ಪರಪ್ಪನ ಅಗ್ರಹಾರ ಜೈಲಲ್ಲಿರುವ ಪ್ರಜ್ವಲ್‌ಗೆ ಬಿಡುಗಡೆ ಭಾಗ್ಯ ಇಲ್ಲ

| N/A | Published : Jul 26 2025, 05:29 AM IST

Prajwal revanna
ಪರಪ್ಪನ ಅಗ್ರಹಾರ ಜೈಲಲ್ಲಿರುವ ಪ್ರಜ್ವಲ್‌ಗೆ ಬಿಡುಗಡೆ ಭಾಗ್ಯ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾ* ಪ್ರಕರಣದಲ್ಲಿ ಜಾಮೀನಿನ ನಿರೀಕ್ಷೆಯಲ್ಲಿದ್ದ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಮತ್ತೆ ನಿರಾಸೆಯಾಗಿದೆ.

  ಬೆಂಗಳೂರು :  ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾ* ಪ್ರಕರಣದಲ್ಲಿ ಜಾಮೀನಿನ ನಿರೀಕ್ಷೆಯಲ್ಲಿದ್ದ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಮತ್ತೆ ನಿರಾಸೆಯಾಗಿದೆ.

ಹೈಕೋರ್ಟ್‌ ಸೂಚನೆ ಮೇರೆಗೆ ಜಾಮೀನು ಕೋರಿ ಎರಡನೇ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿ ಆದೇಶಿಸಿದೆ.

ಇದಕ್ಕೂ ಮುನ್ನ ಆರೋಪಿ ಪ್ರಜ್ವಲ್‌ ಸಲ್ಲಿಸಿದ್ದ ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಶುಕ್ರವಾರ ಪ್ರಕಟಿಸಿದರು. ಹೀಗಾಗಿ ಕಳೆದ 14 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿರುವ ಪ್ರಜ್ವಲ್‌ಗೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.

ಆರೋಪಿ ಪ್ರಜ್ವಲ್‌ ಮೊದಲ ಬಾರಿಗೆ ಜಾಮೀನು ಕೋರಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದವು. ಬಳಿಕ ಕಳೆದ ಜೂನ್‌ನಲ್ಲಿ ಜಾಮೀನು ಕೋರಿ ಮತ್ತೆ ಪ್ರಜ್ವಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿ ಆದೇಶಿಸಿತ್ತು. ಅದರಂತೆ 2ನೇ ಬಾರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ಇದೀಗ ವಜಾಗೊಳಿಸಿದೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ಪ್ರಜ್ವಲ್‌ ಬಂಧನವಾಗಿ 14 ತಿಂಗಳು ಕಳೆದಿದೆ. ಇದೇ ಪ್ರಕರಣದ ಆರೋಪಿ ಎಚ್‌.ಡಿ.ರೇವಣ್ಣ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ ನೀಡಿದೆ. ಹೀಗಾಗಿ ಪ್ರಜ್ವಲ್‌ಗೂ ಜಾಮೀನು ನೀಡುವಂತೆ ಕೋರಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಸಿಐಡಿಯ ಎಸ್‌ಐಟಿ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು, ಜಾಮೀನು ಪಡೆಯಲು ಪ್ರಜ್ವಲ್ ಅರ್ಹರಾಗಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸುವಂತೆ ಪ್ರಬಲ ವಾದ ಮಂಡಿಸಿದ್ದರು.

Read more Articles on