ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ನೇಮಕಾತಿ : ರಾಜ್ಯ ಸರ್ಕಾರಗಳ ಧೋರಣೆಗೆ ಹೈಕೋರ್ಟ್‌ ಚಾಟಿ

| N/A | Published : Apr 11 2025, 12:32 AM IST / Updated: Apr 11 2025, 07:36 AM IST

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ನೇಮಕಾತಿ : ರಾಜ್ಯ ಸರ್ಕಾರಗಳ ಧೋರಣೆಗೆ ಹೈಕೋರ್ಟ್‌ ಚಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯರ ನೇಮಕಾತಿಗೆ ಈವರೆಗೂ ಶೋಧನಾ ಸಮಿತಿಯನ್ನೇ ರಚಿಸದ ರಾಜ್ಯ ಸರ್ಕಾರಗಳ ಧೋರಣೆಯನ್ನು ಕಟು ಶಬ್ದಗಳಿಂದ ಖಂಡಿಸಿರುವ ಹೈಕೋರ್ಟ್‌ 

 ಬೆಂಗಳೂರು :  ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯರ ನೇಮಕಾತಿಗೆ ಈವರೆಗೂ ಶೋಧನಾ ಸಮಿತಿಯನ್ನೇ ರಚಿಸದ ರಾಜ್ಯ ಸರ್ಕಾರಗಳ ಧೋರಣೆಯನ್ನು ಕಟು ಶಬ್ದಗಳಿಂದ ಖಂಡಿಸಿರುವ ಹೈಕೋರ್ಟ್‌, ಅನರ್ಹ ವ್ಯಕ್ತಿಗಳನ್ನು ಕೆಪಿಎಸ್ಸಿ ಸದಸ್ಯರಾಗಿ ನೇಮಿಸಿದರೆ, ಅವರು ವಿವಿಧ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲು ಹೇಗೆ ಸಾಧ್ಯ ಎನ್ನುವುದು ಯಾವುದೇ ವಿವೇಚನಾಶೀಲ ವ್ಯಕ್ತಿಯನ್ನು ದಿಗ್ಭ್ರಮೆಗೊಳಿಸುತ್ತದೆ ಎಂದು ಟೀಕಿಸಿದೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಕುಡಿವ ನೀರು ಪೂರೈಕೆ ವಿಭಾಗದ ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆಸಿ ಆಯ್ಕೆಯಾದ ಕಳಂಕಿತ ಸಹಾಯಕ ಎಂಜಿನಿಯರ್‌ಗಳ ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಲು ನಿರಾಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಟಿ) ಕ್ರಮ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಹೈಕೋರ್ಟ್‌ಗೆ ಎರಡು ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗಳ ವಿಚಾರಣೆ ವೇಳೆ ಶೋಧನಾ ಸಮಿತಿ ರಚಿಸಿ, ಅದರ ನೆರವು ಪಡೆಯದೆ ಕೆಪಿಎಸ್‌ಸಿಗೆ ಸದಸ್ಯರನ್ನು ನೇಮಿಸುತ್ತಿರುವುದಕ್ಕೆ ಆಘಾತ ವ್ಯಕ್ತಪಡಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ, ತಮಗಿಂತಲೂ ಕೆಳಮಟ್ಟದವರ ಮುಂದೆ ಸಂದರ್ಶನಕ್ಕೆ ಹಾಜರಾಗುವಂತೆ ಮಾಡಿದರೆ ಉನ್ನತ ವರ್ಗ ಯಾವ ರೀತಿಯ ಅಭಿಪ್ರಾಯಕ್ಕೆ ಬರುತ್ತದೆ ಎಂಬುದನ್ನು ಹೆಚ್ಚಾಗಿ ವಿವರಿಸುವ ಅಗತ್ಯವಿಲ್ಲ ಎಂದು ನುಡಿಯಿತು.

ಈ ವೇಳೆ ಕೆಪಿಎಸ್‌ಸಿ ಸದಸ್ಯರ ಆಯ್ಕೆ ಮತ್ತು ನೇಮಕಾತಿಗೆ ನೆರವು ನೀಡಲು ಶೋಧನಾ ಸಮಿತಿಯ ರಚನೆಗೆ ತುರ್ತು ಆಧಾರದ ಮೇಲೆ ಕೆಲ ಪ್ರಕ್ರಿಯೆ ರೂಪಿಸಲಾಗುತ್ತಿದೆ. ಆ ಕುರಿತ ಬೆಳವಣಿಗೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ನೀಡಿರುವ ಭರವಸೆಗೆ ನ್ಯಾಯಪೀಠ ಕೊಂಚಮಟ್ಟಿಗೆ ತೃಪ್ತಿ ವ್ಯಕ್ತಪಡಿಸಿತು. ಶೋಧನಾ ಸಮಿತಿ ರಚನೆ ಕಾರ್ಯ ಯುದ್ಧೋಪಾದಿಯಲ್ಲಿ ಮಾಡಬೇಕಿದೆ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಎಸ್‌ಐಟಿಗೆ ನಿಯೋಜಿಸುವ ಅಧಿಕಾರಿಗಳನ್ನು ತಿಳಿಸಿ:

ಇದಕ್ಕೂ ಮುನ್ನ ಎಂಜಿನಿಯರ್‌ಗಳ ನೇಮಕಾತಿ ಅಕ್ರಮವನ್ನು ಸಿಬಿಐಗೆ ವಹಿಸಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಅಡ್ವೋಕೇಟ್‌ ಜನರಲ್‌, ಪ್ರಕರಣ ತನಿಖೆಗೆ ಅರ್ಹವಾಗಿದೆ. ಆದರೆ, ಪ್ರಕರಣದಲ್ಲಿ ಸಿಬಿಐ ತನಿಖೆಗೆ ವಹಿಸಲು ಅಂತಹ ವಿಶೇಷವೇನಿಲ್ಲ. ತನಿಖೆಗೆ ರಾಜ್ಯದ ಸಿಐಡಿ/ಸಿಒಡಿ ಸಮರ್ಥವಾಗಿದೆ. ಆದರೂ ವಿಶೇಷ ತನಿಖಾ ತಂಡವನ್ನು ರಚಿಸಿದರೆ, ನ್ಯಾಯಾಲಯದ ಆಯ್ಕೆಯಂತೆ ಅಧಿಕಾರಿಗಳು/ಸಿಬ್ಬಂದಿಯನ್ನು ಎಸ್‌ಐಟಿ ಸದಸ್ಯರಾಗಿ ಒದಗಿಸುವುದಾಗಿ ಭರವಸೆ ನೀಡಿದರು.

ಅದಕ್ಕೆ ನ್ಯಾಯಪೀಠ, ಎಸ್‌ಐಟಿ ರಚಿಸಿದರೆ ತನಿಖಾ ಸಂಸ್ಥೆಗಳ ಯಾವ ಅಧಿಕಾರಿಗಳನ್ನು ಒದಗಿಸಲಾಗುತ್ತದೆ ಎಂದು ಕೇಳಿದಾಗ ಅಡ್ವೋಕೇಟ್‌ ಜನರಲ್‌, ಈ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸಿದ ನಂತರ ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ವಾಗ್ದಾನ ನೀಡಿದರು.

ಅಧಿಕಾರಿಯ ಬಂಧನ ಆದೇಶ ಗ್ಯಾರಂಟಿ:

ನ್ಯಾಯಾಲಯದ ನಿರ್ದೇಶನವಿದ್ದರೂ ಪ್ರಕರಣದಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಅನುಮೋದಿಸಿ ಕೆಪಿಎಸ್‌ಸಿಯ ಕೆಲ ಸದಸ್ಯರು ನಡೆಸಿದ ಸಭೆ, ಆ ಸಭೆಯ ಮೂಲ ಅಜೆಂಡಾದ (ಕಾರ್ಯಸೂಚಿ) ದಾಖಲೆಗಳನ್ನು ಒದಗಿಸಲು ಕೆಪಿಎಸ್‌ಸಿ ವಿಫಲವಾಗಿದೆ. ಮುಂದಿನ ವಿಚಾರಣೆಯಲ್ಲಿ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸದೇ ಹೋದರೆ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಬಂಧನದ ಆದೇಶ ಹೊರಡಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ ನ್ಯಾಯಪೀಠ ಅರ್ಜಿಗಳ ವಿಚಾರಣೆಯನ್ನು ಏ.24ಕ್ಕೆ ಮುಂದೂಡಿತು.

ಕೆಪಿಎಸ್‌ಸಿ ಖ್ಯಾತಿ ಕುಸಿದಿದೆ:

ನೇಮಕಾತಿ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ವಿಶೇಷವಾಗಿ ಸರ್ಕಾರದ ಸಚಿವಾಲಯ ಮಟ್ಟದಲ್ಲಿ ನಡೆದಿರುವ ಹಲವು ಲೋಪಗಳ ಕಾರಣದಿಂದ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ನ್ಯಾಯಾಲಯ ಎಚ್ಚರಿಕೆಯಿಂದ ನಡೆಸಬೇಕಿದೆ. ಅಮಾಯಕ ಅಭ್ಯರ್ಥಿಗಳು ಮತ್ತು ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಯಾವುದೇ ತಪ್ಪಿತಸ್ಥ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಹಾನಿಗೊಳಗಾಗುವುದಿಲ್ಲ ಎಂದ ಬೇಸರ ವ್ಯಕ್ತಪಡಿಸಿದ ಪೀಠ, ಕೆಪಿಎಸ್‌ಸಿ ಅಂತಹ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸಾರ್ವಜನಿಕ ನಂಬಿಕೆ ಕುಸಿದಿದೆ. ಕಳೆದ ಎರಡು ದಶಕಗಳಲ್ಲಿ ನಡೆದ ನೇಮಕಾತಿಯಲ್ಲಿ ಕೆಪಿಎಸ್‌ಸಿಗೆ ಅಪಖ್ಯಾತಿ ಗಳಿಸಿದ್ದು, ಅದರ ಘನತೆ ಕೆಳಮಟ್ಟಕ್ಕೆ ಇಳಿದಿದೆ. ನೇಮಕಾತಿ ಕುರಿತಂತೆ ಸಿಐಡಿ/ಸಿಒಡಿ ತನಿಖೆ, ಹಲವು ಸಮಿತಿಗಳ ವಿಚಾರಣೆ ಹಾಗೂ ಕ್ರಿಮಿನಲ್ ವಿಚಾರಣೆ ನಡೆಯುತ್ತಿವೆ ಎಂದು ಚಾಟಿ ಬೀಸಿದೆ.