ಸಾರಾಂಶ
ಎಚ್.ಡಿ.ಕೋಟೆ : ಜಮೀನು ವಿಚಾರಕ್ಕೆ ಗಲಾಟೆಯಾಗಿ ಅಣ್ಣನ ಕಾಲಿಗೆ ಸ್ವಂತ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣ ತಾಲೂಕಿನ ಗುಂಡತ್ತೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅಭಿಷೇಕ್ ಎಂಬಾತನಿಗೂ ಅಣ್ಣ ಚಲುವರಾಜು ಎಂಬವರೊಂದಿಗೆ ಜಮೀನು ವ್ಯಾಜ್ಯದ ವಿಚಾರವಾಗಿ ಗಲಾಟೆಯಾಗಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಚಲುವರಾಜು ತಮ್ಮ ಅಭಿಷೇಕ್ ಮನೆಯಲ್ಲಿದ್ದ ಬಂದೂಕು ತಂದು ಚಲುವರಾಜುವಿನ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಚಲುವರಾಜು ಎಂಬವರ ಕಾಲಿಗೆ ಗುಂಡು ತಗುಲಿ ಬಲವಾದ ಗಾಯವಾಗಿದೆ. ಕೂಡಲೇ ಅವರನ್ನು ಗ್ರಾಮಸ್ಥರು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದು, ಪ್ರಾಥಮಿಕ ಚಿಕಿತ್ಸೆಯ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಚಾರ ತಿಳಿದ ಕೂಡಲೇ ಅಂತರಸಂತೆ ಪೊಲೀಸ್ ಠಾಣೆಯ ಎಸ್ಐ ಚಂದ್ರಹಾಸ್ ನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ತಮ್ಮ ಅಭಿಷೇಕ್ ನನ್ನು ಬಂಧಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಭಿಷೇಕ್ ವಿರುದ್ಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಭಿಷೇಕ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಸ್ತೆ ಅಪಘಾತ: ಕುಂಭಮೇಳಕ್ಕೆ ತೆರಳಿದ್ದ ಇಬ್ಬರು ಸಾವು
ಮೈಸೂರು : ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿ ಹಿಂದಿರುಗುವ ವೇಳೆ ನಡೆದ ರಸ್ತೆ ಅಪಘಾತದಲ್ಲಿ ನಗರದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಕೆಆರ್‌ಎಸ್ ನಿವಾಸಿ ರಾಮಕೃಷ್ಣ ಶರ್ಮ (31) ಹಾಗೂ ಮರಟೀಕ್ಯಾತನಹಳ್ಳಿ ನಿವಾಸಿ ಅರುಣ್ ಶಾಸ್ತ್ರಿ (33) ಎಂಬವರೇ ಅಪಘಾತದಲ್ಲಿ ಮೃತಪಟ್ಟವರು. ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಕುಂಬ ಮೇಳಕ್ಕೆ ಜ.21 ರಂದು 6 ಮಂದಿ ಕಾರಿನಲ್ಲಿ ತರಳಿದ್ದರು.
ಪ್ರಯಾಗ್‌ನಲ್ಲಿ ಪುಣ್ಯ ಸ್ನಾನ ಮುಗಿಸಿದ ನಂತರ ಅವರು ಕಾಶಿಗೆ ಹೋಗುವವರಿದ್ದರು. ಈ ವೇಳೆ ಮಿರ್ಜಾಪುರದ ಬಳಿ ಲಾರಿ ಮತ್ತು ರಾಮಕೃಷ್ಣ ಶರ್ಮ ಮತ್ತು ಅರುಣ್ ಶಾಸ್ತ್ರಿ ಅವರಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಿಂದಾಗಿ ತಲೆಯ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದ ಇಬ್ಬರನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಉಳಿದ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವಿವಾಹಿತರಾಗಿದ್ದ ರಾಮಕೃಷ್ಣ ಶರ್ಮ ಅವರು ಕೆಆರ್‌ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು. ಮೃತ ಅರುಣ್ ಶಾಸ್ತ್ರಿ ಪುರೋಹಿತರಾಗಿ ಕೆಲಸ ವಾಡುತ್ತಿದ್ದರು. ಇವರಿಗೂ ಮದುವೆ ಆಗಿರಲಿಲ್ಲ.
ಅಲ್ಲಿಯೇ ಅಂತ್ಯಕ್ರಿಯೆ: ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಮೃತರ ಕುಟುಂಬಸ್ಥರು ಮಿರ್ಜಾಪುರಕ್ಕೆ ತೆರಳಿದ್ದಾರೆ. ನಂತರ ಸ್ಥಳೀಯರ ನೆರವಿನೊಂದಿಗೆ ಮೃತರ ಅಂತ್ಯಕ್ರಿಯೆಯನ್ನು ಬುಧವಾರ ಮಿರ್ಜಾಪುರದಲ್ಲಿಯೇ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.