ಸಾರಾಂಶ
ಮಹಾವೀರರ ಭಾವಚಿತ್ರ ಮೆರವಣಿಗೆ
ಕನ್ನಡಪ್ರಭ ವಾರ್ತೆ ಹೊನ್ನಾಳಿಭಾರತೀಯ ಸಂಸ್ಕೃತಿಯಲ್ಲೇ ಜೈನ ಧರ್ಮ ಸಮ್ಮಿಳಿತಗೊಂಡಿದ್ದು, ಜೈನ ಧರ್ಮದ ತತ್ವ,ಸಿದ್ದಾಂತಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ಹೇಳಿದರು.
ತಾಲೂಕು ಅಡಳಿತ ಮತ್ತು ತಾಲೂಕು ಜೈನ್ ಸಮುದಾಯದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಮಹಾವೀರರ 2624ನೇ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.ಜೈನ ಧರ್ಮದಲ್ಲಿ ಅನೇಕ ತೀರ್ಥಂಕರರು ಬಂದು ಹೋಗಿದ್ದು, ಇವರಲ್ಲಿ ಭಗವಾನ್ ಮಹಾವೀರರು 24ನೇ ತೀರ್ಥಂಕರರಾಗಿ ಮನುಕುಲಕ್ಕೆ ಅಹಿಂಸೆ, ಶಾಂತಿ, ಜೀವನ ಮಾರ್ಗವನ್ನು ತೋರಿಸಿಕೊಟ್ಟವರಾಗಿದ್ದಾರೆ ಎಂದು ಹೇಳಿದರು.
ಭೂಮಿಗೆ ತಾಯಂದಿರಂತೆ ಜೈನ ಮತ್ತು ಬೌದ್ದ ಧರ್ಮಗಳು ಇವೆ. ಜಾತಿಗಳು ಸಾವಿರ ಇರಲಿ ಆದರೆ ನೀತಿ ಒಂದೇ ಆಗಿರಬೇಕು. ಇದರಂತೆ ವಿಶೇಷವಾಗಿ ಜೈನ ತೀರ್ಥಂಕರರಾದ ಭಗವಾನ್ ಮಹಾವೀರರು ಸಾರ್ವಕಾಲಿಕವಾಗಿ ಮನುಷ್ಯ ಧರ್ಮದ ಪಾಠಗಳನ್ನು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು.ಉಪನ್ಯಾಸಕ ಅನಂತ್ ನಾಗ್ ಭಗವಾನ್ ಮಹಾವೀರರ ಕುರಿತು ಉಪನ್ಯಾಸ ನೀಡಿ, ಭಗವಾನ್ ಮಹಾವೀರರು ಕ್ರಿ.ಪೂ. 599ರಲ್ಲಿ ಜನಿಸಿದರು. ಜೈನ ಧರ್ಮ ಜಗತ್ತಿಗೆ ಅಹಿಂಸೆಯನ್ನು ಬೋಧಿಸಿದರೆ, ಬೌದ್ಧ ಧರ್ಮ ಶಾಂತಿಯನ್ನು ಪ್ರತಿಪಾದಿಸಿತು ಎಂದು ಹೇಳಿದರು.
ಭಗವಾನ್ ಮಹಾವೀರರು ಮನುಷ್ಯ ಏನನ್ನು ಪಡೆಯಬೇಕು ಎಂಬುದರ ಬಗ್ಗೆ ಹೇಳದೇ ಏನನ್ನು ಬಿಡಬೇಕು ಎಂದು ತಿಳಿಸಿದರು ಎಂದು ಹೇಳಿದರು.ಜೈನರು ಅಲ್ಪಸಂಖ್ಯಾತರಾಗಿದ್ದು, 2011ರ ಜನಗಣತಿ ಅನುಸಾರ ತಾಲೂಕಿನಲ್ಲಿ ಕೇವಲ 150 ಕುಟುಂಬಗಳಿವೆ ಇವರು ಅಲ್ಪಸಂಖ್ಯಾತರಾಗಿದ್ದರೂ ಕೂಡ ಇವರಿಗೆ ಸರ್ಕಾರ ಹಿಂದುಳಿದ 3ಬಿ ಜಾತಿ ಪ್ರಮಾಣಪತ್ರ ನೀಡುತ್ತಿರುವುದರಿಂದ ಹೆಚ್ಚಿನ ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳು ತಪ್ಪುತ್ತಿವೆ. ಸಾಂಘಿಕ ಹೋರಾಟಗಳ ಮೂಲಕ ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೇಳಿದರು. ಇದಕ್ಕೆ ಜೈನ ಸಮುದಾಯದ ಎಲ್ಲಾ ಮುಖಂಡರು ಧ್ವನಿಗೊಡಿಸಿದರು.
ಜೈನ ಸಮುದಾಯ ಮುಖಂಡ ಶ್ರೇಯಾಂಶ್ ಕುಮಾರ್, ಜೈನರಿಗಾಗಿ ಸಮುದಾಯ ಭವನ ನಿರ್ಮಿಸಿಕೊಳ್ಳಲು ಕಂದಾಯ ಇಲಾಖೆ ವತಿಯಿಂದ ನಿವೇಶನ ಮಂಜೂರು ಮಾಡಬೇಕೆಂದು ಮನವಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಪಟ್ಟರಾಜ ಗೌಡ, ಲಿಖಿತವಾಗಿ ಮನವಿ ಕೊಡಿ ನಂತರ ಪರಿಶೀಲನೆ ಮಾಡೋಣವೆಂದು ಹೇಳಿದರು.ಇದಕ್ಕೂ ಮುನ್ನ ಜೈನ ಸಮುದಾಯದ ಪುರುಷರು, ಮಹಿಳೆಯವರು ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿದರು.ನಿಹಾರಿಕ ಜೈನ್, ಮತ್ತು ಸ್ವಾಸ್ತಿಕ್ ಜೈನ್ ಮಾತನಾಡಿದರು.
ಬಾಹುಬಲಿ, ಜೀನದತ್ತ, ವಿದ್ಯಾನಂದ, ಶಾಂತಕುಮಾರ್, ಪ್ರಭಾಕರ, ಗೀತಾ, ಉಪ ತಹಸೀಲ್ದಾರ್ ಸುರೇಶ್, ರವಿ, ಆಶೋಕ್, ರಮೇಶ್ ಸೇರಿ ಇತರರು ಇದ್ದರು.