ಸಾರಾಂಶ
ಹಣ ಮತ್ತು ಚಿನ್ನಾಭರಣ ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ ಅವರನ್ನು ಸೈಬರ್ ಕ್ರೈಂ ಪೊಲೀಸರು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದರು.
ಮಂಡ್ಯ : ಹಣ ಮತ್ತು ಚಿನ್ನಾಭರಣ ವಂಚನೆ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ ಅವರನ್ನು ಸೈಬರ್ ಕ್ರೈಂ ಪೊಲೀಸರು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದರು.
ವಿಚಾರಣೆ ಎದುರಿಸಿದ ಬಳಿಕ ಮಾತನಾಡಿದ ಐಶ್ವರ್ಯಗೌಡ, ಮಂಡ್ಯದಲ್ಲಿ ನನ್ನ ವಿರುದ್ಧ ಸುಳ್ಳು ದೂರು ದಾಖಲಾಗಿದೆ. ಅದರ ವಿಚಾರಣೆಗೆ ಪೊಲೀಸರು ಕರೆದಿದ್ದರು. ಅದಕ್ಕೆ ಬಂದಿದ್ದೇನೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ್ದೇನೆ. ಮತ್ತೊಂದು ದಿನ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿದ್ದಾರೆ. ಅಂದೂ ಕೂಡ ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸುತ್ತೇನೆ ಎಂದರು.
ನನ್ನ ವಿರುದ್ಧ ದೂರು ಕೊಟ್ಟವರಲ್ಲಿ ಕೆಲವರು ನನಗೆ ಗೊತ್ತೇ ಇಲ್ಲ. ಕೆಲವರ ಹೆಸರು ಕೇಳಿಲ್ಲ, ಕೆಲವರ ಮುಖವನ್ನೂ ಸಹ ನೋಡಿಲ್ಲ. ಇದರ ಬಗ್ಗೆ ನಾನು ಮುಂದೆ ನ್ಯಾಯಾಲಯದಲ್ಲಿ ಉತ್ತರ ಕೊಡುತ್ತೇನೆ. ರವಿಕುಮಾರ್, ಪೂರ್ಣಿಮಾ ಪರಿಚಯ ಇದ್ದಾರೆ. ನನ್ನ ಅವರ ಮಧ್ಯ ಯಾವುದೇ ವ್ಯವಹಾರ ನಡೆದಿಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾನು ಕೊಡುವುದಾಗಿ ಸ್ಪಷ್ಟಪಡಿಸಿದರು.
ನನ್ನ ವಿರುದ್ಧ ದೂರು ಕೊಡುವವರಿಗೆ ರಕ್ಷಣೆ ಇದೆ. ನನಗೆ ಯಾವುದೇ ರಕ್ಷಣೆ ಇಲ್ಲ. ನಾನು ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ಮಾಡಿಕೊಂಡಿಲ್ಲ. ನಾನು ಯಾರೂಂತ ಗೊತ್ತಿಲ್ಲದ್ದವರು ದೂರು ಕೊಟ್ಟರೆ ಎಫ್‌ಐಆರ್ ಆಗುತ್ತೆ ಎಂದು ದೂರಿದರು.
ಶನಿವಾರ ಮಧ್ಯಾಹ್ನ 1.30ರಿಂದ ಸಂಜೆ 6.30 ಗಂಟೆವರೆಗೆ ನಿರಂತರ ವಿಚಾರಣೆ ಎದುರಿಸಿದ ಐಶ್ವರ್ಯಗೌಡ ಮತ್ತು ಪತಿ ಹರೀಶ್ ನಂತರ ಇಬ್ಬರು ವಕೀಲರೊಂದಿಗೆ ಹೊರಬಂದು ತೆರಳಿದರು.