗಳೂರನ ಸಪ್ನಗಿರಿ ಪ್ಯಾಲೇಸ್‌ನಲ್ಲಿ ಆರತಕ್ಷತೆ ಸಹ ನಡೆದಿತ್ತು. ಇದರ ಸಂಪೂರ್ಣ ವೆಚ್ಚವನ್ನು ಪ್ರವೀಣ್ ಭರಿಸಿದ್ದರು. ವಿವಾಹಕ್ಕೂ ಮುನ್ನ ಮೇ 1ರಂದು ಚಂದನ ಅವರನ್ನು ಗೃಹ ಪ್ರವೇಶಕ್ಕಾಗಿ ಬೆಂಗಳೂರಿಗೆ ಪ್ರವೀಣ್ ಕರೆ ತಂದಿದ್ದರು. ಆಗ ಒಂದು ದಿನ ಅವರ ಮನೆಯಲ್ಲೇ ಆಕೆ ಇದ್ದಳು.
ಮದುವೆ ನಂತರ ಮೇ 16ರಂದು ಅತ್ತೆಯ ಮನೆಯಲ್ಲಿ ಪ್ರಸ್ಥದ ಕಾರ್ಯಕ್ರಮ ಏರ್ಪಡಿಸಿದ್ದರು. ಕೆಲ ಅಡಚಣೆಗಳಿಂದಾಗಿ ಆ ದಿನ ಲೈಂಗಿಕ ಕ್ರಿಯೆ ನಡೆದಿರಲಿಲ್ಲ. ಇದಾದ ಎರಡು ದಿನಗಳ ನಂತರವೂ ದೈಹಿಕ ಒತ್ತಡವಿದ್ದ ಕಾರಣಕ್ಕೆ ಪತ್ನಿ ಜತೆ ಲೈಂಗಿಕ ಸಂಪರ್ಕ ಸಾಧ್ಯವಾಗಿರಲಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಇದೇ ವಿಚಾರವಾಗಿ ಪ್ರವೀಣ್‌ರನ್ನು ಹೀಯಾಳಿಸಿ ಹಾಗೂ ಅವಾಚ್ಯವಾಗಿ ನಿಂದಿಸಿ ಪತ್ನಿ ಗಲಾಟೆ ಮಾಡಿದ್ದರು. ಬಳಿಕ ಪ್ರವೀಣ್‌ಗೆ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದು ಅಪಪ್ರಚಾರ ಮಾಡಿದ್ದರು. ತರುವಾಯ ಮೇ 19ರಂದು ಪತ್ನಿಯನ್ನು ಅವರ ಚಿಕ್ಕಪ್ಪ ಮನೆಗೆ ಕರೆದುಕೊಂಡು ಹೋಗಿದ್ದರು. ಆ ನಂತರ ಪ್ರವೀಣ್ ಅವರ ತಾಯಿಗೆ ಕರೆ ಮಾಡಿದ್ದ ಪತ್ನಿ ಪ್ರಸ್ಥದ ವಿಷಯ ತಿಳಿಸಿ ದೂರು ನೀಡಿದ್ದರು.ಕೆಲ ದಿನಗಳ ಬಳಿಕ ಚಂದನಾಳ 15-17 ಸಂಬಂಧಿಕರು ಪ್ರವೀಣ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಆಗ ಎಲ್ಲಾ ಸಂಬಂಧಿಕರನ್ನು ಒಗ್ಗೂಡಿಸಿ ಪಂಚಾಯತಿ ಮಾಡಿ ಎರಡು ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ಚಂದನ ಹೆಸರಿಗೆ ವರ್ಗಾವಣೆ ಮಾಡುವಂತೆ ಪ್ರವೀಣ್ ಮೇಲೆ ಆರೋಪಿಗಳು ಒತ್ತಡ ಹಾಕಿದ್ದರು. ಇದೇ ವಿಷಯವಾಗಿ ಎರಡ್ಮೂರು ಬಾರಿ ಮನೆಯೊಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ನಾಶಪಡಿಸಿದ್ದಾರೆ. ನಂತರ ಮನೆ ಮುಂದೆ ಮಲಗಿಕೊಂಡು ತೊಂದರೆ ನೀಡಿದ್ದಾರೆ. ಅಲ್ಲದೆ, ಪ್ರವೀಣ್ ಮೇಲೆ ಮರಣಾಂತಿಕ ಹಲ್ಲೆಯನ್ನೂ ನಡೆಸಿದ್ದಾರೆ. ಈ ಕೃತ್ಯಕ್ಕೆ ಸಾಕ್ಷಿಗಳಾಗಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ವೈದ್ಯಕೀಯ ವರದಿಗಳಿವೆ. ಈ ದೌರ್ಜನ್ಯವನ್ನು ಸಹಿಸಲಾರದೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.