ವಂಚಕಿ ‘ಬಂಗಾರಿ’ಯ ಜೊತೆ ಇನ್‌ಸ್ಪೆಕ್ಟರ್‌ ಗೋವಾ ಟ್ರಿಪ್‌?

| Published : Feb 12 2025, 01:33 AM IST

ಸಾರಾಂಶ

ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಮೊಬೈಲ್ ಕರೆಗಳ ವಿವರ (ಸಿಡಿಆರ್‌) ಪಡೆದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಚಿನ್ನ ವಂಚನೆ ಆರೋಪಿ ಐಶ್ವರ್ಯಾಗೌಡಳ ಜತೆ ಖಾಕಿ ನಂಟಿನ ರೋಚಕ ಸಂಗತಿ ಬಯಲಾಗುತ್ತಿದ್ದು, ಈಗ ಆಕೆ ಜತೆ ನಗರದ ಇನ್‌ಸ್ಪೆಕ್ಟರ್‌ವೊಬ್ಬರು ಗೋವಾ ಪ್ರವಾಸಕ್ಕೆ ಹೋಗಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಹಳ ಹಿಂದಿನ ಪ್ರವಾಸ ಕತೆ ಇದಾಗಿದ್ದು, ವಂಚನೆ ಪ್ರಕರಣದ ವೇಳೆ ಜಪ್ತಿಯಾದ ಐಶ್ವರ್ಯಾಗೌಡಳ ಮೊಬೈಲ್‌ಗಳ ಪರಿಶೀಲನೆ ವೇಳೆ ಪೊಲೀಸ್ ಅಧಿಕಾರಿ ಜತೆ ಪ್ರವಾಸದ ಫೋಟೋಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ. ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುವಾಗ ಐಶ್ವರ್ಯಾ ಜತೆ ಆ ಇನ್‌ಸ್ಪೆಕ್ಟರ್‌ಗೆ ಆತ್ಮೀಯತೆ ಇತ್ತು. ಇದೇ ಗೆಳೆತನದಲ್ಲಿ ಆಕೆಗೆ ಸಿಡಿಆರ್ ಅನ್ನು ಇನ್‌ಸ್ಪೆಕ್ಟರ್ ನೀಡಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತವಾಗಿದೆ.

ಈ ಶಂಕೆ ಹಿನ್ನೆಲೆಯಲ್ಲಿ ಸಿಡಿಆರ್ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ಗೆ ತನಿಖೆ ಬಿಸಿ ತಟ್ಟುವ ಸಾಧ್ಯತೆಗಳಿದ್ದು, ಐಶ್ವರ್ಯಾಳ ವಿಚಾರಣೆ ಬಳಿಕ ಆ ಇನ್‌ಸ್ಪೆಕ್ಟರ್‌ಗೆ ತನಿಖಾಧಿಕಾರಿ ಆಗಿರುವ ಉಪ ವಿಭಾಗದ ಚಂದನ್ ಕುಮಾರ್ ನೋಟಿಸ್ ಜಾರಿಗೊಳಿಸಬಹುದು ಎನ್ನಲಾಗಿದೆ.