ಸಾರಾಂಶ
ಇಡೀ ಕುಟುಂಬದ ಸದಸ್ಯರನ್ನು ನಾಶಪಡಿಸುವ ಉದ್ದೇಶದಿಂದ ಗುಡಿಸಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಸಜೀವ ದಹನವಾಗಿ, ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಇಡೀ ಕುಟುಂಬದ ಸದಸ್ಯರನ್ನು ನಾಶಪಡಿಸುವ ಉದ್ದೇಶದಿಂದ ಗುಡಿಸಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಸಜೀವ ದಹನವಾಗಿ, ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿ ನಡೆದಿದೆ.ಬೆಳಗಲಿ ಸರಹದ್ದಿನ ಪೆಂಡಾರಿ ಮುಲ್ಲಾ ತೋಟದ ದಸ್ತಗಿರಸಾಬ.ಮೌ.ಪೆಂಡಾರಿ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ತಾಯಿ ಜೈಬುನ್ ದಸ್ತಗೀರಸಾಬ ಪೆಂಡಾರಿ (55), ಪುತ್ರಿ ಶಬಾನಾ ದಸ್ತಗೀರಸಾಬ ಪೆಂಡಾರಿ (26) ಸುಟ್ಟು ಸಜೀವ ದಹನವಾಗಿದ್ದಾರೆ. ಮಾಲೀಕ ದಸ್ತಗಿರಸಾಬ.ಮೌ.ಪೆಂಡಾರಿ, ಸುಭಾನ.ದ.ಪೆಂಡಾರಿಗೆ ಸುಟ್ಟಗಾಯಗಳಾಗಿದ್ದು, ಮೊಮ್ಮಗ ಸಿದ್ದಿಕ ಶೌಕತ್ ಪೆಂಡಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಿಂಟೆಕ್ಸ್‌ನಲ್ಲಿ ಪೆಟ್ರೋಲ್ ತಂದಿದ್ದ ಹಂತಕರು: ದುಷ್ಕರ್ಮಿಗಳು ದಸ್ತಗೀರಸಾಬ ಪೆಂಡಾರಿ ಕುಟುಂಬವನ್ನು ನಾಶಪಡಿಸಬೇಕು ಎಂಬ ದುರುದ್ದೇಶದಿಂದ ನೀರು ಸಂಗ್ರಹಿಸುವ ಸಿಂಟೆಕ್ಸ್‌ನಲ್ಲಿ ಪೆಟ್ರೋಲ್ ತಂದು 1ಎಚ್‌ಪಿ ಮೋಟಾರ್ ಪಂಪ್ ಬಳಸಿ ಇಡೀ ತಗಡಿನ ಶೆಡ್‌ಗೆ ಪೆಟ್ರೋಲ್ ಸಿಂಪಡಣೆ ಮಾಡಿದ್ದಾರೆ. ಪೆಟ್ರೋಲ್ ವಾಸನೆ ಬರುತ್ತಿದ್ದಂತೆ ದಸ್ತಗೀರಸಾಬ, ಆತನ ಪುತ್ರ ಮತ್ತು ಮೊಮ್ಮಗ ಮೂವರು ಹೊರಗೆ ಓಡಿ ಬಂದಿದ್ದಾರೆ. ಇದೆ ವೇಳೆ ದುಷ್ಕರ್ಮಿಗಳು ಅವರಿಗೂ ಪೆಟ್ರೋಲ್ ಸಿಂಪಡಣೆ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ತಮಗೆ ಹೊತ್ತಿದ್ದ ಬೆಂಕಿ ನಂದಿಸಿಕೊಂಡು ಮನೆಗೆ ಹೊತ್ತಿದ್ದ ಬೆಂಕಿ ನಂದಿಸಲು ದಸ್ತಗೀರಸಾಬ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ದಸ್ತಗೀರಸಾಬ ಅವರ ಪತ್ನಿ ಮತ್ತು ಪುತ್ರಿ ಇಬ್ಬರೂ ಮನೆಯೊಳಗೆ ಸಜೀವ ದಹನವಾಗಿದ್ದಾರೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮೃತ ಮಗಳಾದ ಶಬಾನಾ ಅವರು ಇತ್ತೀಚೆಗೆ ಪಿಎಸ್ಐ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ. ಮಗ ಸುಬಾನ ಪದವಿ ಶಿಕ್ಷಣದೊಂದಿಗೆ ಗ್ಯಾಂಗ್ ಮನ್ ಆಗಿದ್ದ. ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಸುಬಾನನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳದಲ್ಲಿ ಎಲ್ಲ ಕುರುಹುಗಳು ದೊರೆತಿರುವುದರಿಂದ, ದಸ್ತಗೀರಸಾಬ ಪೆಂಡಾರಿ ಅವರ ಸಂಪೂರ್ಣ ಪರಿವಾರವನ್ನೇ ಮುಗಿಸುವ ಉದ್ದೇಶ ದುಷ್ಕರ್ಮಿಗಳು ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳದಲ್ಲಿ ಶ್ವಾನ ದಳ, ಬೆಳಗಾವಿ ಜಿಲ್ಲಾ ವಿಧಿ ವಿಜ್ಞಾನ ತಂಡ ಸಾಕ್ಷ್ಯಗಳನ್ನು ಕಲೆ ಹಾಕಿದೆ.