ಟಿವಿಎಸ್ ಮೊಪೆಡ್‌ಗೆ ವೇಗವಾಗಿ ಬಂದ ಖಾಸಗಿ ಬಸ್ ಹಿಂದಿನಿಂದ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಗಸರಹಳ್ಳಿ ಗೇಟ್ ಬಳಿಯ ಮೈಸೂರು- ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿ ನಡೆದಿದೆ.

 ಕೆ.ಆರ್.ಪೇಟೆ : ಟಿವಿಎಸ್ ಮೊಪೆಡ್‌ಗೆ ವೇಗವಾಗಿ ಬಂದ ಖಾಸಗಿ ಬಸ್ ಹಿಂದಿನಿಂದ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಅಗಸರಹಳ್ಳಿ ಗೇಟ್ ಬಳಿಯ ಮೈಸೂರು- ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿ ನಡೆದಿದೆ.

ತಾಲೂಕಿನ ಶೀಳನೆರೆ ಹೋಬಳಿಯ ಭೈರಾಪುರ ಗ್ರಾಮದ ನಿವಾಸಿ ದುಬೈ ವೆಂಕಟೇಗೌಡ (75) ಮೃತ ದುರ್ದೈವಿ.

ವೆಂಕಟೇಗೌಡರು ಕೆಲಸದ ನಿಮಿತ್ತ ಕೆ.ಆರ್.ಪೇಟೆ ಪಟ್ಟಣಕ್ಕೆ ತಮ್ಮ ಟಿವಿಎಸ್ ಮೊಪೆಡ್‌ನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಅತಿವೇಗವಾಗಿ ಮೈಸೂರಿನಿಂದ ಕೆ.ಆರ್.ಪೇಟೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಟಿವಿಎಸ್ ಮೊಪೆಡ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಿಂದ ಕೆಳಕ್ಕೆ ಬಿದ್ದ ವೆಂಕಟೇಗೌಡರ ಮೈಮೇಲೆ ಬಸ್ಸಿನ ಚಕ್ರಗಳು ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ವಿಷಯ ತಿಳಿದು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಆನಂದೇಗೌಡ ಸ್ಥಳಕ್ಕೆ ಆಗಮಿಸಿ ಅಪಘಾತ ನಡೆಸಿದ ಖಾಸಗಿ ಬಸ್ ಮತ್ತು ಚಾಲಕನನ್ನು ವಶಕ್ಕೆ ಪಡೆದು ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.

ಘಟನೆ ಸಂಬಂಧ ಮೃತ ವೆಂಕಟೇಗೌಡರ ಪತ್ನಿ ಸರೋಜಮ್ಮ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೃತ ವೆಂಕಟೇಗೌಡ ಸುಮಾರು 40 ವರ್ಷಗಳ ಕಾಲ ದುಬೈನಲ್ಲಿ ಕಂಪನಿಯೊಂದರಲ್ಲಿ ದುಡಿಮೆ ಮಾಡಿ ಊರಿನಲ್ಲಿ ಜಮೀನು ಖರೀದಿಸಿ ನಿವೃತ್ತಿ ನಂತರ ಭೈರಾಪುರದಲ್ಲಿ ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೃತರ ಅಂತ್ಯ ಸಂಸ್ಕಾರವು ಸ್ವ ಗ್ರಾಮದಲ್ಲಿ ನಡೆಯಿತು.