ಸಾರಾಂಶ
ಬೆಂಗಳೂರು : ಗೋವಾ ಪ್ರವಾಸಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ನೈಸ್ ರಸ್ತೆಯಲ್ಲಿ ಭೀಕರವಾಗಿ ಕಾರು ಅಪಘಾತಕ್ಕೀಡಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯ ಸೇರಿ ಮೂವರು ಸೋಮವಾರ ಸಾವನ್ನಪ್ಪಿದ್ದಾರೆ.
ಕನಕಪುರ ತಾಲೂಕಿನ ಹನುಮನಹಳ್ಳಿ ಗ್ರಾಮದ ಶಿವನಹಳ್ಳಿ ಗ್ರಾಪಂ ಸದಸ್ಯ ವಿನೋದ್(36), ಕಾಳೇಗೌಡನದೊಡ್ಡಿಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನಂಜೇಗೌಡ(41), ಚೀಲೂರು ಗ್ರಾಮದ ಕುಮಾರ್(28) ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಮತ್ತೊಂದು ಕಾರಿನಲ್ಲಿದ್ದ ಶಿವರಾಮಕೃಷ್ಣ ಹಾಗೂ ಪ್ರಸನ್ನ ಗಾಯಗೊಂಡಿದ್ದು, ಗಾಯಾಳು ಪ್ರಾಣಪಾಯದಿಂದ ಪಾರಾಗಿದ್ದಾರೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ವಿನೋದ್ ಹಾಗೂ ಆತನ ಸ್ನೇಹಿತರು ತೆರಳುತ್ತಿದ್ದರು. ಆಗ ನೈಸ್ ರಸ್ತೆಯ ಸೋಂಪುರ ಸರ್ಕಲ್ ಬಳಿ ಕಾರಿನ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡ ವಿನೋದ್, ರಸ್ತೆ ವಿಭಜಕ್ಕೆ ಗುದ್ದಿ ಅಲ್ಲಿಂದ ಹಾರಿ ಮತ್ತೊಂದು ಬದಿಗೆ ನುಗ್ಗಿದ್ದಾರೆ. ಆಗ ಎದುರಿಗೆ ಬಂದ ಕಾರಿಗೆ ತಮ್ಮ ಕಾರನ್ನು ವಿನೋದ್ ಗುದ್ದಿದ್ದಾನೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತಿವೇಗದ ಚಾಲನೆ ತಂದ ಆಪತ್ತು:
ಗ್ರಾಪಂ ಸದಸ್ಯ ವಿನೋದ್, ಕುಮಾರ್ ಹಾಗೂ ನಂಜೇಗೌಡ ಆತ್ಮೀಯ ಸ್ನೇಹಿತರಾಗಿದ್ದು, ಈ ಗೆಳೆತನದಲ್ಲೇ ಗೋವಾ ಪ್ರವಾಸಕ್ಕೆ ಅವರು ತೆರಳುತ್ತಿದ್ದರು. ಕೆಐಎ ಮೂಲಕ ವಿಮಾನದಲ್ಲಿ ಗೋವಾಕ್ಕೆ ಹೋಗಲು ಈ ಮೂವರು ಟಿಕೆಟ್ ಬುಕ್ ಮಾಡಿದ್ದರು. ಆಗ ತಮ್ಮ ಸ್ನೇಹಿತ ರಾಜನ ಸ್ಕಾರ್ಪಿಯೋ ಪಡೆದು ಅದರಲ್ಲಿ ಕೆಐಎಗೆ ವಿನೋದ್ ಗೆಳೆಯರು ತೆರಳುತ್ತಿದ್ದರು.
ಕನಕಪುರ ಕಡೆಯಿಂದ ಬಂದು ಸೋಂಪುರ ಸರ್ಕಲ್‌ನಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ನೈಸ್ ರಸ್ತೆಗೆ ಸೇರಿದ ಅವರು, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೊರಟ್ಟಿದ್ದರು. ಆ ವೇಳೆ ಅತಿವೇಗದಿಂದ ಕಾರು ಓಡಿಸುತ್ತಿದ್ದ ವಿನೋದ್, ನೈಸ್ ರಸ್ತೆಯಲ್ಲಿ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಕಾರು ರಸ್ತೆ ವಿಭಜಕ್ಕೆ ಗುದ್ದಿ ಮತ್ತೊಂದು ಬದಿಗೆ ದಿಢೀರನೇ ನುಗ್ಗಿದೆ. ಅದೇ ಸಮಯಕ್ಕೆ ಮೈಸೂರು ರಸ್ತೆ ಹೊರಟ್ಟಿದ್ದ ಮತ್ತೊಂದು ಕಾರಿಗೆ ವಿನೋದ್ ಸ್ಕಾರ್ಪಿಯೋ ಅಪ್ಪಳಿಸಿ ರಸ್ತೆಗೆ ಉರುಳಿದೆ. ಈ ಗುದ್ದಿದ ರಭಸಕ್ಕೆ ಸ್ಕಾರ್ಪಿಯೋದಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನಾ ಸ್ಥಳಕ್ಕೆ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಹಾಗೂ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಅನಿತಾ ಹದ್ದಣ್ಣನವರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸೀಟ್ ಬೆಲ್ಟ್ ಧರಿಸದ್ದರಿಂದ ತೆರೆದುಕೊಳ್ಳದ ಏರ್‌ಬ್ಯಾಗ್
ನೈಸ್ ರಸ್ತೆಯಲ್ಲಿನ ಅಪಘಾತಕ್ಕೆ ಸ್ಕಾರ್ಪಿಯೋ ಚಾಲಕನ ಅತಿ ವೇಗದ ಚಾಲನೆಯೇ ಕಾರಣವಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಹೇಳಿದ್ದಾರೆ.
ಇನ್ನು ಆ ಕಾರಿನಲ್ಲಿದ್ದವರು ಸೀಟ್ ಬೆಲ್ಪ್ ಧರಿಸಿರಲಿಲ್ಲ. ಹಾಗಾಗಿ ಅಪಘಾತ ಸಂಭವಿಸಿದಾಗ ಏರ್ ಬ್ಯಾಗ್ ತೆರೆದುಕೊಂಡಿಲ್ಲ. ಅಲ್ಲದೆ ಸ್ಪೀಡೋ ಮೀಟರ್ 147 ಕಿ.ಮೀ.ಗೆ ಸ್ಥಗಿತವಾಗಿದೆ. ರಸ್ತೆಯಲ್ಲಿ ಬ್ರೇಕ್ ಹಾಕಿರುವುದಕ್ಕೆ ಯಾವುದೇ ಕುರುಹು ಇಲ್ಲ. ಆದರಿಂದ ಸ್ಕಾರ್ಪಿಯೋ ಚಾಲಕ ಅತಿವೇಗವಾಗಿ ಚಾಲನೆ ಮಾಡಿರುವುದು ಸ್ಪಷ್ಟವಾಗಿದೆ. ಘಟನೆ ನಡೆದಾಗ ಮಳೆ ಸಹ ಸುರಿಯುತ್ತಿತ್ತು. ಹೀಗಾಗಿ ಡಿವೈಡರ್‌ಗೆ ಕಾರು ಡಿಕ್ಕಿಯಾದ ಕೂಡಲೇ ಚಕ್ರಗಳು ತೇವದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಮತ್ತೊಂದು ರಸ್ತೆಗೆ ನುಗ್ಗಿ ಎಕ್ಸ್‌ಯುವಿ 700ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.