ಬೆಂಗಳೂರು : ಶೀಲ ಶಂಕಿಸಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನ ಕೊಂದು ಪತಿ ಆತ್ಮಹತ್ಯೆ

| Published : Oct 18 2024, 01:22 AM IST / Updated: Oct 18 2024, 04:48 AM IST

us crime news

ಸಾರಾಂಶ

ಶೀಲ ಶಂಕಿಸಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದು ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಶೀಲ ಶಂಕಿಸಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದು ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‌ಬಿಐ ಲೇಔಟ್‌ ನಿವಾಸಿಗಳಾದ ಕುಲುಸು ಲಕ್ಷ್ಮೀ (33), ಆಕೆಯ ಪ್ರಿಯಕರ ಗಣೇಶ್ ಕುಮಾರ್ (20) ಕೊಲೆಯಾಗಿದ್ದು, ಈ ಜೋಡಿ ಹತ್ಯೆ ಬಳಿಕ ಪತಿ ಕುಲುಸು ಗೊಲ್ಲ (40)  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರ್‌ಬಿಆ ಲೇಔಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡು ಅದೇ ಕಟ್ಟಡದ ಆ‍ವರಣದ ತಾತ್ಕಾಲಿಕ ಶೆಡ್‌ನಲ್ಲಿ ಮೂವರು ನೆಲೆಸಿದ್ದರು. ಕಟ್ಟಡದ ಬಳಿಗೆ ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಮೇಸ್ತ್ರಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶ  ರಾಜ್ಯದ ಶ್ರೀಕಾಕುಳಂ ಮೂಲದ ಲಕ್ಷ್ಮೀ ಹಾಗೂ ಗೊಲ್ಲ ದಂಪತಿಗೆ ಮೂವರು ಮಕ್ಕಳಿದ್ದಾರೆ. ಎರಡು ತಿಂಗಳ ಹಿಂದೆ ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದ ದಂಪತಿ, ಆರ್‌ಬಿಐ ಲೇಔಟ್‌ನಲ್ಲಿ ಖಾಸಗಿ ಕಂಪನಿ ಉದ್ಯೋಗಿ ರವಿಶಂಕರ್ ಎಂಬುವರು ನಿರ್ಮಿಸುತ್ತಿದ್ದ ಮೂರು ಅಂತಸ್ತಿನ ಮನೆ ಕಟ್ಟಡದಲ್ಲಿ ಕೆಲಸಕ್ಕೆ ಸೇರಿದ್ದರು. ತಿಂಗಳ ಹಿಂದೆ ಈ ಕಟ್ಟಡದ ಕೆಲಸಕ್ಕೆ ಅವರ ಪಕ್ಕದೂರಿನ ಗಣೇಶ್ ಬಂದು ಸೇರಿದ್ದ. ಅದೇ ಕಟ್ಟಡದ ಆ‍ವರಣದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಈ ಮೂವರು ಕಾರ್ಮಿಕರು ನೆಲೆಸಿದ್ದರು.

ಇತ್ತೀಚಿಗೆ ಲಕ್ಷ್ಮೀ ಮತ್ತು ಗಣೇಶ್ ಮಧ್ಯೆ ಅನೈತಿಕ ಸಂಬಂಧ ಬೆಳೆದಿದೆ ಎಂದು ಕುಲುಸು ಗೊಲ್ಲನ ಸಂದೇಹವಾಗಿತ್ತು. ಈ ಶಂಕೆ ಹಿನ್ನೆಲೆಯಲ್ಲಿ ಪತ್ನಿ ಜತೆ ಆಗಾಗ್ಗೆ ಆತ ಜಗಳವಾಡುತ್ತಿದ್ದ. ಎಂದಿನಂತೆ ಬುಧವಾರ ರಾತ್ರಿ ಕೂಡ ದಂಪತಿ ಮಧ್ಯೆ ಗಲಾಟೆಯಾಗಿದೆ. ಈ ಘಟನೆ ಬಳಿಕ ಲಕ್ಷ್ಮೀ ಹಾಗೂ ಗಣೇಶ್ ಮಲಗಿದ ಬಳಿಕ ಇಬ್ಬರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಂದು ಬಳಿಕ ಆ ಕಟ್ಟಡದ ಮೂರನೇ ಮಹಡಿಗೆ ತೆರಳಿ ನೇಣು ಬಿಗಿದುಕೊಂಡು ಗೊಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗ್ಗೆ ಕೆಲಸ ಶುರು ಮಾಡಲು ಕಾರ್ಮಿಕರನ್ನು ಎಚ್ಚರಿಸಲು ಮೇಸ್ತ್ರಿ ಕರೆ ಮಾಡಿದಾಗ ಈ ಮೂವರು ಕೆಲಸಗಾರರು ಕರೆ ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡ ಆತ, ಕೂಡಲೇ ಕಟ್ಟಡದ ಬಳಿ ಬಂದಾಗ ಶೆಡ್‌ನಲ್ಲಿ ರಕ್ತದ ಮಡುವಿನಲ್ಲಿ ಲಕ್ಷ್ಮೀ ಮತ್ತು ಗಣೇಶ್‌ ಮೃತದೇಹಗಳು ಕಂಡು ಆಘಾತಗೊಂಡಿದ್ದಾರೆ. ಬಳಿಕ ಕುಲುಸು ಗೊಲ್ಲನಿಗೆ ಹುಡುಕಾಡುತ್ತ ಮಹಡಿಗೆ ಮೇಸ್ತ್ರಿ ತೆರಳಿದಾಗ ಅಲ್ಲಿ ನೇಣಿನ ಕುಣಿಕೆಯಲ್ಲಿ ಆತನ ಮೃತದೇಹ ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮೇಸ್ತ್ರಿ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪತ್ನಿಯ ಕೊಲ್ಲುವುದಾಗಿ ನಾದಿನಿಗೆ ಕರೆ ಮಾಡಿದ್ದ: ನಿನ್ನ ಅಕ್ಕನನ್ನು ಕೊಲ್ಲುತ್ತೇನೆ ಎಂದು ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಲಕ್ಷ್ಮೀ ಸೋದರಿಗೆ ಕರೆ ಮಾಡಿ ಕುಲುಸು ಗೊಲ್ಲ ತಿಳಿಸಿದ್ದ. ಆದರೆ ಆತನ ಮಾತನ್ನು ಗಂಭೀರವಾಗಿ ಪರಿಗಣಿಸದೆ ಆಕೆ, ಬೆಳಗ್ಗೆ ಮಾತನಾಡೋಣ ಬಿಡಿ ಭಾವ. ಈಗ ಶಾಂತವಾಗಿ ಮಲಗಿ ಎಂದು ಬುದ್ಧಿಮಾತು ಹೇಳಿದ್ದರು. ಆ ಕರೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೆ ಮೂರು ಜೀವಗಳು ಉಳಿಯುತ್ತಿದ್ದವೇನೋ ಎನ್ನುತ್ತಾರೆ ಅಧಿಕಾರಿಗಳು.

ಇದಾದ ನಂತರ ಮತ್ತೆ ನಸುಕಿನ 4.30ರ ಸುಮಾರಿಗೆ ಮತ್ತೆ ನಾದಿನಿಗೆ ಆತ ಕರೆ ಮಾಡಿದ್ದಾನೆ. ಆದರೆ ನಿದ್ರೆಯಲ್ಲಿದ್ದ ಕಾರಣ ನಾದಿನಿ ಕರೆ ಸ್ವೀಕರಿಸಿಲ್ಲ. 5.30 ಗಂಟೆ ನಿದ್ರೆಯಿಂದ ಎದ್ದು ಮೊಬೈಲ್‌ ನೋಡಿದಾಗ ತಮ್ಮ ಬಾವನ ಮಿಸ್ಡ್‌ ಕಾಲ್ ನೋಡಿ ಆಕೆಗೆ ಆತಂಕವಾಗಿದೆ. ಕೂಡಲೇ ಭಾವನಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿಲ್ಲ. ಆಗ ತಮ್ಮ ಅಕ್ಕನಿಗೂ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಸಂಬಂಧಿಕರ ಮೂಲಕ ಪೊಲೀಸರನ್ನು ಅವರು ಸಂಪರ್ಕಿಸಿ ಮಾಹಿತಿ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.