ಸಾರಾಂಶ
ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹೊತ್ತಿನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಡ್ರೋನ್ ದಾಳಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹೊತ್ತಿನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಡ್ರೋನ್ ದಾಳಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲಿಮಿಟೆಡ್(ಬಿಐಎಎಲ್)ನ ಟರ್ಮಿನಲ್-1ರ ಕಚೇರಿಗೆ ಫೆ.8ರಂದು ಬೆಳಗ್ಗೆ 11.44ಕ್ಕೆ mahanteshs6699@proton.me ಎಂಬ ಇ-ಮೇಲ್ ವಿಳಾಸದಿಂದ ಈ ಬೆದರಿಕೆ ಇ-ಮೇಲ್ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ. ಅವರಿಂದ ನನ್ನ ಪತ್ರಕ್ಕೆ ಯಾವುದೇ ಉತ್ತರ ಸಿಗದಿದ್ದರೆ, ಬೆಂಗಳೂರು, ಚೆನ್ನೈ, ಕೇರಳ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡ್ ವೇಳೆ ಡ್ರೋನ್ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶದಲ್ಲಿ ಕಿಡಿಗೇಡಿಗಳು ಉಲ್ಲೇಖಿಸಿದ್ದಾರೆ.
ಈ ಸಂಬಂಧ ಕೆಐಎ ವಿಮಾನ ನಿಲ್ದಾಣದ ಅಧಿಕಾರಿ ಮೊಹಮ್ಮದ್ ಜಾಹೀರ್ ನೀಡಿದ ದೂರಿನ ಮೇರೆಗೆ ಬಿಐಎಎಲ್ ಠಾಣೆ ಪೊಲೀಸರು ಅನಾಮಧೇಯ ಕಿಡಿಗೇಡಿಗಳ ವಿರುದ್ಧ ಬಿಎನ್‌ಎಸ್ ಕಾಯ್ದೆ ಕಲಂ 125, 351(4) ಮತ್ತು 353(1) ಅಡಿ ಸುರಕ್ಷತೆಗೆ ಅಪಾಯ, ಬೆದರಿಕೆ, ಕರ್ತವ್ಯ ತಡೆಗೆ ಯತ್ನ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ. ಬೆದರಿಕೆ ಸಂದೇಶ ಬಂದಿರುವ ಇ-ಮೇಲ್ ವಿಳಾಸದ ಜಾಡು ಹಿಡಿದು ಕಿಡಿಗೇಡಿಯ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.