ಮಾಜಿ ಪಾಲಿಕೆ ಸದಸ್ಯೆ ಹತ್ಯೆ ಕೇಸ್: ಏಳು ಜನರಿಗೆ ಜೀವಾವಧಿ ಶಿಕ್ಷೆ

| Published : Jan 01 2025, 01:30 AM IST

ಸಾರಾಂಶ

ಬಿಜೆಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಕಾಟನ್‌ಪೇಟೆಯ ಪೀಟರ್ (46), ಸೂರ್ಯ ಅಲಿಯಾಸ್ ಸೂರಜ್ (20), ಸ್ಟೀಫನ್ (21), ಪುರುಷೋತ್ತಮ್ (22), ಅಜಯ್ (21), ಅರುಣ್‌ಕುಮಾರ್ (36) ಮತ್ತು ಸೆಲ್ವರಾಜ್ ಅಲಿಯಾಸ್ ಬುದಾನ್ (36) ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳು. ಪ್ರಕರಣದ ಮತ್ತೊಬ್ಬ ಆರೋಪಿಯಾದ ರೇಖಾ ಕದಿರೇಶ್ ಅತ್ತಿಗೆ ಮಾಲಾ ಈಗಾಗಲೇ ಮೃತಪಟ್ಟಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ್ದ 71ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರಾದ ಬಾಲಚಂದ್ರ ಎನ್. ಭಟ್ ಅವರು, ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ರೇಖಾ ಕದಿರೇಶ್ ಮತ್ತು ಆಕೆಯ ಅತ್ತಿಗೆ ಮಾಲಾ ನಡುವೆ ಮನಸ್ತಾಪ ಉಂಟಾಗಿತ್ತು. ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ 2021ರ ಜೂ.24ರ ಬೆಳಗ್ಗೆ 10 ಗಂಟೆಯಲ್ಲಿ ಪಕ್ಷದ ಕಚೇರಿ ಬಳಿ ಇಸ್ಕಾನ್‌ನಿಂದ ಬಂದಿದ್ದ ಊಟವನ್ನು ಸಾರ್ವಜನಿಕರಿಗೆ ಹಂಚುತ್ತಿದ್ದ ವೇಳೆ ರೇಖಾ ಕದಿರೇಶ್‌ ಮೇಲೆ ಅಪರಾಧಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೇಖಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಕಾಟನ್‌ಪೇಟೆ ಠಾಣೆ ಅಂದಿನ ಇನ್‌ಸ್ಪೆಕ್ಟರ್ ಚಿದಾನಂದಮೂರ್ತಿ, ತನಿಖೆ ನಡೆಸಿ ಹಂತಕರನ್ನು ಬಂಧಿಸಿ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಸತ್ಯವತಿ ವಾದ ಮಂಡಿಸಿದ್ದರು. 2018ರಲ್ಲಿ ರೇಖಾ ಅವರ ಪತಿ ಕದಿರೇಶ್ ಕೊಲೆ ಸಹ ನಡೆದಿತ್ತು.