ಸಾರಾಂಶ
ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಐವರನ್ನು ಸಿಸಿಬಿ ಹಾಗೂ ಶೇಷಾದ್ರಿಪುರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಐವರನ್ನು ಸಿಸಿಬಿ ಹಾಗೂ ಶೇಷಾದ್ರಿಪುರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.ನೈಜೀರಿಯಾದ ಸಂಡೆ ಜುಕ್ವಾಡಿ, ದಕ್ಷಿಣ ಆಫ್ರಿಕಾದ ಕಿಂಗ್ಸ್ ಲೇ ನಾನಾ, ಕೇರಳದ ಅರ್ಜುನ್, ಅಂಜಿನ್, ಆಕಾಶ್, ಒಡಿಶಾದ ಹಿಮಾನ್ಷು ಮತ್ತು ಶಿವಾಜಿನಗರದ ರೌಡಿ ನಾಸಿರ್ ಬಂಧಿತರಾಗಿದ್ದು, ಆರೋಪಿಗಳಿಂದ ₹26 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಈ ಐವರು ಪ್ರತ್ಯೇಕವಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ವ್ಯಾಪಾರ ವೀಸಾದಡಿ ಭಾರತಕ್ಕೆ ಬಂದಿದ್ದ ಸಂಡೆ ಹಾಗೂ ನಾನಾ, ನಂತರ ನಗರಕ್ಕೆ ಬಂದು ನೆಲೆಸಿದ್ದರು. ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದ ಇವರು ದೆಹಲಿ, ಗೋವಾ ಹಾಗೂ ಮುಂಬೈನಲ್ಲಿರುವ ಡ್ರಗ್ಸ್ ಜಾಲದಿಂದ ಎಡಿಎಂಎ ಖರೀದಿಸಿ ನಗರಕ್ಕೆ ತರುತ್ತಿದ್ದರು. ಬಳಿಕ ನಗರದಲ್ಲಿ ತಮ್ಮ ಪರಿಚಯಸ್ಥ ಗಿರಾಕಿಗಳಿಗೆ ದುಬಾರಿ ಬೆಲೆಗೆ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಸಮೀಪ ಸಂಡೆ ಹಾಗೂ ನಾನಾನನ್ನು ಬಂಧಿಸಿ ₹21 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಇನ್ಸ್‌ಪೆಕ್ಟರ್ ಭರತಗೌಡ ತಂಡ ಜಪ್ತಿ ಮಾಡಿದೆ.ಉಬರ್ ಚಾಲಕ ಡ್ರಗ್ಸ್ ಪೆಡ್ಲರ್
ಹೊರ ರಾಜ್ಯಗಳಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಉಬರ್ ಚಾಲಕ ಆಕಾಶ್ ಸೇರಿದಂತೆ ಮೂವರು ಕೇರಳ ರಾಜ್ಯದ ಪೆಡ್ಲರ್‌ಗಳನ್ನು ಸಿಸಿಬಿ ಸೆರೆ ಹಿಡಿದಿದೆ. ಕೆಂಗೇರಿ ಸಮೀಪ ಅರ್ಜುನ್ ಹಾಗೂ ಅಂಜಿನ್‌ನನ್ನು ಬಂಧಿಸಿ ಅವರಿಂದ ₹3 ಲಕ್ಷ ಮೌಲ್ಯದ 2.75 ಕೇಜಿ ಗಾಂಜಾ ಜಪ್ತಿ ಮಾಡಿದ ಸಿಸಿಬಿ ಇನ್‌ಸ್ಪೆಕ್ಟರ್ ಮೊಹಮ್ಮದ್ ಮುಕ್ರಂ ನೇತೃತ್ವದ ತಂಡವು, ವರ್ತೂರು ಸಮೀಪ ಉಬರ್ ಚಾಲಕ ಆಕಾಶ್‌ನನ್ನು ಬಂಧಿಸಿ ₹2 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದೆ.ರೌಡಿ ಸೇರಿ ಇಬ್ಬರ ಸೆರೆಇನ್ನು ಒಡಿಶಾದ ಹಿಮಾನ್ಷು ಹಾಗೂ ಶಿವಾಜಿನಗರದ ರೌಡಿ ನಾಸಿರ್‌ನನ್ನು ಸೆರೆ ಹಿಡಿದ ಶೇಷಾದ್ರಿಪುರ ಠಾಣೆ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ನೇತೃತ್ವದ ತಂಡ, ಆರೋಪಿಗಳಿಂದ ₹1.75 ಲಕ್ಷ ಮೌಲ್ಯದ 8 ಕೇಜಿ ಗಾಂಜಾ ಜಪ್ತಿ ಮಾಡಿದೆ. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಇಬ್ಬರು ಮಾರುತ್ತಿದ್ದರು.