ಸಾರಾಂಶ
ಗಾಯಾಳುಗಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆ ಮತ್ತು ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲು
------
ಕನ್ನಡಪ್ರಭ ವಾರ್ತೆ ನಂಜನಗೂಡುಎರಡು ಕೆಎಸ್.ಆರ್.ಟಿಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 37ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಚಾಮರಾಜನಗರ ಮುಖ್ಯರಸ್ತೆಯಲ್ಲಿರುವ ಗೋಳೂರು ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕೊಯಮತ್ತೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಹಾಗೂ ನಂಜನಗೂಡಿನಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳು ಗೋಳೂರು ಸಮೀಪದ ವಿದ್ಯಾಪೀಠದ ಬಳಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಇದರಿಂದಾಗಿ ಕೊಯಮತ್ತೂರು ಕಡೆಯಿಂದ ಬರುತ್ತಿದ್ದ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದರೆ, ಚಾಮರಾಜನಗರಕ್ಕೆ ತೆರಳುತ್ತಿದ್ದ ವಾಹನ ಸಹಾ ಮುಂಭಾಗದಲ್ಲಿ ನುಜ್ಜುಗುಜ್ಜಾಗಿದೆ. ಇನ್ನೂ ಅಪಘಾತದ ರಭಸಕ್ಕೆ ಎರಡೂ ವಾಹನಗಳ ಚಾಲಕರಿಗೆ ಗಂಭೀರ ಗಾಯಗಳಾಗಿದ್ದು, ಇವರೊಂದಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 37 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆ ಮತ್ತು ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.ಇನ್ನು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ನಂಜನಗೂಡು ಸಂಚಾರ ಠಾಣೆ ಪೊಲೀಸರು ತುರ್ತು ವಾಹನದ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಾಯಾಳುಗಳಿಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗಂಭೀರವಾಗಿ ಗಾಯಗೊಂಡವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕಳುಹಿಸಲಾಯಿತು.
ಪಟ್ಟಣದ ಸಂಚಾರ ಠಾಣೆ ನಿರೀಕ್ಷಕ ಸಿದ್ಧರಾಜು ಭೇಟಿ ನೀಡಿ, ಅಪಘಾತಕ್ಕೀಡಾಗಿರುವ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದು, ನಂಜನಗೂಡಿನ ಸಂಚಾರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.