ಯುವಕರ ಮೇಲೆ ಕತ್ತಿ ಬೀಸಿ, ಕಾರು ಗಾಜು ಪುಡಿ ಮಾಡಿದ್ದವ ಸೆರೆ

| Published : Jan 29 2025, 01:32 AM IST

ಯುವಕರ ಮೇಲೆ ಕತ್ತಿ ಬೀಸಿ, ಕಾರು ಗಾಜು ಪುಡಿ ಮಾಡಿದ್ದವ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಟ್ಟ ಸ್ನೇಹಿತರ ಸಹವಾಸ ಬಿಡು ಎಂದು ಗೆಳೆಯನ ತಮ್ಮನಿಗೆ ಬುದ್ಧಿ ಹೇಳಿದ್ದಕ್ಕೆ ರೌಡಿಗಳ ಗುಂಪು ಕಾರಿನ ಗಾಜು ಒಡೆದು ಹಲ್ಲೆ ಮಾಡಿದ್ದಾರೆ. ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಯುವಕರ ಮೇಲೆ ಹಲ್ಲೆ ಮಾಡಿ ಕಾರನ್ನು ಜಖಂಗೊಳಿಸಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಯಂಡಹಳ್ಳಿಯ ವಿಶಾಲ್‌(23) ಬಂಧಿತ. ಆರೋಪಿ ವಿಶಾಲ್‌ ಹಾಗೂ ಈತನ ಸಹಚರರಾದ ಅಪ್ಪು, ಮಂದ, ಮದನ್‌, ಸೂರ್ಯ, ಸಂದೀಪ್‌, ಮನೋಜ್‌ ಜ.26ರಂದು ರಾತ್ರಿ ನಾಯಂಡಹಳ್ಳಿಯ ಸೊಲ್ಲಾಪುರದಮ್ಮ ದೇವಸ್ಥಾನದ ಬಳಿ ಪ್ರಬುದ್ಧ, ನಂದನ್‌, ಮನೋಜ್‌ ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಾರನ್ನು ಜಖಂಗೊಳಿಸಿದ್ದರು.

ಈ ಸಂಬಂಧ ಪ್ರಬುದ್ಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಮತ್ತೋರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ ಐದಾರು ಮಂದಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ದೂರುದಾರ ಪ್ರಬುದ್ಧ ಮತ್ತು ಆರೋಪಿಗಳು ಪರಿಚಿತರು. ಪ್ರಬುದ್ಧ ಈ ಹಿಂದೆ ನಾಯಂಡಹಳ್ಳಿಯಲ್ಲಿ ಕುಟುಂಬದ ಜತೆಗೆ ನೆಲೆಸಿದ್ದ. ಈ ವೇಳೆ ಮನೋಜ್‌, ದರ್ಶನ್‌, ರಾಕೇಶ್‌, ನಂದನ್‌, ವೀರೇಶ್‌, ದುಶ್ಯಂತ್‌ ಪರಿಚಯವಾಗಿ ಸ್ನೇಹಿತರಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪ್ರಬುದ್ಧ ಕುಟುಂಬ ನಾಗರಬಾವಿ ಎರಡನೇ ಹಂತದ ಮಾಳಗಾಳದಲ್ಲಿ ನೆಲೆಸಿದೆ.

ಕ್ಷುಲ್ಲಕ ಕಾರಣಕ್ಕೆ ಗಲಾಟೆ:

ಜ.26ರಂದು ಪ್ರಬುದ್ಧ, ಮನೋಜ್‌, ದರ್ಶನ್‌, ನಂದನ್‌ ಕೆಂಚನಪುರದಲ್ಲಿ ಭೇಟಿಯಾಗಿದ್ದಾರೆ. ದರ್ಶನ್‌ ಕಾರ್ಯ ನಿಮಿತ್ತ ಸ್ನೇಹಿತರ ಕಾರು ಪಡೆದುಕೊಂಡು ಬಂದಿದ್ದ. ಈ ವೇಳೆ ಎಲ್ಲರೂ ಚೆನ್ನಸಂದ್ರಕ್ಕೆ ತೆರಳಿ ಕೆಲಸ ಮುಗಿಸಿಕೊಂಡು ಬಳಿಕ ನಾಯಂಡಹಳ್ಳಿ ಕಡೆಗೆ ಹೊರಟಿದ್ದಾರೆ. ಮಾರ್ಗ ಮಧ್ಯೆ ಪಂತರಪಾಳ್ಯದಲ್ಲಿ ಆರೋಪಿ ಸಂದೀಪ್‌ ಮತ್ತು ಆತನ ಸ್ನೇಹಿತ ರಸ್ತೆಯಲ್ಲಿ ಎದುರಾಗಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಆರೋಪಿ ಸಂದೀಪ್‌ ಮತ್ತು ಮನೋಜ್‌ ನಡುವೆ ಗಲಾಟೆಯಾಗಿದೆ.

ಬಳಿಕ ರಾತ್ರಿ 8.30ಕ್ಕೆ ಪ್ರಬುದ್ಧ ಹಾಗೂ ಸ್ನೇಹಿತರು ನಾಯಂಡಹಳ್ಳಿಗೆ ಬಂದಿದ್ದಾರೆ. ಬಳಿಕ ಪ್ರಬುದ್ಧ, ದರ್ಶನ್‌, ಮನೋಜ್‌ ಹಾಗೂ ನಂದನ್‌ ಸೊಲ್ಲಾಪುರದಮ್ಮ ದೇವಸ್ಥಾನದ ಬಳಿ ಮಾತನಾಡುವಾಗ, ಆರೋಪಿಗಳಾದ ಅಪ್ಪು, ಮದನ್‌, ಸೂರ್ಯ, ಸಂದೀಪ್‌ ಹಾಗೂ ಸಹಚರರು ಬಂದಿದ್ದಾರೆ.

ಮಚ್ಚಿನಿಂದ ಹಲ್ಲೆಗೈದು, ಕಾರು ಧ್ವಂಸ:

ಈ ವೇಳೆ ಆರೋಪಿ ಅಪ್ಪು ನಮ್ಮ ಹುಡುಗರ ಜತೆ ಗಲಾಟೆ ಮಾಡುತ್ತೀರಾ ಎಂದು ಏಕಾಏಕಿ ಕತ್ತಿ ತೆಗೆದು ಪ್ರಬುದ್ಧ ಹಾಗೂ ಆತನ ಸ್ನೇಹಿತರ ಮೇಲೆ ಬೀಸಿದ್ದಾನೆ. ಉಳಿದ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಬಳಿಕ ಪ್ರಬುದ್ಧ ಹಾಗೂ ಸ್ನೇಹಿತರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಈ ವೇಳೆ ಆರೋಪಿಗಳು ಸ್ಥಳದಲ್ಲೇ ಇದ್ದ ಕಾರಿನ ಗಾಜುಗಳನ್ನು ಒಡೆದು ಧ್ವಂಸ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಬುದ್ಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹವಾಸ ಮಾಡಬೇಡ ಎಂದಿದ್ದಕ್ಕೆ ಹಲ್ಲೆ?

ಆರೋಪಿಗಳಾದ ಅಪ್ಪು, ವಿಶಾಲ್‌ ಹಾಗೂ ಸಹಚರರು ಸರಿಯಿಲ್ಲ. ಅವರ ಸಹವಾಸ ಮಾಡಬೇಡ ಎಂದು ಪ್ರಬುದ್ಧ ತನ್ನ ಸ್ನೇಹಿತನ ತಮ್ಮನಿಗೆ ಬುದ್ಧಿವಾದ ಹೇಳಿದ್ದ. ಆದರೆ, ಸ್ನೇಹಿತನ ತಮ್ಮ ಈ ವಿಚಾರವನ್ನು ಆರೋಪಿಗಳ ಬಳಿಯೇ ಹೇಳಿದ್ದ. ಹೀಗಾಗಿ ಆರೋಪಿಗಳು ಪ್ರಬುದ್ಧ ಹಾಗೂ ಆತನ ಸ್ನೇಹಿತರ ಜತೆಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.