ಜಗತ್ತಿನ ಶಾಂತಿಗೆ ಮಹಾವೀರರ ಬೋಧನೆ ಅತ್ಯವಶ್ಯಕ: ಸಿ.ಟಿ.ರವಿ

| Published : Apr 11 2025, 12:32 AM IST

ಸಾರಾಂಶ

ಚಿಕ್ಕಮಗಳೂರು, ಜಗತ್ತಿಗೆ ಮಹಾವೀರರ ಬೋಧನೆಗಳು ಅಗತ್ಯವಾಗಿದ್ದು, ಅದರ ಪಾಲನೆಯಿಂದ ಮಾತ್ರ ಯುದ್ಧದಿಂದ ಮುಕ್ತವಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಗತ್ತಿಗೆ ಮಹಾವೀರರ ಬೋಧನೆಗಳು ಅಗತ್ಯವಾಗಿದ್ದು, ಅದರ ಪಾಲನೆಯಿಂದ ಮಾತ್ರ ಯುದ್ಧದಿಂದ ಮುಕ್ತವಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಹೇಳಿದರು.ಜಿಲ್ಲಾಡಳಿತದಿಂದ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತಿಗೆ ಜ್ಞಾನದ ಬೆಳಕು, ಸದ್ವಿಚಾರಗಳನ್ನು ಬೋಧಿಸಲೆಂದೇ ಮಹಾವೀರರ ಜನನವಾಗಿದ್ದು, ಅಹಿಂಸೆ ಧರ್ಮದ ಮೂಲ ತಿರುಳು ಎಂದು ಅವರು ಬೋಧಿಸಿದರು.

ಕೈವಲ್ಯ ಜ್ಞಾನ ಗಳಿಸಿಕೊಂಡು ಅದನ್ನು ಸಮಾಜಕ್ಕೆ ಬೋಧಿಸಿ, ಸಮಾಜದಲ್ಲಿನ ಪ್ರತಿಯೊಂದು ಜೀವಿಯನ್ನೂ ಪ್ರೀತಿಸಬೇಕು ಎಂಬ ಸಂದೇಶ ಸಾರಿದ ಮಹಾವೀರರು ಅಹಿಂಸೆ ಬೋಧಿಸಿದರು ಎಂದು ಹೇಳಿದರು.ಜಿನನಾಗುವುದು ಸಾಮಾನ್ಯ ಸಂಗತಿಯಲ್ಲ. ನೂರಾರು ಕೋಟಿಯಲ್ಲಿ ಒಬ್ಬರು ಜಿನರಾಗಲು ಸಾಧ್ಯ ಅಂತಹ ಮಹಾನ್ ತೀರ್ಥಂಕರ ಮಹಾವೀರರು ಎಂದರು.ಜಗತ್ತಿಗೆ ಭಾರತ ಕೊಟ್ಟಿರುವಷ್ಟು ಕೊಡುಗೆಯನ್ನು ಬೇರೆ ಯಾವ ದೇಶವೂ ನೀಡಿಲ್ಲ. ಅದಕ್ಕಾಗಿ ಭಾರತವನ್ನು ಕರ್ಮಭೂಮಿ, ಜ್ಞಾನಭೂಮಿ, ಧರ್ಮಭೂಮಿ ಎಂದು ಕರೆಯಲಾಗುತ್ತದೆ. 24ನೇ ತೀರ್ಥಂಕರ ಮಹಾವೀರರು ಜನಿಸಿದ ಪುಣ್ಯಭೂಮಿ ಭಾರತ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ (ಗ್ರೇಡ್-2) ರಾಮ್ ರಾವ್ ದೇಸಾಯಿ ಮಾತನಾಡಿ, ಅಹಿಂಸೆ, ಸತ್ಯ, ಧರ್ಮ, ಅಪರಿಗ್ರಹ ಮುಂತಾದ ಮಹಾವೀರರ ಬೋಧನೆಗಳೂ ಇಂದಿಗೂ ಪ್ರಸ್ತುತ. ಮಾನವರು ದುಃಖ, ಹಿಂಸೆಗೆ ಉತ್ತರ ಹುಡುಕಬೇಕಾದರೆ ಏನು ಮಾಡಬೇಕು ಎನ್ನುವ ಸಂದೇಶ ಸಾರಿದರು ಎಂದರು.ಚಾರಿತ್ರ ಜೀನೇಂದ್ರ ಬಾಬು ಉಪನ್ಯಾಸ ನೀಡಿ, ಮಹಾವೀರನ ಮೂಲ ಹೆಸರು ವರ್ಧಮಾನ. ಅವರು ಪ್ರಾಚೀನ ನಗರ ವಾದ ವೈಶಾಲಿ ಬಳಿಯ ಕುಂದಗ್ರಾಮ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಸಿದ್ಧಾರ್ಥ ಜ್ಞಾತ್ರಿಕರು ಎಂದು ಪ್ರಸಿದ್ಧ ರಾದ ಕ್ಷತ್ರಿಯ ಕುಲದ ಮುಖ್ಯಸ್ಥರಾಗಿದ್ದರು ಎಂದು ಹೇಳಿದರು.

ಮಹಾವೀರನ ತೀವ್ರ ತಪಸ್ಸಿನ ಜೀವನ ಮತ್ತು ಅಲೆಮಾರಿ ಸನ್ಯಾಸಿಯಾಗಿ ಬೆಳೆದರು. ಸತ್ಯದ ಹುಡುಕಾಟದಲ್ಲಿ ಅವರು 12 ವರ್ಷಗಳ ಕಾಲ ಹೋರಾಡಿದರು. ಸ್ಥಳದಿಂದ ಸ್ಥಳಕ್ಕೆ ಚಲಿಸುವಾಗ ಅವರು ತಮ್ಮ ದೇಹವನ್ನು ಎಲ್ಲಾ ರೀತಿಯ ನೋವು ಗಳಿಗೆ ಒಳಪಡಿಸಿಕೊಂಡರು. ಜೈನ ಪಠ್ಯದಲ್ಲಿನ ವಿವರಣೆ ಪ್ರಕಾರ ಅವರು ಬೆತ್ತಲೆಯಾಗಿ ಮತ್ತು ನಿರಾಶ್ರಿತನಾಗಿ ಅಲೆದಾಡಿದರು. ಜನರು ಅವರನ್ನು ಹೊಡೆದು ಅಪಹಾಸ್ಯ ಮಾಡಿದರು. ಚಿಂತಿಸದೆ, ಅವನು ತನ್ನ ಧ್ಯಾನದಲ್ಲಿ ಮುಂದುವರಿ ಸಿದರು. ತನ್ನ ತಪಸ್ಸಿನ 13ನೇ ವರ್ಷದಲ್ಲಿ ಅವರಿಗೆ ಜ್ಞಾನೋದಯ ಅಥವಾ ಪರಮ ಜ್ಞಾನ ಅಥವಾ ಕೇವಲ ಜ್ಞಾನ ದೊರೆಯಿತು. ಅದರೊಂದಿಗೆ ಅವರು ಜೈನ ಅಥವಾ ವಿಜಯಶಾಲಿ, ಮಹಾವೀರ ಅಥವಾ ಮಹಾನ್ ವೀರ ಮತ್ತು ಕೇವಲಿನ್ ಅಥವಾ ಸರ್ವಜ್ಞನಾದರು. ಪರಮ ಜ್ಞಾನ ಪಡೆದ ನಂತರ ಮಹಾವೀರ ಮೂವತ್ತು ವರ್ಷಗಳ ಕಾಲ ಬೋಧಿಸಿದರು. ಅವನು ದೂರ ದೂರ ಪ್ರಯಾಣಿಸಿ ಮಿಥಿಲಾ, ಶ್ರಾವಸ್ತಿ, ಚಂಪಾ, ವೈಶಾಲಿ ಮತ್ತು ರಾಜಗೃಹದಂತಹ ಸ್ಥಳಗಳಿಗೆ ಭೇಟಿ ನೀಡಿದರು ಎಂದು ಹೇಳಿದರು.ಜೈನ ಧರ್ಮದಲ್ಲಿ, ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತದಲ್ಲಿ ನಂಬಿಕೆ ಸಂಪೂರ್ಣವಾಗಿತ್ತು. ಮನುಷ್ಯ ಬದುಕಲು ಕೆಲಸ ಮಾಡಬೇಕು. ಆದ್ದರಿಂದ ಅವನ ಆತ್ಮ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮಹಾವೀರರು ಕರ್ಮದ ಮೇಲೆ ಗರಿಷ್ಠ ಒತ್ತು ನೀಡಿದರು. ಅವರು ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳನ್ನು ಜೀವಂತ ಮತ್ತು ನಿರ್ಜೀವ ಎಂದು 2 ವರ್ಗಗಳಾಗಿ ವಿಂಗಡಿಸಿದನು. ಎಲ್ಲಾ ಜೀವಿಗಳನ್ನು ಜೀವಗಳು ಎಂದು ವಿವರಿಸಲಾಗಿದ ಎಂದರು.

ಅಹಿಂಸೆ ಅಥವಾ ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಜೈನ ಧರ್ಮದಲ್ಲಿ ಅತ್ಯುನ್ನತ ಸ್ಥಾನ ಪಡೆಯಿತು. ಪ್ರತಿಯೊಂದು ಜೀವಿಯ ಜೀವನವನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು. ಸಣ್ಣ ಜೀವಿಗಳಲ್ಲಿ ಚಿಕ್ಕವು ಸಹ ಮನುಷ್ಯರಂತೆ ಜೀವ ಹೊಂದಿರುವುದರಿಂದ ಮನುಷ್ಯನು ಇತರ ಜೀವಿಗಳ ಜೀವನ ನಾಶಮಾಡುವುದು ಪರಮ ಪಾಪವಾಗಿತ್ತು, ಜೈನ ಧರ್ಮದ ಪ್ರಕಾರ, ಪ್ರತಿಯೊಂದು ಜೀವಿಯ ಜೀವವನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಮನುಷ್ಯನ ಕರ್ತವ್ಯವಾಗಿತ್ತು. ಜೈನ ಧರ್ಮ ಜೀವಿಗಳಿಗೆ ನೀಡಿದಷ್ಟು ಗೌರವ ಬೇರೆ ಯಾವುದೇ ಧರ್ಮ ನೀಡಿಲ್ಲ. ಎಲ್ಲಾ ರೀತಿ ಜೀವಗಳ ಬಗ್ಗೆ ದಯೆ ಜೈನ ಧರ್ಮದ ಪ್ರಮುಖ ಲಕ್ಷಣವಾಗಿತ್ತು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜೈನ್ ಸಂಘದ ಕಾರ್ಯದರ್ಶಿ ರಮೇಶ್ ಜೈನ್ , ದಿಗಂಬರ ಸಂಘದ ಅಧ್ಯಕ್ಷ ಶ್ರೀ ಜಿನೇಂದ್ರ ಬಾಬು, ತೇರಾಪಂಥ ಸಂಘದ ಅಧ್ಯಕ್ಷ ಶ್ರೀ ಮಹೇಂದ್ರ ಡೋಸಿ, ನಗರಸಭಾ ಸದಸ್ಯ ವಿಫುಲ್‌ ಜೈನ್ ಹಾಗೂ ಜೈನ ಸಂಘದ ಮುಖಂಡರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್‌ ಸ್ವಾಗತಿಸಿದರು. 10 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಗುರುವಾರ ನಡೆದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮವನ್ನು ವಿಧಾನಪರಿಷತ್‌ ಶಾಸಕ ಸಿ.ಟಿ. ರವಿ ಉದ್ಘಾಟಿಸಿದರು.