ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ವಿಚಾರಣೆ ಮುಂದೂಡಲು ಒಪ್ಪದ ಕೋರ್ಟ್‌

| N/A | Published : Apr 17 2025, 08:56 AM IST

Prajwal Revanna.jpg

ಸಾರಾಂಶ

ಕೆ.ಆರ್‌.ನಗರದ ಮಹಿಳೆ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ವಿಚಾರಣಾ ಪ್ರಕ್ರಿಯೆ ಮುಂದೂಡುವಂತೆ ಸೆಷನ್ಸ್‌ ನ್ಯಾಯಾಲಯಕ್ಕೆ ಸೂಚಿಸಲು ಹೈಕೋರ್ಟ್‌ ಮೌಖಿಕವಾಗಿ ನಿರಾಕರಿಸಿತು.

ಬೆಂಗಳೂರು: ಕೆ.ಆರ್‌.ನಗರದ ಮಹಿಳೆ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ವಿಚಾರಣಾ ಪ್ರಕ್ರಿಯೆ ಮುಂದೂಡುವಂತೆ ಸೆಷನ್ಸ್‌ ನ್ಯಾಯಾಲಯಕ್ಕೆ ಸೂಚಿಸಲು ಹೈಕೋರ್ಟ್‌ ಮೌಖಿಕವಾಗಿ ನಿರಾಕರಿಸಿತು. 

ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿ ಪ್ರಜ್ವಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಮಾಜಿ ಸಂಸದರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು, ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ದೋಷಾರೋಪ ನಿಗದಿಪಡಿಸಿ ವಿಚಾರಣೆ ನಡೆಸಲು ಸೆಷನ್ಸ್‌ ನ್ಯಾಯಾಲಯ ಮುಂದಾಗಿದೆ. ಈ ಅರ್ಜಿ ಇತ್ಯರ್ಥವಾಗುವರೆಗೂ ಮುಂದಿನ ಪ್ರಕ್ರಿಯೆಗೆ ಮುಂದಾಗದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಸದ್ಯಕ್ಕೆ ಆ ಮನವಿ ಪರಿಗಣಿಸಲು ನಿರಾಕರಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆ ಮುಂದೂಡಿತು.

. ಈ ಅರ್ಜಿ ವಿಲೇವಾರಿಯಾಗುವವರೆಗೆ ಸೆಷನ್ಸ್‌ ಕೋರ್ಟ್‌ಗೆ ತನ್ನ ವಿಚಾರಣೆ ಮುಂದುವರಿಸುವುದು ಸೂಕ್ತವಲ್ಲ. ಹಾಗಾಗಿ, ವಿಚಾರಣೆ ಪ್ರಕ್ರಿಯೆ ಮುಂದೂಡಲು ಸೆಷನ್ಸ್‌ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್ ಯೆರೂರು ಅವರ ಪೀಠ, ಈ ಹಂತದಲ್ಲಿ ಪ್ರತಿವಾದಿಗಳ ವಾದ ಆಲಿಸದೆ ಮಧ್ಯಂತರ ಆದೇಶ ಮಾಡಲಾಗದು. ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಲಿ. ಅವರ ವಾದ ಆಲಿಸಿದ ನಂತರ ಮಧ್ಯಂತರ ಆದೇಶ ಮಾಡುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿತು. ಬಳಿಕ ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಸಂತ್ರಸ್ತೆ ಮಹಿಳೆ ಮತ್ತು ಎಸ್‌ಐಟಿಗೆ ನೋಟಿಸ್ ಜಾರಿಗೊಳಿತು.

ವಿಚಾರಣೆ ವೇಳೆ ಹಿರಿಯ ವಕೀಲ ಅರುಣ್‌ ಶ್ಯಾಮ್‌, ರಾಜಕೀಯ ಪ್ರೇರಿತವಾಗಿ ಅರ್ಜಿದಾರರ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರಕರಣದಲ್ಲಿ ತನಿಖೆ ನಡೆಸಿ ಎಸ್‌ಐಟಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ, ದೋಷಾರೋಪ ಪಟ್ಟಿ ಸಲ್ಲಿಸಲು ಎಸ್‌ಐಟಿಗೆ ಪೊಲೀಸ್‌ ಠಾಣೆ ಮಾನ್ಯತೆ ಇಲ್ಲವಾಗಿದೆ. ತನಿಖೆಯ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ಅಧಿಕಾರ ವ್ಯಾಪ್ತಿಯೇ ಇಲ್ಲ. ಹಾಗಾಗಿ, ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದರು.

ಎಸ್‌ಐಟಿ ಪರ ಹಿರಿಯ ವಕೀಲ ರವಿವರ್ಮ ಕುಮಾರ್, ಆರೋಪಿಯು ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಕ್ಕೆ ಸಾಕ್ಷ್ಯ ಇದೆ. ಆರೋಪಿ ತನ್ನದೇ ಮೊಬೈಲ್‌ನಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ಹಾಗೂ ಡಿಎನ್‌ಎ ಪರೀಕ್ಷೆ ವರದಿ ಆರೋಪಿಯ ಕೃತ್ಯ ದೃಢಪಟ್ಟಿದೆ. ಆದ್ದರಿಂದ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸದೆಯೇ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.