ಸಾರಾಂಶ
ಖಾಸಗಿ ಪದವಿ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಗೆ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ ಒಂದೂವರೆ ಕೋಟಿ ರು.ಗಳನ್ನು ನಾಲ್ವರು ದುಷ್ಕರ್ಮಿಗಳು ದೋಚಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಪದವಿ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಗೆ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ ಒಂದೂವರೆ ಕೋಟಿ ರು.ಗಳನ್ನು ನಾಲ್ವರು ದುಷ್ಕರ್ಮಿಗಳು ದೋಚಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಟ್ಟಿಗೇನಹಳ್ಳಿ ನಿವಾಸಿ ಗಿರಿರಾಜ ಹಣ ಕಳೆದುಕೊಂಡಿದ್ದು, ಮೂರು ದಿನಗಳ ಹಿಂದೆ ಅವರ ಮನೆಗೆ ನುಗ್ಗಿ ನಾಲ್ವರು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಈ ದರೋಡೆ ಹಿಂದೆ ಪರಿಚಿತರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ಜಮೀನು ಮಾರಾಟದ ಹಣ:ಖಾಸಗಿ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಗಿರಿರಾಜ್ ಅವರು, ತಮ್ಮ ಕುಟುಂಬದ ಜತೆ ಕಟ್ಟಿಗೇನಹಳ್ಳಿಯಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಜಮೀನು ಮಾರಾಟದ 1.5 ಕೋಟಿ ರು. ಹಣವನ್ನು ಅವರು ಮನೆಯಲ್ಲಿಟ್ಟಿದ್ದರು. ಮೂರು ದಿನಗಳ ಹಿಂದೆ ನಕಲಿ ನಂಬರ್ ಪ್ಲೇಟ್ ಬಳಸಿದ್ದ ಕಾರಿನಲ್ಲಿ ಅವರ ಮನೆಗೆ ನಾಲ್ವರು ಅಪರಿಚಿತರು ತೆರಳಿದ್ದರು. ಬಳಿಕ ನಾವು ಡಿಪಾರ್ಟ್‌ಮೆಂಟ್ ನವರು ಎಂದು ಹೇಳಿ ಗಿರಿರಾಜ್ ಅವರಿಗೆ ನಿಮ್ಮ ಮನೆಯಲ್ಲಿ ಅಕ್ರಮವಾಗಿ ಸಂಪಾದಿಸಿದ ಹಣವಿದೆ ಎಂದು ಆರೋಪಿಗಳು ಬೆದರಿಸಿದ್ದಾರೆ. ಬಳಿಕ ಅವರ ಮನೆಯಿಂದ 1.5 ಕೋಟಿ ರು. ನಗದು ಹಾಗೂ 50 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.