ಸಾರಾಂಶ
ಮೊದಲು ವನಿತಾ ನಾನು ಆಪ್ತರು, ಈಗ ವನಿತಾ ಮೇಲೆ ಇಡಿ ಅವರು ದಾಳಿ ನಡೆಸಿದ್ದಾರೆ. ವನಿತಾ ಒಂದಷ್ಟು ಸಾಲವನ್ನೂ ಮಾಡಿಕೊಂಡಿದ್ದಾರೆ. ಸಾಲಗಾರರು ಮತ್ತು ಇಡಿಯಿಂದ ತಪ್ಪಿಸಿಕೊಳ್ಳಲು ವನಿತಾ ಹೀಗೆ ಮಾಡುತ್ತಿದ್ದಾರೆ.
ಮಂಡ್ಯ : ನನ್ನ ವಿರುದ್ಧ ಸುಳ್ಳು ದೂರು ದಾಖಲಾಗುತ್ತಿರುವುದರ ಹಿಂದೆ ವನಿತಾ ಐತಾಳ್ ಇದ್ದಾರೆ. ನನ್ನ ವಿರುದ್ಧ ದೂರು ಕೊಡುವವರಿಗೆ ಫುಡ್, ವಾಹನ, ಏರ್ ಟಿಕೆಟ್, ವಾಸ್ತವ್ಯ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿದ್ದಾರೆ ಎಂದು ಐಶ್ವರ್ಯಗೌಡ ಆರೋಪಿಸಿದರು.
ಮೊದಲು ವನಿತಾ ನಾನು ಆಪ್ತರು, ಈಗ ವನಿತಾ ಮೇಲೆ ಇಡಿ ಅವರು ದಾಳಿ ನಡೆಸಿದ್ದಾರೆ. ವನಿತಾ ಒಂದಷ್ಟು ಸಾಲವನ್ನೂ ಮಾಡಿಕೊಂಡಿದ್ದಾರೆ. ಸಾಲಗಾರರು ಮತ್ತು ಇಡಿಯಿಂದ ತಪ್ಪಿಸಿಕೊಳ್ಳಲು ವನಿತಾ ಹೀಗೆ ಮಾಡುತ್ತಿದ್ದಾರೆ. ವನಿತಾ ಜೊತೆಗೆ ಬೇರೆ ಬೇರೆಯವರ ಕೈವಾಡವೂ ಇದೆ. ಸೋನು ಲಂಬಾಣಿ ಎಂಬ ವ್ಯಕ್ತಿಯನ್ನೇ ನಾನು ನೋಡಿಲ್ಲ. ನಾನು ದುಡ್ಡು ಕೊಡಬೇಕು ಎಂದೆಲ್ಲಾ ಧೈರ್ಯವಾಗಿ ಮಾತನಾಡುತ್ತಾರೆ. ಅವರು ಬಂದು ನನ್ನ ಮೇಲೆ ದೂರು ಕೊಡಲಿ. ಸೋನು ಲಂಬಾಣಿಯನ್ನು ನಾನು ನನ್ನ ಕುಟುಂಬದವರು ಯಾರೂ ಸಹ ನೋಡಿಲ್ಲ ಎಂದು ಸ್ಪಷ್ಟಪಡಿಸಿದರು.
ವನಿತಾನೇ ನನ್ನ ವಿರುದ್ಧ ಹೋಗಿ ದೂರು ಕೊಡಿ ಎಂದು ಪ್ರಚೋದಿಸುತ್ತಿದ್ದಾರೆ. ವನಿತಾ ಹಿಂದೆ ಯಾರೋ ಒಬ್ಬರು ಇದ್ದಾರೆ. ಯಾರು ಅವರು ಎಂಬುದು ಮುಂದೆ ಗೊತ್ತಾಗುತ್ತೆ. ಸೆಂಟ್ರಲ್ ಮಿನಿಸ್ಟರ್ ಕೈವಾಡ ಏನೂಂತ ಮುಂದೆ ಗೊತ್ತಾಗಲಿದೆ. ಈಗ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.
ನಾನು ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ನೋಡಿರೋದು ದೃಶ್ಯಮಾಧ್ಯಮದಲ್ಲಿ ಮಾತ್ರ. ನಾನು ಅವರನ್ನು ನೇರವಾಗಿ ನೋಡಿಲ್ಲ. ಈ ಹಿಂದೆ ನಾನು ಯಾವ ರಾಜಕಾರಣಿ ಹೆಸರನ್ನೂ ಬಳಸಿಲ್ಲ. ಮುಂದೆ ಬಳಸುವುದು ಇಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅವರ ಮಗ, ಹೆಂಡತಿಗೂ ನನಗೂ ಯಾವ ಸಂಬಂಧವೂ ಇಲ್ಲ. ಪ್ರಕರಣವನ್ನು ಜೀವಂತವಾಗಿಡಲು ದೂರುದಾರರು ಅವರ ಹೆಸರನ್ನೆಲ್ಲಾ ಬಳಸುತ್ತಿದ್ದಾರೆ ಎಂದು ಟೀಕಿಸಿದರು.