ತಿನಿಸುಗಳಲ್ಲಿ ಡ್ರಗ್ಸ್ ಮಾರುತ್ತಿದ್ದ ಟ್ಯಾಟೋ ಕಲಾವಿದ ಬಂಧನ

| Published : Jan 01 2025, 01:30 AM IST

ಸಾರಾಂಶ

ಸಿಹಿ ಹಾಗೂ ಖಾದ್ಯ ತಿನ್ನಿಸುಗಳ ಪೊಟ್ಟಣಗಳಲ್ಲಿ ಅಡಗಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಚಾಲಾಕಿ ಟ್ಯಾಟೋ ಕಲಾವಿದನೊಬ್ಬನನ್ನು ಸೆರೆ ಹಿಡಿದು 2.5 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಜಪ್ತಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಹಿ ಹಾಗೂ ಖಾದ್ಯ ತಿನ್ನಿಸುಗಳ ಪೊಟ್ಟಣಗಳಲ್ಲಿ ಅಡಗಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಚಾಲಾಕಿ ಟ್ಯಾಟೋ ಕಲಾವಿದನೊಬ್ಬನನ್ನು ಸೆರೆ ಹಿಡಿದು 2.5 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಜಪ್ತಿ ಮಾಡಿದೆ.

ಚೊಕ್ಕನಹಳ್ಳಿಯ ಗೋಯೆಲ್‌ ಫೂಟ್‌ ಪ್ರಿಂಟ್‌ ಅಪಾರ್ಟ್‌ಮೆಂಟ್‌ ನಿವಾಸಿ ರಕ್ಷಿತ್ ರಮೇಶ್ ಬಂಧಿತನಾಗಿದ್ದು, ಆರೋಪಿಯಿಂದ 3.55 ಕೆಜಿ ಹೈಡ್ರೋ ಗಾಂಜಾ, 16.65 ಕೆಜಿ ಗಾಂಜಾ, ಎಲ್‌ಎಸ್‌ಡಿ ಸ್ಟ್ರಿಪ್ಸ್‌ ಹಾಗೂ 130 ಗ್ರಾಂ ಚರಸ್‌ ಸೇರಿದಂತೆ 2.5 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ.

ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಯಲಹಂಕದ ತನವೀಶ್ ಅಲಿಯಾಸ್ ಈಶ್‌ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ಮುಂದುವರೆಸಿದೆ. ಹೊಸ ವರ್ಷದ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆಗೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಸಿಸಿಬಿ ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ವಿದೇಶದಿಂದ ಗಾಂಜಾ ತರಿಸಿ ಮಾರಾಟ:

ತನ್ನ ಕುಟುಂಬದ ಜತೆ ಚೊಕ್ಕನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ರಕ್ಷಿತ್‌, ಸ್ಥಳೀಯವಾಗಿ ಟ್ಯಾಟೋ ಕಲಾವಿದನಾಗಿ ಪರಿಚಿತನಾಗಿದ್ದ. ಸಾಂಸ್ಕೃತಿಕ ಹಾಗೂ ಮದುವೆ, ನಾಮಕರಣ ಹೀಗೆ ಮನೆಗಳಲ್ಲಿ ನಡೆಯುವ ಶುಭ ಕಾರ್ಯಮಗಳಿಗೆ ತೆರಳಿ ಆತ ಟ್ಯಾಟೋ ಹಾಕಿ ಬರುತ್ತಿದ್ದ. ಜನರಿಂದ ಸಹ ಆತನ ಟ್ಯಾಟೋ ಕಲೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಶ್ರೀಮಂತನಾಗಬೇಕೆಂಬ ದುರಾಸೆಗೆ ಬಿದ್ದು ಡ್ರಗ್ಸ್ ಪೆಡ್ಲರ್ ಜತೆ ಕೈ ಜೋಡಿಸಿ ಕಲಾವಿದ ಈಗ ಸೆರೆಮನೆ ಸೇರುವಂತಾಗಿದೆ.

ಯಲಹಂಕದ ತನವೀಶ್‌ ವೃತ್ತಿಪರ ಪೆಡ್ಲರ್ ಆಗಿದ್ದು, ವಿದೇಶದಿಂದ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾ ಹಾಗೂ ಹೊರ ರಾಜ್ಯಗಳಿಂದ ಸಾಧಾರಣ ಗಾಂಜಾವನ್ನು ತರಿಸಿ ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದ. ತನ್ನ ದಂಧೆಗೆ ಹಣದಾಸೆ ತೋರಿಸಿ ರಕ್ಷಿತ್‌ನನ್ನು ಆತ ಸೆಳೆದಿದ್ದ. ಅಂತೆಯೇ ವಿದೇಶದ ಪ್ರವಾಸಕ್ಕೆ ತೆರಳಿ ಚಾಕೋಲೆಟ್‌ ಸೇರಿದಂತೆ ಸಿಹಿ ಹಾಗೂ ಖಾದ್ಯ ತಿನ್ನಿಸುಗಳ ಪೊಟ್ಟಣಗಳಲ್ಲಿ ಹೈಡ್ರೋ ಗಾಂಜಾ ತುಂಬಿ ಕಳ್ಳ ಹಾದಿಯಲ್ಲಿ ನಗರಕ್ಕೆ ಆರೋಪಿಗಳು ಸಾಗಿಸುತ್ತಿದ್ದರು. ಈ ಗಾಂಜಾವನ್ನು ವಿಮಾನದಲ್ಲಿ ತಂದರೆ ಕಸ್ಟಮ್ಸ್‌ ಅಧಿಕಾರಿಗಳಿಗೆ ಸಿಕ್ಕಿಬೀಳುವ ಭಯದಿಂದ ಹಡಗುಗಳ ಮೂಲಕ ಈ ಪೆಡ್ಲರ್‌ಗಳು ಸಾಗಿಸುತ್ತಿದ್ದರು. ಬಹುತೇಕ ಥೈಲ್ಯಾಂಡ್‌ನಿಂದಲೇ ಹೈಡ್ರೋ ಗಾಂಜಾ ಕಳ್ಳ ಹಾದಿಯಲ್ಲಿ ಬಂದಿದೆ. ಆ ದೇಶದಲ್ಲಿ ಮುಕ್ತವಾಗಿ ಹೈಡ್ರೋ ಗಾಂಜಾ ಮಾರಾಟಕ್ಕೆ ಅ‍ವಕಾಶವಿದೆ ಎಂದು ಸಿಸಿಬಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಹೊಸ ವರ್ಷದ ಪಾರ್ಟಿಗೆ:

ಕಳೆದೊಂದು ವರ್ಷದಿಂದ ಹೈಡ್ರೋ ಗಾಂಜಾ ಮಾರಾಟ ದಂಧೆಯಲ್ಲಿ ರಕ್ಷಿತ್ ನಿರತನಾಗಿದ್ದ. ಇತ್ತೀಚಿಗೆ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಡ್ರಗ್ಸ್ ಮಾರಾಟ ಜಾಲದ ಮೇಲೆ ನಿಗಾವಹಿಸಿದ್ದಾಗ ಬಾತ್ಮೀದಾರರಿಂದ ಈತನ ಬಗ್ಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹದ ದಳದ ಇನ್ಸ್‌ಪೆಕ್ಟರ್‌ ಮಹಮ್ಮದ್ ಮುಕ್ರಂರವರಿಗೆ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ರಕ್ಷಿತ್ ಸಿಕ್ಕಿಬಿದ್ದಿದ್ದು, ಆತನ ಸ್ನೇಹಿತ ಗೋವಾಕ್ಕೆ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.